ಬೆಂಗಳೂರಲ್ಲಿ 70 ಸಾವಿರ ರು.ಗೆ ಮಗು ಬಿಕರಿ, ಐವರ ಬಂಧನ
ಬೆಂಗಳೂರಲ್ಲಿ 70 ಸಾವಿರ ರು.ಗೆ ಮಗು ಬಿಕರಿ, ಐವರ ಬಂಧನ
ಐಡಿಯಲ್ ನರ್ಸಿಂಗ್ ಹೋಂನ ಡಾ.ಸುಧೀರ್ ವೀಣೇಕರ್ ಪ್ರಮುಖ ಆರೋಪಿ
ಅದೇ ನರ್ಸಿಂಗ್ ಹೋಂನ ಸ್ವಾಗತಕಾರಿಣಿ ಗ್ಲೋರಿ (40), ಈಕೆಯ ಸ್ನೇಹಿತೆ ಎಂ.ಎಸ್.ನಗರದ ಸರಳಾ (30), ಇವರ ಮನೆಕೆಲಸದವಳಾದ ಸಾವಿತ್ರಮ್ಮ (45) ಹಾಗೂ ನರ್ಸಿಂಗ್ ಹೋಂನ ಆಡಳಿತಾಧಿಕಾರಿ ಮೆರ್ಸಿ ಫರ್ನಾಂಡಿಸ್- ಇವರು ಬಂಧಿತರಾಗಿರುವ ಇತರೆ ಆರೋಪಿಗಳು.
ಹೊಸದಾಗಿ ಹುಟ್ಟಿದ ಹೆಣ್ಣು ಮಗುವೊಂದನ್ನು ಚೆನ್ನೈನಿಂದ ತಂದು ಬೆಂಗಳೂರಿನ ಸುರೇಶ್ ಎಂಬವರಿಗೆ 70 ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಡಾ.ಸುಧೀರ್ ವೀಣೇಕರ್ ಅವರನ್ನು ಹಿಡಿದರು. ಆನಂತರ ಇತರೆ ಆರೋಪಿಗಳನ್ನು ಬಂಧಿಸಲಾಯಿತು.
ಸುರೇಶ್ ನಿಜವಾಗಿ ಮಗು ಕೊಳ್ಳುವ ಆಸಾಮಿಯಾಗಿರಲಿಲ್ಲ. ಆತ ಪೊಲೀಸ್ ಮಾಹಿತಿದಾರ. ಸುಧೀರ್ ವೀಣೇಕರ್ ಅವರು ಮಕ್ಕಳ ಮಾರಾಟದ ದಂಧೆಯಲ್ಲಿ ನಿರತರಾಗಿರುವುದನ್ನು ಬಯಲಿಗೆಳೆಯಲು ಸುರೇಶ್ ಗಿರಾಕಿಯಂತೆ ನಟಿಸಿದರು. 20 ಸಾವಿರ ರುಪಾಯಿ ಮುಂಗಡ ಹಣ ಕೊಟ್ಟು, ಚೆನ್ನೈನಿಂದ ತಂದ ಮಗು ತಮ್ಮದೇ ಎಂದು ಸುರೇಶ್ ನಕಲಿ ಜನನ ಪ್ರಮಾಣ ಪತ್ರ ಕೂಡ ಬರೆಸಿಕೊಂಡರು. ಸೋಮವಾರ (ಜು.27) ಇದ್ದಕ್ಕಿದ್ದಂತೆ ನರ್ಸಿಂಗ್ ಹೋಂನ ಮೆರ್ಸಿ ಫೋನ್ ಮಾಡಿ, ನೀವು ಮಗು ಬೇಕೆಂದಿದ್ದರಲ್ಲ. ಇಲ್ಲಿದೆ. 70 ಸಾವಿರ ರುಪಾಯಿ ತಂದರೆ ಸಿಗುತ್ತದೆ ಅಂತ ಹೇಳಿದ್ದಾರೆ.
ಪೊಲೀಸರಿಗೆ ಮಾಹಿತಿ ಕೊಟ್ಟು ಬಂದಿದ್ದ ಸುರೇಶ್, ಗಿರಾಕಿಯಂತೆ ನಟಿಸಿ, ಮಗುವನ್ನು ಪಡೆಯುವ ಸಂದರ್ಭದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರು. ಚೆನ್ನೈನ ಹೆಂಗಸೊಬ್ಬರಿಗೆ ಮೂರನೇ ಮಗುವೂ ಹೆಣ್ಣಾಗಿ ಹುಟ್ಟಿತು. ಹೀಗಾಗಿ ಅವರು ಮಗುವನ್ನು ಮಾರುವ ಮನಸ್ಸು ಮಾಡಿದರು ಎಂದು ಬಂಧಿತರು ಪೊಲೀಸರಿಗೆ ಹೇಳಿದರು.
ಆರೋಪಿಗಳು ಇನ್ನಷ್ಟು ಮಕ್ಕಳನ್ನು ಮಾರಿರುವ ಶಂಕೆಯಿದ್ದು, ವಿಚಾರಣೆ ಮುಂದುವರೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications