ಚುನಾವಣೆ ಕಣದಲ್ಲಿ ಹಿಂದೂಸೇನೆಯ 118 ಕಾರ್ಯಕರ್ತರು
ಬಿಜಾಪುರ , ಸೆಪ್ಟೆಂಬರ್ 22 : ಈ ಸಲದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದೂ ಸೇನಾ ಸದಸ್ಯರೂ ಕಣದಲ್ಲಿದ್ದಾರೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 118 ಸದಸ್ಯರು ಕಣದಲ್ಲಿದ್ದಾರೆ ಎಂದು ರಾಜ್ಯ ಹಿಂದೂ ಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಯಶಸ್ಸನ್ನು ಪಡೆಯುತ್ತಾರೆ. ನಮ್ಮ ಪಕ್ಷವನ್ನು ಗೆಲ್ಲಿಸಿದರೆ,ಕುಡಿಯುವ ನೀರಿಗೆ ಒತ್ತು ನೀಡುತ್ತೇವೆ ಎಂದರು.
ಕರುಣಾನಿಧಿ ಅವರ ರಾಮಸೇತು ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಕೂಡಲೇ ಕರುಣಾನಿಧಿ ತಮ್ಮ ಹೇಳಿಕೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ಹಿಂದೂ ಸೇನಾ ಉಗ್ರ ಹೋರಾಟ ನಡೆಸಲಿದೆ. ರಾಮನ ಬಗ್ಗೆ ಲಘುವಾಗಿ ಮಾತನಾಡಿರುವ ಕರುಣಾನಿಧಿ, ಹಿಂದೂಗಳ ಮನಸ್ಸನ್ನು ನೋಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪೇಜಾವರ ಶ್ರೀಗಳ ಸವಾಲ್ : ರಾಮನ ಅಸ್ತಿತ್ವ ಮತ್ತು ರಾಮಸೇತು ಬಗ್ಗೆ ಸಾರ್ವಜನಿಕ ಚರ್ಚೆಗೆ ನಾವು ಸಿದ್ಧರಿದ್ದೇವೆ. ಕರುಣಾನಿಧಿ ವೇದಿಕೆಯಲ್ಲಿ ಕುಳಿತು ತಮ್ಮ ವಾದ ಮಂಡಿಸಲಿ. ನಾವು ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications