ತಲೆ ಎತ್ತಿದ ಫಣಿ
*ವಿಭ
ಫಣೀಶ್ ಮೂರ್ತಿ ತಲೆ ತಗ್ಗಿಸಿದ್ದರು. ಇನ್‌ಫೋಸಿಸ್‌ನ ಮಹಿಳಾ ಉದ್ಯೋಗಿ ರೆಕಾ ಮ್ಯಾಕ್ಸ್ಮೋವಿಚ್ ಅವರ ಮೇಲೆ ಲೈಂಗಿಕ ಕಿರುಕುಳ ಆಪಾದನೆ ಹೊರಿಸಿ ಅಮೆರಿಕದಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದಳು. ಇದೇ ಕಾರಣಕ್ಕೆ ಫಣೀಶ್ ಇನ್‌ಫೋಸಿಸ್‌ನಿಂದ ಹೊರ ಬಂದದ್ದು ಜಾಗತಿಕ ಸುದ್ದಿಯಾಯಿತು !
ಇದೀಗ ಫಣೀಶ್ ತಲೆ ಎತ್ತಿದ್ದಾರೆ. ಹಾಗಂತ ಕೋರ್ಟ್ ವ್ಯಾಜ್ಯ ಮುಗಿದಿದೆ ಎಂದಲ್ಲ. ಕಳೆದ ಜೂನ್‌ನಿಂದ ಮನೆಯಾಚೆ ಹೊರಬರದೆ ಆರು ತಿಂಗಳು ಕಳೆದ ಅವರು ಇದೀಗ ಪತ್ನಿ ಜಯಾ ಸಮೇತ ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸಿದ್ದಾರೆ. ಅವರ ನೂತನ ಸಾಫ್ಟ್‌ವೇರ್ ಕಂಪೆನಿಯ ಹೆಸರು ಪ್ರಿಮೆಂಟರ್. ಕ್ಯಾಲಿಫೋರ್ನಿಯಾ ಕೇಂದ್ರ ಕಚೇರಿ. ಜಯಾ ಸಹಪಾಲುಗಾರ್ತಿ ! ಇದೂ ಜಾಗತಿಕ ಗಮನ ಸೆಳೆದಿದೆ.
ಫಣೀಶ್ ಅಂದು ಇನ್‌ಫೋಸಿಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರು. ಅಪಾರ ಬುದ್ಧಿ ಮತ್ತೆ ಮತ್ತು ವ್ಯವಹಾರ ಚತುರತೆಯಿಂದ ಅಮೆರಿಕಾ ತುಂಬೆಲ್ಲ ಇನ್‌ಫೋಸಿಸ್ ಕಂಪು ಹರಡಿದರು. ಅಮೆರಿಕದಲ್ಲಿರುವ ಗ್ರಾಹಕ ಕಂಪೆನಿಗಳಿಗೆ ಇನ್‌ಫೋಸಿಸ್ ಎಂದರೆ ಫಣೀಶ್‌ಮೂರ್ತಿ ಅನ್ನುವಷ್ಟರ ಮಟ್ಟಿಗೆ ವ್ಯವಹಾರ ಸಂಬಂಧ ಬೆಳೆಸಿದ್ದರು. ಕೆಲವು ಅಸಾಧ್ಯ ಎನ್ನಬಹುದಾದ ವ್ಯವಹಾರ ಕುದುರಿಸಿದ್ದರು.
ಇವರ ಬುದ್ಧಿ ಮತ್ತೆ ಕಂಡರಿತಿದ್ದ ಅಮೆರಿಕದ ಹತ್ತಾರು ಕಂಪೆನಿಗಳು ಫಣೀಶ್ ರಾಜೀನಾಮೆ ಸುದ್ದಿ ಕೇಳಿ ಮನೆ ಮುಂದೆ ಡಾಲರ್ ಥೈಲಿ ಹಿಡಿದು ಕ್ಯೂ ನಿಂತವು. ಆದರೆ ಫಣೀಶ್ ತಲೆ ಬೇರೆಯದೇ ಲೆಕ್ಕಾಚಾರ ಹಾಕುತ್ತಿತ್ತು. ಇಷ್ಟೊಂದು ಕಂಪೆನಿಗಳು ಸಾಫ್ಟ್‌ವೇರ್ ಸರ್ವಿಸ್‌ಗಾಗಿ ಮನೆ ಬಾಗಿಲಿಗೆ ಬಂದಾಗ, ಒಂದೇ ಕಂಪೆನಿಯ ನೌಕರನಾಗಿ ಸೇರುವ ಬದಲು ಎಲ್ಲ ಕಂಪೆನಿಗಳಿಗೂ ಸೇವೆ ಒದಗಿಸಿದರೆ ಹೇಗೆ ಎನಿಸಿತು. ಪತ್ನಿ ಜಯಾ ಜೊತೆ ಚರ್ಚಿಸಿದರು. ಅವರೂ ಅಹ್ಮದಾಬಾದ್ ಐ ಐ ಎಂನಲ್ಲಿ ಎಂಬಿಎ ಓದಿದವರು. ಕಸ್ಟಮರ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ನುರಿತಾಕೆ. ತಡವೇಕೆ ಎಂದು ಎದ್ದೇ ಬಿಟ್ಟರು. ಕಳೆದ ಡಿಸೆಂಬರ್‌ನಲ್ಲಿ ಮೂರನೆಯ ಮಗುವಾಗಿ ಜನ್ಮ ತಾಳಿತು- ಪ್ರಿಮೆಂಟರ್. ಸಾಫ್ಟ್‌ವೇರ್ ಬ್ರಾಂಡ್ ಕನ್ಸಲ್ಟಿಂಗ್, ಸೇಲ್ಸ್, ಅಕೌಂಟ್ಸ್ ಮ್ಯಾನೇಜ್‌ಮೆಂಟ್ ಹೀಗೇ ಕಂಪೆನಿಯಾಂದರ ಸರ್ವ ರೀತಿಯ ವಹಿವಾಟು ಸಮಸ್ಯೆಗಳಿಗೂ ಮದ್ದಾಗಬಲ್ಲ ‘ಸಕಲ ಸಂಬಾರ’. ಆದರೆ ಕಂಪೆನಿಯ ವ್ಯವಹಾರ ವಿಸ್ತರಿಸಿದ ಮೇಲಷ್ಟೇ ಅದು ಇನ್‌ಫೋಸಿಸ್‌ನಂಥ ದೈತ್ಯ ಕಂಪೆನಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುವುದೋ ಬೇರೆಯದೆ ದಾರಿಯಲ್ಲಿ ಹೊರಳುವುದೋ ಗೊತ್ತಾಗುವುದು. ಸದ್ಯದ ಕಾರ್ಯತಂತ್ರ ಇನ್‌ಫೋಸಿಸ್‌ಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ.
ಇದೀಗ ಜಯಾ ಸಂತೃಪ್ತೆ.
‘ಫಣೀಶ್‌ದಿನದ ಇಪ್ಪತ್ತನಾಲ್ಕು ಗಂಟೆಯೂ ಕಂಪೆನಿಗಾಗಿ ದುಡಿದರು. ಕೆಲವೊಮ್ಮೆ ಎರಡೆರಡು ದಿನ ಮನೆಗೇ ಬರುತ್ತಿರಲಿಲ್ಲ. ಮಕ್ಕಳಂತೂ ತಂದೆಯ ಮುಖ ನೋಡಿದ್ದಿಲ್ಲ. ಎಂಬುದು ಜಯಾ ಅಳಲಾಗಿತ್ತು. ಕೊನೆಗೂ ರಾಜೀನಾಮೆ ಕೊಟ್ಟು ಮನೆಗೆ ಬಂದಾಗ ಜಯಾಗೆ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಪತಿ ಸಿಕ್ಕಿ ಹಾಕಿಕೊಂಡ ಎಂಬ ಸಂಕಟವಾಗದೇ ಈಗಲಾದರೂ ದಿನವಿಡೀ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾರಲ್ಲ ಎಂದು ಸಂತಸವೇ ಆಯಿತಂತೆ !
‘ನನ್ನ ಗಂಡ ಶ್ರೀರಾಮಚಂದ್ರ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ’ - ಇದು ಜಯಾ ಒಂದೇ ವಾಕ್ಯದಲ್ಲಿ ಪತಿಯ ಬಗ್ಗೆ ಮಾಡಿದ ವ್ಯಾಖ್ಯೆ.
( ವಿಜಯ ಕರ್ನಾಟಕ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications