ಅಕೌಂಟಿಗೆ 50000...
ಅಕೌಂಟಿಗೆ 50000...$ ದುಡ್ಡು ಹಾಕ್ತೀನಿ ಅಂತ ಇ-ಮೇಲ್ ಬಂತ?
ಅದೊಂದು ದೊಡ್ಡ ಸ್ಕ್ಯಾಮು, ಬಲೆಗೆ ಬಿದ್ದೀರಿ ಜೋಕೆ
ನಿಮಗೂ ಅಂಥದೊಂದು ಇ- ಮೇಲ್ ಬಂದಿರಬಹುದು. ಒಂದೊಂದು ಇ- ಮೇಲ್‌ನಲ್ಲೂ ಬೇರೆ ಬೇರೆ ಕಥೆಗಳು. ಅದನ್ನು ಓದಿ ನಿಮ್ಮ ಮನಸ್ಸಲ್ಲೂ ಹಣಕ್ಕಾಗಿ ಜೊಲ್ಲು ಹರಿದಿರಬಹುದು. ಇನ್ನೂ ನಿಮ್ಮ ಅಕೌಂಟ್ ನಂಬರನ್ನು ಆ ಇ- ಮೇಲ್‌ಗೆ ಕಳಿಸದಿದ್ದರೆ ನೀವು ಬಚಾವು. ಇಲ್ಲವಾದರೆ ನಿಮ್ಮ ಅಕೌಂಟಿನ ಹಣವನ್ನು ಆ ಅನಾಮಧೇಯ ನುಂಗಿ ನೀರು ಕುಡಿಯುವ ಅಪಾಯವಿದೆ.
ಇದೊಂದು ಥರ ಹಣದ ಹಿಪ್ನಾಟಿಸಂ : ಮೊದಲೊಂದು ದೊಡ್ಡ ಆಮಿಷದ ಬಲೆ. ಅದರಲ್ಲಿ ನೀವು ಸಿಲುಕಲೇ ಬೇಕಾದಂಥ ಸೆಳಕು. ಸಿಕ್ಕ ನಂತರ ನಿಮ್ಮದೊಂದಿಷ್ಟು ಹಣ ಕಳಿಸಿರೆಂಬ ಬುಲಾವು. ಕೊಟ್ಟರೆ ನೀವು ಕೊಡಂಗಿ. ಆ ಇಸಕೊಂಡೋನು ಈರಭದ್ರ, ಇನ್ನಾದರೂ ಹುಷಾರಾಗಿ, ಭದ್ರ !
ಚೆನ್ನೈನಲ್ಲಿ ಇಂಥ ಇ- ಮೇಲ್‌ಗಳ ಹಾವಳಿಯಿಂದ ಬಚಾವಾಗಿರಿ ಅಂತ ಹೇಳೋಕೆ ಚೆನ್ನೈನ ಕ್ಯಾಲಿಬರ್ ಪ್ಲಸ್ ಎಂಬ ಇಂಟರ್ನೆಟ್ ಕಂಪನಿಯಾಂದರ ಸಿಇಓ ಎಂ.ಜಯಶಂಕರ್ ಎಂಬುವರು ಇತ್ತೀಚೆಗೆ ಸುದ್ದಿಗೋಷ್ಠಿಯಾಂದನ್ನು ನಡೆಸಿದರು. ‘ನೈಜೀರಿಯಾ- 419’ ಎಂಬ ಇಂಟರ್ನೆಟ್ ಸ್ಕ್ಯಾಮಿಗೆ 30 ಭಾರತೀಯರು ಈಗಾಗಲೇ ಬಲಿಪಶುಗಳಾದದ್ದನ್ನು ಜಯಶಂಕರ್ ಬಿಡಿಸಿ ಹೇಳಿದರು. ತನ್ನ ಅಕೌಂಟಿಗೆ ಭಾರೀ ಮೊತ್ತದ ಹಣ ಕಳಿಸುತ್ತಾರೆ ಎಂಬ ಕುರುಡು ನಂಬಿಕೆಯಲ್ಲಿ ಹಾಂಗ್‌ಕಾಂಗ್‌ಗೆ ಇವರೆಲ್ಲ ಹಣ ಕಳುಹಿಸಿ ಈಗ ಗೋಳಿಡುತ್ತಿದ್ದಾರೆ.
ಜಯಶಂಕರ್ ಪ್ರಕಾರ ಇಂಟರ್ನೆಟ್ ಸಂಪರ್ಕದಲ್ಲಿರುವ ಜಗತ್ತಿನ ಯಾವುದೇ ಕಂಪ್ಯೂಟರ್‌ಗೆ ಕೇವಲ 48 ಗಂಟೆಗಳಲ್ಲಿ ಇ- ಮೇಲ್ ಕಳಿಸಬಹುದು. ನೀವು ಜಾರ್ಜ್ ಬುಷ್ ಕಂಪ್ಯೂಟರ್‌ಗೇ ನುಗ್ಗಲು ಸಾಧ್ಯವಿದೆಯಾ ಎಂಬ ಪ್ರಶ್ನೆಗೆ, ‘ಆತನ ಸಿಸ್ಟಂ 48 ಗಂಟೆಗಳ ಕಾಲ ಇಂಟರ್ನೆಟ್ ಸಂಪರ್ಕದಲ್ಲಿದ್ದರೆ ಅದನ್ನು ಮಾಡಿ ತೋರಿಸಲೂ ರೆಡಿ’ ಎಂದು ಸವಾಲೆಸೆದರು.
ಶೈಶಾವಸ್ಥೆಯಲ್ಲಿರುವ ಸೈಬರ್ ಪೊಲೀಸ್ ಠಾಣೆಗಳು ಇಂಥಾ ಹಗಲು ದರೋಡೆಕೋರರ ಇ- ಮೇಲ್‌ಗಳನ್ನು ಪತ್ತೆ ಹಚ್ಚಿ ಕಾರ್ಪೊರೇಟಿಗರು ಹಣ ಕಳಕೊಳ್ಳೋದನ್ನು ಯಾವಾಗ ತಪ್ಪಿಸುತ್ತಾರೋ? ಚೆನ್ನೈ ಪೊಲೀಸರೇನೋ ಚುರುಕಾಗಿದ್ದಾರೆ. ಅಲ್ಲಿ ಈ ಪ್ರಕರಣಗಳ ತನಿಖೆ ಸಿಬಿಐಗೆ ಹಸ್ತಾಂತರವಾಗಿದೆ. ಬೆಂಗಳೂರು ಪೊಲೀಸರು ಏನಂತಾರೋ?
(ಏಜನ್ಸೀಸ್)
ನಿಮ್ಮಲ್ಲೂ ಇಂಥ ಅನುಭವಗಳಿವೆಯಾ ? ಬರೆಯಿರಿ..
ಮುಖಪುಟ / ಐಟಿ - ಬಿಟಿ












Click it and Unblock the Notifications