ಅರಿಂಗುಳದ ಕೆರೆಯಲ್ಲಿ ವಿಷ, ರಾಶಿ ಮೀನುಗಳ ಸಾವು
ಮಂಜೇಶ್ವರ: ಇಲ್ಲಿನ ಅರಿಂಗುಳ ಕೊಳದಲ್ಲಿ ಭಾರೀ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿದ್ದು ಮೀನುಗಳನ್ನು ತಿಂದ ಕಾಗೆ- ಹದ್ದುಗಳೂ ಸಾವನ್ನಪ್ಪುತ್ತಿವೆ.
ಇದ್ದಕ್ಕಿದ್ದ ಹಾಗೆಯೇ ಮೀನುಗಳು ಸಾಯುತ್ತಿರುವುದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ವರ್ಕಾಡಿ ಗ್ರಾಮ ಪಂಚಾಯತ್‌ನ ಮುತ್ತರಣೆ-ಅರಿಂಗುಳ ಪ್ರದೇಶದಲ್ಲಿ ಕುಡಿಯುವುದಕ್ಕೂ ಇದೇ ಕೊಳದ ನೀರನ್ನು ಬಳಸುತ್ತಿರುವುದು, ಸ್ಥಳೀಯರು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ನೀರು ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ.
ಅರಿಂಗುಳ ಕೊಳ ಚಾರಿತ್ರಿಕವಾಗಿ ಪ್ರಸಿದ್ಧವಾದುದು. ಆದರೆ ಕಳೆದೆರಡು ದಿನಗಳಿಂದ ಕೊಳದಲ್ಲಿ ರಾಶಿ ರಾಶಿ ಮೀನುಗಳು ಸಾಯುತ್ತಿವೆ. ಕೊಳದ ಪಕ್ಕವೇ ಇರುವ ಪಂಚಾಯತ್ ಬಾವಿಯಲ್ಲಿಯೂ ಮೀನುಗಳು ಸತ್ತು ಹೋಗಿವೆ. ಈ ಬಾವಿಗೆ ಯಾರೋ ದುಷ್ಕರ್ಮಿಗಳು ವಿಷ ಹಾಕಿರಬಹುದು ಎಂದು ಶಂಕಿಸಲಾಗಿದೆ. ಬಾವಿ ದುರ್ನಾತ ಬೀರುತ್ತಿದೆ.
ಈ ಬಗ್ಗೆ ಸ್ಥಳೀಯ ನಾಗರಿಕರು ಪಂಚಾಯತ್‌ಗೆ ದೂರು ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಪರೀಕ್ಷೆ ನಡೆಸುವ ಬಗ್ಗೆ ಅಥವಾ ಕುಡಿಯುವ ನೀರಿಗಾಗಿ ಬದಲಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪಂಚಾಯತ್ ಆಗಲೀ, ಆರೋಗ್ಯ ಘಟಕವಾಗಲೀ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications