ಚಂದ್ರಬಾಬು ಒತ್ತಡ ; ಆಂಧ್ರಕ್ಕೆ ಆಲಮಟ್ಟಿ ನೀರು
ಬೆಂಗಳೂರು : ನೆರೆಯ ಆಂಧ್ರಪ್ರದೇಶದ ಕೃಷ್ಣಾ ನದಿ ಕೊಳ್ಳದ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ತಲೆದೋರಿರುವ ಹಿನ್ನೆಲೆಯಲ್ಲಿ - ಆಂಧ್ರ ಸರ್ಕಾರದ ಕೋರಿಕೆಯಂತೆ ಆಲಮಟ್ಟಿ ಜಲಾಶಯದಿಂದ ತೆಲುಗು ನೆಲಕ್ಕೆ ನೀರು ಹರಿಸಲು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ.
37 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿರುವ ಮನವಿಯನ್ನು ತಿರಸ್ಕರಿಸಲಾಗಿದೆ. ಆದರೆ, ಆಂಧ್ರದ ಕುಡಿಯುವ ನೀರಿನ ಬೇಡಿಕೆ ಹಾಗೂ ನಮ್ಮ ರಾಜ್ಯದ ಕುಡಿಯುವ ನೀರಿನ ಬೇಡಿಕೆ, ವಿದ್ಯುತ್, ನೀರಾವರಿ ಮುಂತಾದ ಅಂಶಗಳನ್ನು ಪರಿಗಣಿಸಿ ಆಂಧ್ರಕ್ಕೆ ಬಿಡಬಹುದಾದ ನೀರಿನ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಆಂಧ್ರದ ಭಾರೀ ನೀರಾವರಿ ಸಚಿವ ಕೆ.ಶ್ರೀಹರಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಉನ್ನತ ಮಟ್ಟದ ನಿಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ 1 ಟಿಎಂಸಿ ನೀರನ್ನು ಒದಗಿಸಬೇಕು ಎನ್ನುವ ಕೋರಿಕೆಯನ್ನೂ ತಳ್ಳಿಹಾಕಲಾಗಿದೆ. ನಮ್ಮ ಸಂಕಷ್ಟ ಹಾಗೂ ರಾಜ್ಯದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಆಂಧ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
4 ಟಿಎಂಸಿ ನೀರು ಬಿಡುಗಡೆ ?
ಆಂಧ್ರ ಪ್ರದೇಶಕ್ಕೆ ಆಲಮಟ್ಟಿ ಜಲಾಶಯದಿಂದ 4 ಅಥವಾ 5 ಟಿಎಂಸಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ವಿದ್ಯುತ್ ಪಡೆಯುವ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications