ವೀರಪ್ಪನ್ ತಲೆಗೀಗ 5 ಕೋಟಿ ರುಪಾಯಿ ಬೆಲೆ !
ಬೆಂಗಳೂರು : ನಾಗಪ್ಪ ಹತ್ಯೆಯ ಮುಳ್ಳು ಯದ್ವಾತದ್ವಾ ಚುಚ್ಚಿದ್ದೇ ತಡ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಪಹರಣಕಾರರ ವಿರುದ್ಧ ದಾರ್ಷ್ಟ್ಯ ನಿಲುವು ತಳೆದಿದ್ದಾರೆ. ವೀರಪ್ಪನಾಗಲೀ, ಇನ್ಯಾವನೇ ಆಗಲಿ ಯಾರನ್ನಾದರೂ ಅಪಹರಿಸಿದರೆ ಇನ್ನು ಮುಂದೆ ಸಂಧಾನದ ಪ್ರಶ್ನೆಯೇ ಇಲ್ಲ. ಏನಿದ್ದರೂ ದಾಳಿ ಎಂದು ವಿಧಾನಸಭೆಯಲ್ಲಿ ಮಂಗಳವಾರ ಕೃಷ್ಣ ಘೋಷಿಸಿದರು. ಅಷ್ಟೇ ಅಲ್ಲದೆ, ವೀರಪ್ಪನ್ ಪತ್ತೆಗೆ ಸುಳಿವು ಕೊಟ್ಟವರಿಗೆ ಕೊಡುವುದಾಗಿ ಪ್ರಕಟಿಸಿದ್ದ ಬಹುಮಾನದ ಮೊತ್ತವನ್ನು 2ರಿಂದ 5 ಕೋಟಿ ರುಪಾಯಿಗೆ ಏರಿಸಿದರು.
ನಾಗಪ್ಪ ಹತ್ಯೆ ವಿಷಯವನ್ನೇ ಉದ್ದೇಶವಾಗಿಟ್ಟುಕೊಂಡು ಕಳೆದೊಂದು ವಾರದಿಂದ ಸುಮಾರು 17 ತಾಸು ಕಾಲ ಸದನದಲ್ಲಿ ನಡೆದಿರುವ ಚರ್ಚೆಯನ್ನು ಕೃಷ್ಣ ಉಪಸಂಹಾರ ಮಾಡಿದ್ದು ಹೀಗೆ...
‘ಇನ್ನು ಮುಂದೆ ಕೆಸೆಟ್ ಕಳಿಸುವುದು, ಅವರು ಕೊಡುವ ಕೆಸೆಟ್ ಕೇಳುವುದು- ಇವೆಲ್ಲಾ ಇಲ್ಲ. ಸಮಾಜಘಾತುಕ ಶಕ್ತಿಗಳ ಜೊತೆ ವ್ಯರ್ಥ ಮಾತುಕತೆ ಸಲ್ಲ. ರಷ್ಯಾ ಈ ವಿಷಯದಲ್ಲಿ ನಮಗೆ ಮಾದರಿ. ಇತ್ತೀಚೆಗೆ ರಂಗಮಂದಿರವೊಂದಕ್ಕೆ ಘಾತುಕರು ನುಗ್ಗಿ, ಜನರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡರು. ಆಗ ರಷ್ಯಾ ಸರ್ಕಾರ ಮಾತುಕತೆಗೆ ನಿಲ್ಲಲಿಲ್ಲ ; ದಾಳಿಯಿಟ್ಟು, ಜನರನ್ನು ಬಿಡಿಸಿಕೊಂಡು ಬಂದಿತು. ಇನ್ನು ಮುಂದೆ ನಮ್ಮದೂ ಇದೇ ನಿಯಮ. ಇದೇ ನೀತಿಯನ್ನು ಜಾರಿಗೆ ತರುವಂತೆ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ. ರಾಷ್ಟ್ರೀಯ ಮಟ್ಟದಲ್ಲೂ ಇದೇ ನಿಲುವು ಜಾರಿಗೆ ಬರುವುದು ಒಳಿತು’.
ಕೃಷ್ಣ ಅವರ ಮಾತಿನಿಂದ ಸಂಯುಕ್ತ ಜನತಾ ದಳದ ಸದಸ್ಯರಿಗೆ ಸಮಾಧಾನವಾಗಲಿಲ್ಲ. ನಾಗಪ್ಪ ಹತ್ಯೆಯ ಸಿಬಿಐ ತನಿಖೆಯಾಗಬೇಕು ಎಂದು ಅವರು ಪಟ್ಟು ಹಿಡಿದರು. ಅಂತರರಾಜ್ಯ ಬಿಕ್ಕಟ್ಟುಗಳನ್ನೇ ಬೇಧಿಸಿರುವ ನಮ್ಮ ಪೊಲೀಸರು ಈ ಪ್ರಕರಣದ ತನಿಖೆಯನ್ನೂ ಯಶಸ್ವಿಯಾಗಿ ಮಾಡಲಿದ್ದಾರೆ. ಯಾವ ಕಾರಣಕ್ಕೂ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಿಲ್ಲ. ನಾಗಪ್ಪನವರನ್ನು ಬಿಡಿಸಿ ತರುವಲ್ಲಿ ಸರ್ಕಾರ ವಿಫಲವಾಗಿದೆ, ನಿಜ. ಅದಕ್ಕೆ ಜನ ಯಾವ ಶಿಕ್ಷೆ ಕೊಟ್ಟರೂ ಎದುರಿಸಲು ನಾವು ಸಿದ್ಧ ಎಂದು ಕೃಷ್ಣ ಜವಾಬು ಕೊಟ್ಟರು.
ಕೃಷ್ಣ ಕೊಟ್ಟ ಜವಾಬಿಗೆ ಜಗ್ಗದ ಸಂಯುಕ್ತ ಜನತಾ ದಳ ಸದಸ್ಯರು ಸದನದ ಬಾವಿಗೆ ನುಗ್ಗಿ, ಕೃಷಿ ಸಂಸ್ಕರಣ ಸಚಿವ ರಾಜೂಗೌಡರ ರಾಜೀನಾಮೆಗೆ ಹಾಗೂ ಪ್ರಕರಣದ ಸಿಬಿಐ ತನಿಖೆಗೆ ಪದೇ ಪದೇ ಆಗ್ರಹಿಸಿದರು. ಚರ್ಚೆಗೆ ಅಡ್ಡಿಯುಂಟಾದ್ದರಿಂದ, ಕೆಲ ಕಾಲ ಸದನದ ಕಲಾಪಗಳನ್ನು ಮುಂದೂಡಲಾಯಿತು. ಮಂಗಳವಾರ (ಡಿ.31) ಈ ವಿಶೇಷ ಕಲಾಪದ ಕೊನೇ ದಿನ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications