‘ಕಾಂಗ್ರೆಸ್ ಹಠಾವೊ’: ಸದ್ದು ಮಾಡಿದ ಬಿಜೆಪಿಗೆ ಶಿಕ್ಷೆ
ಬೆಂಗಳೂರು : ತಮ್ಮ ಹೊಣೆಗೇಡಿತನದಿಂದ ಮಾಜಿ ಸಚಿವ ಎಚ್. ನಾಗಪ್ಪನವರ ಹತ್ಯೆಗೆ ಕಾರಣರಾದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಆಹಾರ ಸಂಸ್ಕರಣ ಸಚಿವ ರಾಜೂಗೌಡ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಗುರುವಾರ (ಡಿ.26) ವಿಧಾನಸಭೆಯಲ್ಲಿ ಕೋಲಾಹಲ ಉಂಟು ಮಾಡಿದರು.
ಸದನದಲ್ಲಿ ಕೋಲಾಹಲ ಉಂಟು ಮಾಡಿ ಕಲಾಪಕ್ಕೆ ಅಡ್ಡಿಪಡಿಸಿದ ಭಾರತೀಯ ಜನತಾಪಕ್ಷದ ಸದಸ್ಯರನ್ನು ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಅವರು ಸದನದಿಂದ ಹೊರಹಾಕಿದರು. ಈ ಅಮಾನತು ಪ್ರಸಕ್ತ ಸಾಲಿನ ಕಲಾಪದ ಅಂತ್ಯ (ಡಿ.31) ದವರೆಗೂ ಜಾರಿಯಲ್ಲಿರುತ್ತದೆ ಎಂದು ವೆಂಕಟಪ್ಪ ಘೋಷಿಸಿದರು.
ಧರಣಿಯಲ್ಲಿ ಪಾಲ್ಗೊಂಡ ಬಿಜೆಪಿ ಉಚ್ಛಾಟಿತ ಸದಸ್ಯ ಗುರುಸ್ವಾಮಿ ಅವರು ಕೂಡ ಸಭಾಧ್ಯಕ್ಷರ ಅಮಾನತಿನ ಶಿಕ್ಷೆಗೆ ಗುರಿಯಾದರು.
‘ಕಾಂಗ್ರೆಸ್ ಹಠಾವೊ’ ಎಂದು ಘೋಷಣೆಗಳನ್ನು ಕೂಗಿ ಸದನವನ್ನು ಸದ್ದಿನಲ್ಲಿ ಮುಳುಗಿಸಿದ ಬಿಜೆಪಿ ಸದಸ್ಯರನ್ನು- ಸಭಾಧ್ಯಕ್ಷರ ಆದೇಶದ ಮೇರೆಗೆ ಕಾವಲು ಪಡೆಯವರು ಸದನದಿಂದ ಅಕ್ಷರಶಃ ಎತ್ತಿ ಹೊರ ಹಾಕಿದರು. ಡಿ.24 ರ ಮಂಗಳವಾರ ಕೂಡ ಬಿಜೆಪಿ ಸದಸ್ಯರು ಗದ್ದಲದಿಂದ ವಿಧಾನಮಂಡಲದ ಕಲಾಪ ಅಸ್ತವ್ಯಸ್ತಗೊಂಡಿತ್ತು . ಗದ್ದಲದ ಕಾರಣ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications