ರಾಜ್ಯದ ಯುವ ಶಾಸಕರೊಂದಿಗೆ ವಿದ್ಯಾರ್ಥಿಗಳ ಸಂವಾದ
ಬೆಂಗಳೂರು : ‘ಶಾಸಕರು ಮತ್ತು ಯುವಕರು-ಒಂದು ಮುಖಾಮುಖಿ’ ಎಂಬ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ನಡೆಯಿತು.
ವಿವೇಕಯುಗ ಫೌಂಡೇಶನ್ ಹಾಗೂ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿ ಮಹಿಮ ಜೆ. ಪಟೇಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಚಿಂತಿಸುವ ಜವಾಬ್ದಾರಿ ಪ್ರತಿಯಾಬ್ಬನ ಮೇಲಿದೆ. ಪೂರಕ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಸೇವಾಮನೋಭಾವನೆಯಿಂದ ಕೆಲಸಮಾಡಬೇಕು. ನಾನು ಮತ್ತು ನನ್ನದು ಎನ್ನುವ ಸ್ವಾರ್ಥ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನಾವೆಲ್ಲರೂ ನಮ್ಮವರೆಲ್ಲರಿಗಾಗಿ ಎನ್ನುವ ಭಾವನೆ ಬೆಳೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳೂ ಕುಲುಷಿತಗೊಂಡಿವೆ. ರಾಜಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಎಲ್ಲಾ ಕ್ಷೇತ್ರಗಳೂ ಸಮಾಜ ಮುಖಿಯಾಗಿ ಬದಲಾಗಲು ಸ್ವಾಭಿಮಾನವನ್ನು ಜಾಗೃತಗೊಳಿಸುವಂತಹ ಶಿಕ್ಷಣದ ಅವಶ್ಯಕತೆ ಇದೆ. ಈ ದೇಶದ ಪ್ರತಿಯಾಬ್ಬ ಪ್ರಜೆಗೂ ಒಂದೇ ಕಾನೂನು, ಒಂದೇ ಸಂವಿಧಾನ ಇರಬೇಕು ಎಂದು ಹೇಳಿದರು.
ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್, ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ವಿವೇಕಯಗ ಫೌಂಡೇಶನ್ ಪ್ರಕಟಿಸಿರುವ ‘ವಿವೇಕಯುಗ’ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಶಾಸಕರ ನಡುವಿನ ಸಂವಾದ ಸುಮಾರು ಒಂದು ಗಂಟೆಗಿಂತಲೂ ಹೆಚ್ಚುಕಾಲ ನಡೆಯಿತು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ವೂಡೆ ಪಿ. ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವೇಕಯುಗ ಫೌಂಡೇಶನ್ ಅಧ್ಯಕ್ಷ ಡಿ.ಎಂ.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಎಂ.ರವೀಂದ್ರ ನಿರೂಪಿಸಿದರು. ಪ್ರಾಚಾರ್ಯ ಡಾ.ಎಂ.ಪ್ರಕಾಶ್ ವಂದಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications