ಕೊಳತ್ತೂರು ಮಣಿ ಜಾಮೀನಿಗೆ ಸರ್ಕಾರದ ತಕರಾರು
ಬೆಂಗಳೂರು : ಮಾಜಿ ಸಚಿವ ಎಚ್.ನಾಗಪ್ಪನವರ ಹತ್ಯೆಯ ನಂತರ ತನ್ನ ನಿಲುವನ್ನು ಬದಲಿಸಿರುವ ಸರ್ಕಾರ, ಕೊಳತ್ತೂರು ಮಣಿಗೆ ಜಾಮೀನು ನೀಡುವುದನ್ನು ವಿರೋಧಿಸಿದೆ.
ವೀರಪ್ಪನ್‌ಗೆ ನೆರವು ನೀಡಿದ್ದು ಸೇರಿದಂತೆ ನಾಲ್ಕು ಪ್ರಕರಣಗಳ ಆರೋಪದಲ್ಲಿ ಜೈಲಿನಲ್ಲಿರುವ ತಮಿಳು ಚಳವಳಿಕಾರ ಕೊಳತ್ತೂರು ಮಣಿಗೆ ಜಾಮೀನು ನೀಡುವುದಕ್ಕೆ ರಾಜ್ಯ ಸರ್ಕಾರದ ವಿರೋಧವಿದೆ ಎಂದು ಮಂಗಳವಾರ (ಡಿ.10) ಸರ್ಕಾರ ಪ್ರಕಟಿಸಿದೆ.
ಮಣಿ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ . ಜಾಮೀನಿಗೆ ಸರ್ಕಾರದ ವಿರೋಧವನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಮೈಸೂರಿನ ಸೆಷನ್ಸ್ ನ್ಯಾಯಾಲಯ ಮಣಿ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದು , ಮಣಿ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಜಾಮೀನು ಅರ್ಜಿ ಹೈಕೋರ್ಟ್ ಮುಂದೆ ಬಂದಾಗ ಸರ್ಕಾರ ತನ್ನ ತಕರಾರು ಸಲ್ಲಿಸಲಿದೆ ಎಂದು ಚಂದ್ರೇಗೌಡ ತಿಳಿಸಿದರು. ಈ ಮುನ್ನ ನಾಗಪ್ಪನವರ ಬಿಡುಗಡೆಗಾಗಿ ವೀರಪ್ಪನ್ ಬಳಿಗೆ ಸಂಧಾನಕಾರನಾಗಿ ತೆರಳಲು ಮಣಿಯಮನ್ನು ಜೈಲಿನಿಂದ ಹೊರತರಲು ಸರ್ಕಾರ ಪ್ರಯತ್ನ ನಡೆಸಿತ್ತು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications