ಪಿಸಿ ಎಕ್ಸ್‌ಪೋದಲ್ಲಿ ‘ಸಿಂಪ್ಯೂಟರ್‌ ವಂಡರ್‌’

  • ಎಸ್‌.ಆರ್‌.ರಾಮಕೃಷ್ಣ, ಬೆಂಗಳೂರು
    [email protected]
Simputerಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 8ನೇ ತಾರೀಕು ಶುರುವಾಗಿರುವ ಕಂಪ್ಯೂಟರ್‌ ಹಪಾಹಪಿಗಳ ಚಿಲಿಪಿಲಿಗೆ ಮೇ 12 ಕೊನೆದಿನ. ಅದರ ಹೆಸರು ‘ಪಿಸಿ ಎಕ್ಸ್‌ಪೋ’. ಅಲ್ಲಿನ ಕನಿಷ್ಠ ಮೂರು ಅಂಗಡಿಗಳಲ್ಲಿ ಸಿಂಪ್ಯೂಟರ್‌ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಅಂಗೈ ಅಗಲದ ಈ ಪುಟ್ಟ ವಂಡರ್‌ನ ಬಗ್ಗೆ ಬಿಇಎಲ್‌ ಅಧಿಕಾರಿಗಳು ಸುಲಿದ ಬಾಳೆಯ ಹಣ್ಣಿನಂದದಿ ಬಿಚ್ಚಿಡುವ ಮಾಹಿತಿ ಸರಳ ಹಾಗೂ ವೇದ್ಯ. ಯಾವುದೋ ಪುಟ್ಟ ನೋಟ್‌ ಪ್ಯಾಡಿನಂತಿರುವ ಈ ಸಿಂಪ್ಯೂಟರಲ್ಲಿ ಬರೆಯಬಹುದು, ಇ- ಮೇಲ್‌ ಓದಿ ಉತ್ತರ ಕಳಿಸಬಹುದು, ಸಂಗೀತ ಕೇಳಬಹುದು, ಪ್ರೋಗ್ರಾಂ ಕೂಡ ಬರೆವುದು ಸಾಧ್ಯ.

ಬಿಇಎಲ್‌ ಅಂಗಡಿಯಿಂದ ತುಸು ದೂರದಲ್ಲೇ ಬಿಇಎಲ್‌- ಪಿಕೋಪೆಟ ಮಳಿಗೆಯಿದೆ. ಅಲ್ಲಿನ ಅಧಿಕಾರಿಗಳು ಕಿಂಚಿತ್ತೂ ದಣಿಯದೆ ಕೇಳುಗರ ಪ್ರಶ್ನೆಗಳಿಗೆ ಪಟಪಟನೆ ಉತ್ತರ ಕೊಡುವ ಪರಿಯೇ ಸೊಗಸು. ಅವರಿಗೆ ಮಹಾತ್ಮ ಗಾಂಧಿಯೇ ಮಾದರಿ. ಸಿಂಪ್ಯೂಟರ್‌ ಯೋಜನೆಗೆ ಪ್ರೇರಕ ಶಕ್ತಿಯೇ ಗಾಂಧೀಜಿಯವರ ತತ್ತ್ವ. ಮಾಹಿತಿ ತಂತ್ರಜ್ಞಾನವನ್ನು ಹಳ್ಳಿಗರತ್ತ ಕೊಂಡೊಯ್ಯಬೇಕೆಂಬ ಉಮೇದಿಯ ಸ್ವದೇಶೀ ಯತ್ನ ಎನ್ನುತ್ತಾರವರು. ಈ ಸಿಂಪ್ಯೂಟರ್‌ನಲ್ಲಿ ಭಾಷಾ ಮಿತಿಯಿಲ್ಲ. ಇಂಗ್ಲಿಷ್‌, ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಗಳ ಬಳಕೆ ಇದರಲ್ಲಿ ಈಗಾಗಲೇ ಸಾಧ್ಯ.

ತೆಳ್ಳಗಿನ ಬೆಳ್ಳಿ ಬಣ್ಣದ ಸಿಂಪ್ಯೂಟರನ್ನು ಪುಟ್ಟ ಹುಡುಗಿಯಾಬ್ಬಳಿಗೆ ಪರಿಚಯಿಸಲು ಎನ್‌ಕೋರ್‌ ಎಂಬ ಬೆಂಗಳೂರು ಮೂಲದ ಕಂಪನಿಯ ಅಧಿಕಾರಿಗಳು ಹೆಣಗಾಡುತ್ತಿದ್ದರು. ಸ್ಮಾರ್ಟ್‌ಕಾರ್ಡನ್ನು ಸಿಂಪ್ಯೂಟರ್‌ಗೆ ತುರುಕಿದರೆ, ಅದರಿಂದ ಇನ್ನೂ ಏನೇನು ಕೆಲಸ ತೆಗೆಯಬಹುದು ಎಂದು ಅಧಿಕಾರಿಗಳು ಬಿಡಿಸಿ ಹೇಳಲು ತೊಡಗಿದರು. ತಕ್ಷಣವೇ ಹುಡುಗಿ ಸ್ಮಾರ್ಟ್‌ಕಾರ್ಡ್‌ ಎಂದರೇನು ಎಂಬ ಪ್ರಶ್ನೆ ಎಸೆದಳು. ಅಧಿಕಾರಿಗಳು ಹೀಗೆ ಪದೇಪದೇ ಸವಾಲುಗಳನ್ನು ಎದುರಿಸಿ ಹೈರಾಣಾದರು.

ನಿರ್ಭಿಡೆಯಿಂದ ಪ್ರಶ್ನೆ ಕೇಳುವುದು ಎಕ್ಸ್‌ಪೋದ ಹಲವು ಮಜಗಳಲ್ಲಿ ಒಂದು. ಇಲ್ಲಿ ನಿಮಗೆ ತೋಚಿದ ಪ್ರಶ್ನೆಯನ್ನು ಕಿಂಚಿತ್ತೂ ಮುಜುಗರವಿಲ್ಲದೆ ಕೇಳಬಹುದು. ಈ ಮೇಳದ ಉದ್ದಿಶ್ಯವೇ ನಿಮ್ಮ ಪ್ರಶ್ನೆಗಳಿಗೆ ಸವಾಲು ಕೊಡುವುದಾಗಿದೆ. ಹಾಗಾಗಿ ಮಾಹಿತಿ ತಂತ್ರಜ್ಞಾನ ಲೋಕಕ್ಕೆ ನೀವು ಅಪರಿಚಿತರಾದರೂ ಚಿಂತಿಲ್ಲ. ಕಂಪ್ಯೂಟರ್‌ ಮಾನಿಟರನ್ನು ತೋರಿಸಿ, ಇದಕ್ಕೆ ಏನಂತಾರೆ ಅಂತ ಕೇಳಿದರೂ ಅಧಿಕಾರಿಗಳು ಬೇಜಾರು ಮಾಡಿಕೊಳ್ಳದೆ ಉತ್ತರ ಕೊಡುತ್ತಾರೆ.

ಲೈನಕ್ಸ್‌ ತಂತ್ರಜ್ಞಾನದ ಮೂಲಕ ಕೆಲಸ ಮಾಡುವ ಸಿಂಪ್ಯೂಟರ್‌ ಇನ್ನು ಕೆಲವೇ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ ಬೆಲೆ 12ರಿಂದ 15 ಸಾವಿರ ರುಪಾಯಿ ಎಂಬುದು ಅಂದಾಜು. ಮುದ್ರಣ ಪತ್ರಕರ್ತರ ಪಾಲಿಗೆ ಇದು ಅದ್ಭುತ ಸರಕಾದರೂ ಅಚ್ಚರಿಯಿಲ್ಲ. ಯಾಕೆಂದರೆ, ಸಿಂಪ್ಯೂಟರನ್ನು ಜೇಬಲ್ಲಿಟ್ಟುಕೊಂಡು ಹೋಗಿ, ವರದಿ ಹೆಕ್ಕಿ, ಅದನ್ನು ನಿಂತಲ್ಲಿಂದಲೋ ಕುಂತಲ್ಲಿಂದಲೋ ಇ- ಮೇಲ್‌ ಮೂಲಕ ಕಳಿಸಿ ನೆಮ್ಮದಿಯ ನಿಟ್ಟುಸಿರಿಡಬಹುದು. ಅಂದಹಾಗೆ, ಗ್ರಾಮ ಲೆಕ್ಕಿಗರ ಕೈಗೆ ಸಿಂಪ್ಯೂಟರ್‌ ಕೊಟ್ಟು ಲೆಕ್ಕ- ಪತ್ರ ಹಸನಾಗಿ ಇಡುವ ಇಂಗಿತ ಕೂಡ ಸರ್ಕಾರಿ ವಲಯಗಳಲ್ಲಿ ಹರಿದಾಡುತ್ತಿದೆ.

ಕೆಲವು ತರಪೇತಿ ಕೇಂದ್ರಗಳು ಪಿಸಿ- ಎಕ್ಸ್‌ಪೋ ಮೇಳದಲ್ಲಿ ಕಲಿಸುವ ಕೆಲಸ ಮಾಡುತ್ತಿವೆ. ಅನಿಮಾಸ್ಟರ್‌ ಎಂಬೊಂದು ಸಂಸ್ಥೆ 2ಡಿ, 3ಡಿ ಮತ್ತು ವೆಬ್‌ ಅನಿಮೇಷನ್‌ ವಿದ್ಯೆಗಳನ್ನು ಹೇಳಿಕೊಡುತ್ತಿದೆ. ಜೆಟ್‌ಕಿಂಗ್‌ ಮತ್ತು ಐಐಎಚ್‌ಟಿ ಹಾರ್ಡ್‌ವೇರ್‌ ಕೋರ್ಸುಗಳನ್ನು ಮಾರುತ್ತಿವೆ. ಫ್ರಂಟೆಕ್‌ ಮತ್ತು ರಾಜಸ್ಥಾನ್‌ ಹೈಬ್ರಿಡ್‌ ಪ್ರೆೃವೇಟ್‌ ಲಿಮಿಟೆಡ್‌ ವಿವಿಧ ಪ್ರಕಾರದ ಕಂಪ್ಯೂಟರ್‌ಗಳನ್ನು ಬಿಕರಿ ಮಾಡುತ್ತಿವೆ.

ಎಲ್‌ಜಿ, ಐಬಿಎಂ, ಮೈಕ್ರೋಸಾಫ್ಟ್‌ ಮೊದಲಾದ ದಿಗ್ಗಜ ಕಂಪನಿಗಳು ಎಚ್‌ಪಿ ಮತ್ತು ಸ್ಯಾಂಸಂಗ್‌ ಉತ್ಪನ್ನಗಳನ್ನು ಮಾರುತ್ತಿವೆ. ವಿಪ್ರೋ ಅಂಗಡಿಯಲ್ಲಿ ಪ್ರಿಂಟರ್‌ಗಳದ್ದೇ ಭರಾಟೆ. ಫೋಟೋ ಸ್ಟುಡಿಯೋ ಮಾಲಿಕರು ಎಪ್ಸನ್‌ನ ಅಂಗಡಿಯ ಗುರಿ ಗ್ರಾಹಕರು. ಎಚ್‌ಪಿ, ಎಪ್ಸನ್‌ ಮತ್ತು ಕ್ಯಾನನ್‌ ಕಂಪನಿಗಳು ವೈಯಕ್ತಿಕ ಉಪಯೋಗದ ಅಗತ್ಯತೆಗಳಿಗೆ ಸಮರ್ಥವಾಗಿ ಬಳಕೆಯಾಗಬಲ್ಲ ಪ್ರಿಂಟರ್‌ಗಳನ್ನು 2,800 ರುಪಾಯಿಯಷ್ಟು ಕಡಿಮೆ ದರದಲ್ಲಿ ಮಾರುತ್ತಿವೆ. ಸಿ.ಡಿ.ಗಳಲ್ಲಿ ಮುದ್ರಣ ಕೆಲಸ ಮಾಡುವಂಥ ವಿಶೇಷ ಪ್ರಿಂಟರ್‌ಗಳನ್ನು ಡಿಜಿಕ್ವೆಸ್ಟ್‌ ಎಂಬ ಕಂಪನಿ ತೋರಿಸುತ್ತಿದೆ.

3ಎಂ ಎಂಬ ಸಂಸ್ಥೆ ಕಂಪ್ಯೂಟರ್‌ ತೆರೆಗೆ ಅಂಟಿಸುವಂಥಾ ಶೋಧಕ ಮಾರುತ್ತಿದೆ. ಕಂಪ್ಯೂಟರಿಂದ ಹೊಮ್ಮುವ ವಿಕಿರಣಗಳನ್ನು ಈ ಶೋಧಕ ಪ್ರತಿಶತ 99ರಷ್ಟು ತಡೆಹಿಡಿಯುತ್ತದೆ ಎಂಬುದು ಕಂಪನಿಯ ಧ್ಯೇಯ ವಾಕ್ಯ. ಪವರ್‌ ಒನ್‌, ಪವರ್‌ ಕಾಮ್‌ ಮತ್ತು ಸ್ವಿಚರ್‌ ಕಂಪನಿಗಳು ಯುಪಿಎಸ್‌ ಬಿಕರಿಗೆ ನಿಂತಿದ್ದರೆ, ಫ್ರೇಸರ್‌ ಟೆಕ್ನೋ ಸರ್ಕ್ಯೂಟ್ಸ್‌ ಲಿಮಿಟೆಡ್‌, ಸ್ಪೈಕ್‌ ರಕ್ಷಣಾ ಸಂಪರ್ಕ ಸಾಧನಗಳನ್ನು ಮಾರುತ್ತಿದೆ. ಡಿಜಿಟಲ್‌ ಕೆಮೆರಾಗಳು, ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಕಂಪ್ಯೂಟರ್‌ ಆಟದ ಸರಕು- ಹೀಗೆ ತರಾವರಿ ಸರಕು ಬಿಕರಿಗಿದೆ.

ಕಂಪ್ಯೂಟರ್‌ ಪರಿಣತರಾದವರು ತೀರಾ ವಿಶೇಷೀಕೃತ ಸರಕುಗಳ ನಿರೀಕ್ಷೆ ಇಟ್ಟುಕೊಂಡು ಹೋದರೆ ‘ಪಿಸಿ ಎಕ್ಸ್‌ಪೋ’ ನಿರಾಸೆ ತಂದೀತು. ಆದರೆ, ಮನೆಗೊಂದು ಕಂಪ್ಯೂಟರ್‌ ತರುವ ಇರಾದೆಯ ಮಂದಿಗೆ, ಕಂಪ್ಯೂಟರ್‌ ತಿಳಿವಳಿಕೆಯ ಆಸಕ್ತರಿಗೆ ‘ಪಿಸಿ ಎಕ್ಸ್‌ಪೋ’ ಮೇಳ ಒಂದು ಹಿತವಾದ ಸುತ್ತಾಟ!

Click here to go to top
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+