‘ಶವ ಸಿಗುವ ಮುಂಚೆಯೇ ನಾಗಪ್ಪ ಸತ್ತದ್ದು ಬಾವಾಗೆ ಗೊತ್ತಿತ್ತು’
ಬೆಂಗಳೂರು : ನಾಗಪ್ಪನವರ ಶವ ಸಿಕ್ಕುವ ಮುನ್ನವೇ ಪೊಲೀಸರಿಗೆ ಅವರ ಹತ್ಯೆ ವಿಚಾರ ಗೊತ್ತಿತ್ತೇ? ಹೌದೆನ್ನುತ್ತಾರೆ ಸಂಯುಕ್ತ ಜನತಾ ದಳದ ಶಾಸಕ ಎ.ಆರ್.ಕೃಷ್ಣಮೂರ್ತಿ.
ವಿಧಾನ ಸಭೆಯ ಚರ್ಚೆಯ ವೇಳೆ ಕೃಷ್ಣಮೂರ್ತಿ ಮಾಡಿದ ಆರೋಪ ಮತ್ತು ಹೊರಹಾಕಿದ ವಿಷಯ ಹೀಗಿದೆ-
‘ನಾಗಪ್ಪ ಹತ್ಯೆಯ ವಿಚಾರ ಕರ್ನಾಟಕ ಪೊಲೀಸರಿಗೆ ಮೊದಲೇ ಗೊತ್ತಿತ್ತು. ನಾಗಪ್ಪ ಅವರಿಗೆ ಅತಿ ಸಮೀಪದಿಂದ ಗುಂಡು ಹೊಡೆಯಲಾಗಿದೆ ಎಂದು ಖುದ್ದು ಎಸಿಪಿ ಬಾವ ನನಗೆ ಹೇಳಿದ್ದರು. ಆಗ ನಾಗಪ್ಪನವರ ಶವ ಇನ್ನೂ ಪತ್ತೆಯಾಗಿರಲಿಲ್ಲ.
‘ಶವ ಸಿಕ್ಕುವ ಮೊದಲೇ ಪೊಲೀಸರಿಗೆ ನಾಗಪ್ಪನವರ ಹತ್ಯೆ ವಿಚಾರ ಹೇಗೆ ಗೊತ್ತಿತ್ತು. ಇದರ ಹಿಂದೆ ಏನೇನು ನಡೆದಿದೆ ಅನ್ನುವ ಪ್ರಶ್ನೆಗೆ ಉತ್ತರ ಹೊರಬರಬೇಕಿದೆ. ಇದರಿಂದ ಒಂದಂತೂ ಸ್ಪಷ್ಟ- ನಾಗಪ್ಪನವರನ್ನು ಒತ್ತೆಯಾಗಿಟ್ಟುಕೊಂಡಿದ್ದಾಗಲೂ ವೀರಪ್ಪನ್ ವಿರುದ್ಧ ಎಸ್‌ಟಿಎಫ್ ಕಾರ್ಯಾಚರಣೆ ನಡೆದ ವಿಚಾರ ಬೆಂಗಳೂರಿನಲ್ಲಿ ಕೂತ ಪೊಲೀಸರಿಗೆ ಗೊತ್ತಿತ್ತು.
‘ಸೋನಿಯಾ ಗಾಂಧಿ ಬಗ್ಗೆ ಜಯಲಲಿತಾ ಟೀಕೆ ಮಾಡಿದ ನಂತರ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಸೋನಿಯಾ ಕರೆದು, ಜಯಾ ಜೊತೆ ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳಬಾರದೆಂದು ತಾಕೀತು ಮಾಡಿದರು. ಅದನ್ನು ಕೃಷ್ಣ ಚಾಚೂ ತಪ್ಪದೆ ಪಾಲಿಸಿದರು. ನಾಗಪ್ಪನವರನ್ನು ಬಿಡಿಸುವ ವಿಚಾರದಲ್ಲಿ ತಮಿಳುನಾಡಿನ ಜೊತೆ ಸಮರ್ಪಕವಾಗಿ ಮಾತುಕತೆಯನ್ನೇ ನಡೆಸಲಿಲ್ಲ. ಪರಿಣಾಮ ನಾಗಪ್ಪನವರ ಹತ್ಯೆಯಾಯಿತು.’
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications