1984ರ ಸಿಖ್ ಹತ್ಯಾಕಾಂಡ: ಮೂವರಿಗೆ ಜೀವಾವಧಿ ಶಿಕ್ಷೆ
ನವದೆಹಲಿ : ದಿವಂಗತ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಂತರ ಸಿಖ್ಖರ ಮೇಲೆ ದೌರ್ಜನ್ಯ ನಡೆದಿತ್ತು. ಈ ಪ್ರಕರಣದ ಮೂವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಿಧಾನವಾದರೂ ನ್ಯಾಯ ಹೊರಬಿದ್ದಿದೆ.
1984ರಲ್ಲಿ ನಡೆದ ಸಿಖ್ಖರ ಹತ್ಯಾಕಾಂಡದಲ್ಲಿ ಈ ಆರೋಪಿಗಳ ಪಾತ್ರ ಋಜುವಾತಾಗಿರುವ ಕಾರಣ, ದೆಹಲಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಹರಿಪ್ರಸಾದ್ ಭರದ್ವಾಜ್, ಆರ್ .ಪಿ. ತಿವಾರಿ ಹಾಗೂ ಜಗದೀಶ್ ಗಿರಿ ಎಂಬ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸಿಖ್‌ರ ಪರ ವಕೀಲರು ಮಾಡಿದ ಮನವಿಯನ್ನು, ನ್ಯಾಯಾಲಯ ತಳ್ಳಿ ಹಾಕಿದೆ.
ಹಿನ್ನೆಲೆ : ಇಂದಿರಾಗಾಂಧಿ ಹತ್ಯೆ ನಂತರ ದೆಹಲಿಯಲ್ಲಿ ದುಷ್ಕರ್ಮಿಗಳು, ಸಿಖ್ಖರನ್ನು ಕಂಡಕಂಡಲ್ಲಿ ಹಿಡಿದು ಕೊಲ್ಲುತ್ತಿದ್ದರು. ಈ ದೊಂಬಿಯಲ್ಲಿ ಸಿಕ್ಕ ನಿರಂಜನ್ ಸಿಂಗ್ ಎಂಬಾತನ ಕುಟುಂಬದ ಮೂವರನ್ನು ಹತ್ಯೆಗೈದವರು, ಮೇಲ್ಕಂಡ ಪ್ರಕರಣದ ಆರೋಪಿಗಳು.
ಸಿಖ್ ಸಮುದಾಯಕ್ಕೆ ಸೇರಿದ ಸುಮಾರು 300ಕ್ಕೂ ಅಧಿಕ ಜನರನ್ನು ಆ ಸಂದರ್ಭದಲ್ಲಿ ಹತ್ಯೆಗೈಯಲಾಗಿತ್ತು. ಇದರ ವಿಚಾರಣೆಗೆ ಬ್ಯಾನರ್ಜಿ ಸಮಿತಿ ಹಾಗೂ ನಂತರ ನಾನಾವತಿ ಆಯೋಗವನ್ನು ನಿಯೋಜಿಸಲಾಗಿತ್ತು.
ಕಾಂಗ್ರೆಸ್ ಮುಖಂಡರಾದ ಹೆಚ್‌ಕೆಎಲ್ ಭಗತ್, ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಅವರನ್ನು ಆರೋಪಿಗಳೆಂದು ನಾನಾವತಿ ಆಯೋಗ ಗುರುತಿಸಿ, ಸಿಖ್ ಸಮುದಾಯಕ್ಕೆ ಪರಿಹಾರ ಧನದ ರೂಪದಲ್ಲಿ 715 ಕೋಟಿ ರೂ. ನೀಡಬೇಕೆಂದು ಆದೇಶಿಸಿತ್ತು.
ಆದರೆ ಸಂಸದ ಸಜ್ಜನ್ ಕುಮಾರ್ ಸೇರಿದಂತೆ 6 ಜನ ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಕೇಸಿನಿಂದ ತಪ್ಪಿಸಿಕೊಂಡದ್ದು ಇಲ್ಲಿ ಉಲ್ಲೇಖನೀಯ.
(ಏಜನ್ಸೀಸ್)












Click it and Unblock the Notifications