ಕನ್ನಡತಾಯಿಗೆ ವಂದಿಸಿದ ಕ್ರಾಂತಿಕಾರಿ ಕವಿ ಗದ್ದರ್
‘ಕನ್ನಡ ತಾಯೆ ನಿನಗೆ ವಂದನೆ’ ಎಂದು ತೆಲುಗಿನ ಕ್ರಾಂತಿಕವಿ ಗದ್ದರ್ ಹಾಡಿದರೆ ಹೇಗಿರುತ್ತೆ ?
ಕಲ್ಪಿಸಿಕೊಳ್ಳುವುದೇನು- ‘ಅಮ್ಮಾ ನಿನಗೆ ವಂದನೆ, ಕನ್ನಡ ತಾಯೆ ನಿನಗೆ ವಂದನೆ’ ಎಂದು ಗದ್ದರ್ ಬೆಂಗಳೂರಿನಲ್ಲಿ ಭಾನುವಾರ ಭಾವಾವೇಶದಿಂದ ಹಾಡಿದರು, ಕುಣಿದರು. ಕೆನರಾಬ್ಯಾಂಕ್ ಎಸ್‌ಸಿ / ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗದ್ದರ್ ಹಾಡೂ ಹಾಡಿದರು.
ನನಗೆ ಕನ್ನಡ ಬರೊಲ್ಲ ಎಂದು ಸ್ಪಷ್ಟಪಡಿಸಿ ಕನ್ನಡದ ಸಾಲುಗಳನ್ನು ಹಾಡಿದ ಗದ್ದರ್- ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬೆರೆಸಿ ಮಾತನಾಡಿದರು. ತಮ್ಮ ಚಿತ್ರಾನ್ನದ ಭಾಷೆಯನ್ನು ‘ದಲಿತರ ಭಾಷೆ’ ಎಂದು ಗದ್ದರ್ ಬಣ್ಣಿಸಿದರು.
ಜಗತ್ತಿನ ಮೇಲೆ ಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಯತ್ನಗಳನ್ನು ಟೀಕಿಸಿದ ಗದ್ದರ್, ಅಮೆರಿಕ ಭಾರತದ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದರು. ಹಿಂದೂ ಮೂಲಭೂತವಾದಿಗಳು ಕೂಡ ಗದ್ದರ್ ಉರಿಮಾತಿಗೆ ಗುರಿಯಾದರು.
ನಾವು ಬದುಕುತ್ತಿರುವ ವ್ಯವಸ್ಥೆಯಲ್ಲಿ ಹುಳುಕುಗಳೆಲ್ಲ ಅಳಿಯಲಿ, ಮಾನವತೆ ಮಾತ್ರ ಉಳಿಯಲಿ ಎಂದು ಗದ್ದರ್ ಆಶಿಸಿದರು.
ಸೊಂಟಕ್ಕೊಂದು ಮೋಟು ಪಂಚೆ, ಬೆತ್ತಲೆ ಭುಜಕ್ಕೆ ಕಂಬಳಿ ಹೊದ್ದಿದ್ದ ಗದ್ದರ್ ಅವರ ಮಾತು-ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications