ಬರುತಿದೆ ಬೇಸಿಗೆ, ಸಂಚಕಾರ ಕುಡಿಯುವ ನೀರಿಗೆ
ಬೆಂಗಳೂರು : ಈ ಬಾರಿಯ ಬೇಸಗೆ ಮತ್ತಷ್ಟು ತೀವ್ರವಾಗಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಬೇಸಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಸರ್ವ ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸತತವಾಗಿ ಎರಡನೇ ವರ್ಷ ರಾಜ್ಯ ಬರ ಎದುರಿಸುತ್ತಿದೆ. ಸರ್ಕಾರದ ಕ್ರಿಯಾ ಶೀಲತೆಗೆ ಬರುವ ಬೇಸಗೆ ಅತಿ ದೊಡ್ಡ ಸವಾಲು ಎಂದು ಜಲ ಮಂಡಳಿಯ ಎಲೆಕ್ಟ್ರಾನಿಕ್ ಬಿಲ್ ಪಾವತಿ ಸೇವಾ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣ ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸರ್ಕಾರ ಆದ್ಯತೆ ನೀಡಿದೆ. ಕೆಲವು ಅಪಸ್ವರಗಳನ್ನು ಹೊರತುಪಡಿಸಿದರೆ ಉಳಿದೆಲ್ಲೆಡೆ ನೀರು ವಿತರಣೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಕೃಷ್ಣ ಆಡಳಿತ ಯಂತ್ರದ ಬಗೆಗೆ ತೃಪ್ತಿ ವ್ಯಕ್ತಪಡಿಸಿದರು.
2010 ನೇ ಇಸವಿಯ ವೇಳೆಗೆ ಬೆಂಗಳೂರು ಭಾರತದ ನಂ.1 ನಗರವಾಗುತ್ತದೆಂದು ಅಮೆರಿಕಾದ ಅರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ನಾವು 2020 ನೇ ಇಸವಿಯಲ್ಲಿ ಬೆಂಗಳೂರು ಹೇಗಿರಬೇಕೆಂದು ಯೋಜನೆ ರೂಪಿಸಬೇಕಾಗಿದೆ ಎಂದು ಕೃಷ್ಣ ಹೇಳಿದರು. ನಗರದ ಮೂರೂವರೆ ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಎಲೆಕ್ಟ್ರಾನಿಕ್ ವಿದ್ಯುತ್ ಬಿಲ್ ಸೌಲಭ್ಯ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications