ಏನೇ ಕೆಸೆಟ್ಟು ಬರಲಿ, ವೀರಪ್ಪನ್ನ ಹಿಡಿದೇ ತೀರ್ತೇವೆ-ಕೃಷ್ಣ
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕುದಿಯುತ್ತಿದ್ದರು. ಪ್ರಶ್ನೆಗಳೇನೇ ಇರಲಿ, ಹರಿದು ಬಂದ ಅವರ ಉತ್ತರ ಕೊನೆಯಾಗುತ್ತಿದ್ದುದು- ವೀರಪ್ಪನ್‌ನನ್ನು ಹಿಡಿದೇ ತೀರುತ್ತೇವೆ ಎಂಬುದರಲ್ಲಿ.
ಬುಧವಾರ ಸುದ್ದಿಗಾರರ ಪ್ರಶ್ನೆಗಳ ಕೂರಂಬುಗಳಿಗೆ ಕೃಷ್ಣ ಎದೆಗೊಟ್ಟಿದ್ದು ಹೀಗೆ-
ಪ್ರಶ್ನೆ : ಸಕ್ಕರೆ ಸಚಿವ ಮಹದೇವ ಅವರಿಗೆ ವೀರಪ್ಪನ್‌ನಿಂದ ಇನ್ನೊಂದು ಕೆಸೆಟ್ ಬಂದಿದೆ ಎಂಬ ಸುದ್ದಿಯಿದೆ. ಕೆಸೆಟ್ಟಿನಲ್ಲಿ ಏನಿದೆ?
ಉತ್ತರ : ನಾಗಪ್ಪನವರು ಇದ್ದಾಗ ಅವರ ಮನೆಗೆ ವೀರಪ್ಪನ್ ಕೆಸೆಟ್ ಕಳಿಸುತ್ತಿದ್ದ. ಈಗ ಮಹದೇವ ಅವರಿಗೆ ಕೆಸೆಟ್ ಕಳಿಸಿದ್ದಾನೆ. ಅದು ಸರ್ಕಾರಕ್ಕೆ ಕಳಿಸಿರುವ ಕೆಸೆಟ್ ಅಲ್ಲ. ಏನೇ ಆಗಲಿ ವೀರಪ್ಪನ್‌ನನ್ನು ಜೀವಂತ ಅಥವಾ ಶವವಾಗಿ ಹಿಡಿದೇ ತೀರುತ್ತೇವೆ.
ಪ್ರಶ್ನೆ : ವೀರಪ್ಪನ್ ಹಿಡಿಯೋಕೆ ಹೊಸ ಕಾರ್ಯತಂತ್ರವನ್ನೇನಾದರೂ ರೂಪಿಸುತ್ತಿದ್ದೀರಾ?
ಉತ್ತರ : ನಾನು, ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳು ಪ್ರಧಾನಿ ವಾಜಪೇಯಿ ಅವರ ಜೊತೆ ಡಿಸೆಂಬರ್ 21ನೇ ತಾರೀಕು ಈ ವಿಷಯವಾಗಿ ಚರ್ಚೆ ನಡೆಸುವ ಸಂಭವವಿದೆ. ರಾಷ್ಟ್ರೀಯ ಅಭಿವೃದ್ಧಿ ಸಮಿತಿಯ ಸಭೆ ಅದೇ ದಿನ ದೆಹಲಿಯಲ್ಲಿ ನಡೆಯಲಿದ್ದು ನಾವೆಲ್ಲಾ ಒಟ್ಟಿಗೆ ಸೇರುವ ಅವಕಾಶ ಒದಗಿಬಂದಿದೆ. ಆ ದಿನ ಪ್ರಧಾನಿ, ಗೃಹ ಸಚಿವ ಎಲ್.ಕೆ.ಅಡ್ವಾಣಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್ ಮಹಾಜನ್ ಅವರ ಜೊತೆ ಕೂತು ಚರ್ಚಿಸಬೇಕೆಂಬ ಪ್ರಸ್ತಾವನೆಯನ್ನು ಪ್ರಧಾನಿಯವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ.
ಪ್ರಶ್ನೆ : ವಿರೋಧ ಪಕ್ಷಗಳ ದಾಳಿಗೆ ನಿಮ್ಮ ಉತ್ತರ?
ಉತ್ತರ : ಅವರದ್ದು ಎರಡು ಮಾತು. ಈವರೆಗೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಅವರ ಜೊತೆ ನಾವು ಚರ್ಚಿಸಿಯೇ ಇದ್ದೇವೆ. ಹಾಗಿದ್ದೂ ಈಗ ಸಮಯ ಸಾಧಕರಂತೆ ಮಾತಾಡುತ್ತಿದ್ದಾರೆ. ಡಿಸೆಂಬರ್ 23ರಿಂದ ನಾಗಪ್ಪ ಪ್ರಕರಣ ಕುರಿತು ವಿಧಾನಮಂಡಲದ ತುರ್ತು ಕಲಾಪ ಕರೆದಿದ್ದೇವೆ. ಅವರಿಗೆ ಅಲ್ಲೇ ಉತ್ತರ ಕೊಡುತ್ತೇನೆ.
ಪ್ರಶ್ನೆ : ನಾಗಪ್ಪನವರ ಶವ ದೊರೆತ ಸ್ಥಳದಲ್ಲಿ ಇನ್ನೊಂದು ಹೆಣ ಇದೆ ಎಂದು ಹಬ್ಬಿರುವುದು ವದಂತಿಯಾ?
ಉತ್ತರ : ಹೆಣ ಇನ್ನೂ ಸಿಕ್ಕಿಲ್ಲವಲ್ಲ. ನೀವು ಮಾಧ್ಯಮದವರು ಸುಮ್ಮಸುಮ್ಮನೆ ಏನೇನೋ ಬರೆಯಬೇಡಿ. ಸಾಕಷ್ಟು ಸಾಕ್ಷ್ಯಗಳು ಸಿಗುವವರೆಗೆ ಕಾದು, ಸತ್ಯವನ್ನಷ್ಟೇ ಬರೆಯಿರಿ. ಗಾಳಿಸುದ್ದಿ ಪ್ರಕಟಿಸಿ, ಹುಯಿಲೆಬ್ಬಿಸಬೇಡಿ.
ಪ್ರಶ್ನೆ : ನಾಗಪ್ಪ ಪ್ರಕರಣವನ್ನು ನೀವು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಜನಾಭಿಪ್ರಾಯವಿದೆ. ಇದಕ್ಕೆ ಏನಂತೀರಿ?
ಉತ್ತರ : ಜನಾಭಿಪ್ರಾಯವನ್ನು ಯಾರು, ಹೇಗೆ ಅಳೆದಿದ್ದಾರೆ? ಅದೂ ಕೂಡ ಕಪೋಲ ಕಲ್ಪಿತವೇ ಆಗಿದೆ. ಇಲ್ಲಸಲ್ಲದ್ದನ್ನು ಹಬ್ಬಿಸುವುದರಲ್ಲಿ ಅರ್ಥವಿಲ್ಲ.
ಮಹದೇವ ಅವರು ವೀರಪ್ಪನ್‌ನಿಂದ ಕೆಸೆಟ್ಟು ಬಂದಿರುವುದನ್ನು ಒಪ್ಪಿಕೊಂಡಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸಿರುವುದಾಗಿ ಹೇಳಿದರು. ಆದರೆ ಅದನ್ನು ಕೇಳಿರುವ ಕೃಷ್ಣ, ಈ ಪರಿಯ ಮೌನ ತಳೆದಿರುವುದು ಯಾಕೋ?
ಈ ಪ್ರಶ್ನೆಗೂ ಕೃಷ್ಣ ಉತ್ತರ- ‘ಕೆಸೆಟ್ಟು ಗೀಸೆಟ್ಟು ಏನೇ ಇರಲಿ, ನಾವು ವೀರಪ್ಪನ್ನ ಹಿಡಿದೇ ತೀರ್ತೇವೆ’.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications