ಪ್ರಧಾನಿ, ಸೋನಿಯಾ ಮತ್ತು ಕರುಣಾನಿಧಿ ವಿರುದ್ಧ ದೂರು
ನವದೆಹಲಿ, ಸೆಪ್ಟೆಂಬರ್ 22 : ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತ.ನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತಿತರರ ವಿರುದ್ಧ ಫೈರ್ ಬ್ರಾಂಡ್ ನಾಯಕಿ ಉಮಾ ಭಾರತಿ ಶನಿವಾರ ದೂರು ದಾಖಲಿಸಿದ್ದಾರೆ.
ಪಾರ್ಲಿಮೆಂಟ್ ಬೀದಿಯ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಪ್ರಧಾನಿ, ಸೋನಿಯಾ ಮತ್ತು ಕರುಣಾ ನಿಧಿ ಜೊತೆಗೆ ಕಾನೂನು ಸಚಿವ ಹೆಚ್.ಆರ್.ಭಾರಧ್ವಜ್, ಸಂಸ್ಕೃತಿ ಸಚಿವೆ ಅಭಿಕಾ ಸೋನಿ ಮತ್ತು ಸಚಿವ ಟಿ.ಆರ್.ಬಾಲು ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಮಸೇತು ಯೋಜನೆಗೆ ಸಂಬಂಧಿಸಿದಂತೆ ಹಿಂದೂಗಳ ಮನಸ್ಸಿಗೆ ನೋವಾಗುವಂತೆ ಈ ವ್ಯಕ್ತಿಗಳು ವರ್ತಿಸಿದ್ದಾರೆ. ಸುಪ್ರಿಂ ಕೋರ್ಟ್ ಗೆ ರಾಮನ ಅಸ್ತಿತ್ವ ಸುಳ್ಳೆಂಬ ಪ್ರಮಾಣ ಪತ್ರ ಸಲ್ಲಿಸಲು ಮುಂದಾಗಿದ್ದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರುಣಾನಿಧಿ ಅವರು ರಾಮನಿಗೆ ಅವಮಾನವಾಗುವಂತೆ ತಮ್ಮ ಭಾಷೆಯನ್ನು ಬಳಿಸಿದ್ದಾರೆ. ಸೂಕ್ಷ್ಮ ಮನಸ್ಸಿನ ಹಿಂದೂ ಸಮುದಾಯಕ್ಕೆ ಇದರಿಂದ ಘಾಸಿಯಾಗಿದೆ ಎಂದು ಉಮಾ ದೂರಿನಲ್ಲಿ ಹೇಳಿದ್ದಾರೆ.
ದೂರು ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ನಾನು ಹಿಂದೂ. ನನ್ನ ಮನಸ್ಸಿಗೆ ನೋವಾಗಿದೆ. ಹೀಗಾಗಿ ನಾನ್ಯಾಕೆ ದೂರು ದಾಖಲಿಸಬಾರದು ಎಂದು ಪ್ರಶ್ನಿಸಿದರು. ಮುಂದಿನ ಹದಿನೈದು ದಿನಗಳ ಒಳಗಾಗಿ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ, ಗೃಹ ಸಚಿವರಿಗೆ ಘೇರಾವ್ ಹಾಕುತ್ತೇವೆ ಎಂದು ಉಮಾ ಭಾರತಿ ಈ ಸಂದರ್ಭದಲ್ಲಿ ಎಚ್ಚರಿಸಿದರು. ಬಿಜೆಪಿಯಿಂದ ಉಚ್ಛಾಟಿತರಾಗಿರುವ ಉಮಾಭಾರತಿ, ಈಗ ಭಾರತೀಯ ಜನಶಕ್ತಿ ಪಕ್ಷದ ನಾಯಕಿ.
ಮತ್ತೊಂದು ರಥಯಾತ್ರೆ : ವಸ್ತು ಸ್ಥಿತಿಯನ್ನು ಜನರ ಮುಂದಿಡಲು ಮತ್ತೊಂದು ಸಲ ರಥಯಾತ್ರೆಯನ್ನು ದೇಶದೆಲ್ಲೆಡೆ ಮಾಡುವುದಾಗಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಶನಿವಾರ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications