‘ನಾಗಪ್ಪ ಹತ್ಯೆಗೆ ಕಾರಣ ಅಯ್ಯಪ್ಪ ವೇಷಿ ಪೊಲೀಸರು’
ಬೆಂಗಳೂರು : ನಾಗಪ್ಪನವರ ಹತ್ಯೆಗೆ ಕಾರಣ ವೀರಪ್ಪನ್ ಅಲ್ಲ ; ಕರ್ನಾಟಕ ಅಥವಾ ತಮಿಳುನಾಡು ಎಸ್‌ಟಿಎಫ್ ಪೊಲೀಸರು ಎಂದು ಸಂಯುಕ್ತ ಜನತಾ ದಳದ ನಾಯಕ ಪಿ.ಜಿ.ಆರ್.ಸಿಂಧ್ಯ ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ಕಾಮಗೆರೆಗೆ ಹೋಗಿ ನಾಗಪ್ಪನವರ ಕುಟುಂಬದವರನ್ನು ಮಾತಾಡಿಸಿಕೊಂಡು ಬಂದ ಸಿಂಧ್ಯ, ಶುಕ್ರವಾರ ಸುದ್ದಿಗಾರರಿಗೆ ಹೇಳಿದ್ದಿಷ್ಟು- ‘ನನಗೆ ಗೊತ್ತಿರುವ ಮೂಲಗಳು ಹೇಳಿರುವ ಪ್ರಕಾರ, ಕರ್ನಾಟಕ ಅಥವಾ ತಮಿಳುನಾಡು ವಿಶೇಷ ಕಾರ್ಯಾಚರಣೆ ಪೊಲೀಸರು ಅಯ್ಯಪ್ಪನ ಭಕ್ತರ ವೇಷದಲ್ಲಿ ಕಾಡೊಳಕ್ಕೆ ಹೋಗಿದ್ದಾರೆ. ವೀರಪ್ಪನ್‌ನನ್ನು ಹಿಡಿದು ಅಥವಾ ಕೊಂದು ನಾಗಪ್ಪನವರನ್ನು ಬಿಡಿಸಿ ತರುವುದು ಅವರ ಉದ್ದೇಶವಾಗಿತ್ತು. ಆದರೆ, ಪೊಲೀಸರ ಲೆಕ್ಕಾಚಾರ ತಲೆಕೆಳಗಾಗಿ, ನಡೆದಿರಬಹುದಾದ ಗುಂಡಿನ ಚಕಮಕಿಯಲ್ಲಿ ನಾಗಪ್ಪನವರೇ ಮೃತಪಟ್ಟಿದ್ದಾರೆ. ಇದು ಮುಖ್ಯಮಂತ್ರಿ ಕೃಷ್ಣ ಅವರ ಅನುಮತಿಯಿಲ್ಲದೆಯೂ ನಡೆದಿರುವ ಸಾಧ್ಯತೆಯಿದೆ’.
ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಕೆಲಸ ಮಾಡಿರುವ ಸಿಂಧ್ಯ, ನಾಗಪ್ಪನವರನ್ನು ಬಚಾವು ಮಾಡಿ ಎಂಬ ಅವರ ಕುಟುಂಬದವರ ಮನವಿಗೆ ಸರ್ಕಾರ ಓಗೊಡಲಿಲ್ಲ. ಈಗ ಪರಿಣಾಮ ನಮ್ಮ ಮುಂದಿದೆ. ಇಡೀ ಪ್ರಕರಣ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸತ್ಯ ಪತ್ತೆಗೆ ದುಬಾರಿ ವಿಧಿ ವಿಜ್ಞಾನ ಪರೀಕ್ಷೆ ಅಗತ್ಯ
ನಾಗಪ್ಪನವರ ಹತ್ಯೆ ವಿಷಯದಲ್ಲಿ ಸಾಕಷ್ಟು ಸತ್ಯಾಂಶಗಳು ಗೊತ್ತಾಗಬೇಕಾದರೆ, ವ್ಯವಸ್ಥಿತ ಹಾಗೂ ದುಬಾರಿ ವಿಧಿ ವಿಜ್ಞಾನ ಪರೀಕ್ಷೆಗಳನ್ನು ನಡೆಸಬೇಕು ಎಂದು ಪ್ರಸಿದ್ಧ ಫೊರೆನ್ಸಿಕ್ ವಿಜ್ಞಾನಿ ಡಾ.ಪಿ.ಚಂದ್ರಶೇಖರನ್ ಹೇಳಿದ್ದಾರೆ.
ನಾಗಪ್ಪ ಹತ್ಯೆಯಾದ ಸ್ಥಳದಲ್ಲಿ ಸಿಕ್ಕಿರುವ ಕಾಟ್ರಿಜ್‌ಗಳು ಮತ್ತು ಗುಂಡುಗಳ ಹೊದಿಕೆಗಳು ಬಳಕೆಯಾದ ಖಚಿತ ಅವಧಿ ತಿಳಿಯಲು ಹಲವು ಪರೀಕ್ಷೆಗಳನ್ನು ಮಾಡಬೇಕಿದ್ದು, ಇದಕ್ಕೆ ಸಾಕಷ್ಟು ಹಣವೂ ಖರ್ಚಾಗಲಿದೆ ಎಂದು ರಾಜೀವ್ ಗಾಂಧಿ ಹತ್ಯೆಯ ತನಿಖಾ ದಳದಲ್ಲಿ ಕೆಲಸ ಮಾಡಿರುವ ಚಂದ್ರಶೇಖರನ್ ತಿಳಿಸಿದರು.
ದೊರೆತಿರುವ ಕಾಟ್ರಿಜ್‌ಗಳು ಹಾಗೂ ಗುಂಡಿನ ಹೊದಿಕೆಗಳಿಂದಲೇ ಉಪಯೋಗಿಸಿರುವ ಬಂದೂಕು ಯಾವ ಮಾದರಿಯದ್ದು ಎಂಬುದನ್ನು ತಿಳಿಯಬಹುದು. ಕಾಟ್ರಿಜ್‌ಗಳ ಗಹನವಾದ ಪರೀಕ್ಷೆಯಿಂದ ಅವುಗಳ ಮೇಲೆ ಮೂಡಿರುವ ಬೆರಳಚ್ಚು ಮತ್ತಿತರ ವಿವರಗಳು ದೊರೆಯುತ್ತವೆ. ಇಷ್ಟೆಲ್ಲಾ ಮಾಹಿತಿ ಸಿಕ್ಕಿದರೆ ಮುಂದಿನ ತನಿಖೆಗೆ ಸಾಕಷ್ಟು ಸಹಾಯವಾಗುತ್ತದೆ. ಖರ್ಚನ್ನು ಲೆಕ್ಕಿಸದೆ ವಿಧಿ ವಿಜ್ಞಾನ ಪರೀಕ್ಷೆ ನಡೆಯಬೇಕು ಎಂದು ಪ್ರಸ್ತುತ ಜೋಧ್‌ಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಿರುವ ಚಂದ್ರಶೇಖರನ್ ಅಭಿಪ್ರಾಯ ಪಟ್ಟರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications