ಸ್ಕಂದ ಪಂಚಮಿ ಉಪವಾಸ ಮತ್ತು ತಬ್ಬಿಕೊಂಡ ಚಳಿ...

*ಎಂ. ವಿನೋದಿನಿ

ಹಾಗೆ ದಿನಗಳು ಕಳೆದು ವಾರಗಳು ಉರುಳಿ ತಿಂಗಳು ಮುಗಿದು ರಂಜಾನ್‌ ಉಪವಾಸ ಮುಗಿಯಿತು. ಈದುಲ್‌ ಫಿತರ್‌ ಹಬ್ಬ ಬಂದು ಹೋಯಿತು.

ಹೊಸ ದಿರಿಸಿನ ಪರಿಮಳ ತಗ್ಗಿದೆ. ಈಗ ಮುಂಜಾನೆಯ ಚಳಿಯ ನೆನಪು ಮತ್ತು ಮರುದಿನ ಬರಲಿರುವ ಚಳಿಯ ನಿರೀಕ್ಷೆ. ಶರತ್ಕಾಲ ಮುಗಿಯುತ್ತಲೇ ಕಾಲಿಟ್ಟ ಚಳಿ. ಬಿರಬಿರನೆ ಉದುರಿಬಿದ್ದ ನಾಲ್ಕು ಹನಿ ಸಂಜೆ ಮಳೆ. ಚಳಿ ಬಂದು ಎರಡೇ ವಾರಕ್ಕೆ ಶುರುಹಚ್ಚಿಕೊಂಡ ಲೋಡ್‌ ಶೆಡ್ಡಿಂಗ್‌. ಕೈ ಕೊಡುವ ಕರೆಂಟು. ಬೆಂಗಳೂರಲ್ಲಿ ಇದ್ದಿದ್ದೇ ಗೋಳು.

ಆದರೆ ನಿಯಮದಂತೆ ಬಂದೆರಗುವ ವೀಕೆಂಡುಗಳು, ಆಚರಣೆಗಳಿಗೆ ಕಡಿಯುವ ಚಳಿ ಹಾಗೂ ಲೋಡ್‌ ಶೆಡ್ಡಿಂಗ್‌ನ ಪರಿವೆಯಿದೆಯೇ ?
ಡಿ. 8 ಭಾನುವಾರ ಸ್ಕಂದ ಪಂಚಮೀ. ಮತ್ತೆ ಕುಕ್ಕೇ ಷಷ್ಠೀ ಹಬ್ಬ.
2002ನೇ ಇಸವಿಯ ಕೊನೆಯ ಹಿಂದೂ ಧಾರ್ಮಿಕ ಹಬ್ಬ- ಷಷ್ಠೀ. ಪಂಚಮಿ ಮತ್ತು ಷಷ್ಠಿಯಂದು ಬೆಳಗಿನ ಚಳಿಯನ್ನು ತಬ್ಬಿಕೊಂಡೇ ಸುಬ್ರಹ್ಮಣ್ಯ ದೇವಸ್ಥಾನದ ಕೆರೆಯಲ್ಲಿ ಮೂರು ಮುಳುಗು ಹಾಕಿ, ಒಳಗಿನ ಪ್ರಾಕಾರದಲ್ಲಿ ಒಂದು ಸುತ್ತು ಉರುಳು ಸೇವೆ, ದೇವಳದ ನಾಲ್ಕು ಮೂಲೆಗಳಲ್ಲಿ ಮತ್ತೆರೆಡು ಬಾರಿ ಉರುಳು ಸೇವೆ ಮಾಡುವ ರಾಶಿಭಕ್ತರು. ‘ಕೈ ಕಾಲಿಗೆ ಸುಖ ಕೊಟ್ಟು ಮನಸ್ಸಿಗೆ ನೆಮ್ಮದಿ ಕೊಡಪ್ಪಾ.. ನಾಗ ಬ್ರಹ್ಮ..’ ಅಂತ ದೇವರ ಪಾದದ ಮೇಲೆ ಬೀಳುವ ರಾಶಿ ರಾಶಿ ಹರಕೆಗಳು.

ನಾಗರ ಕಲ್ಲುಗಳಿವೆ. ಆದರೆ ಹಾವು ಬರುವಷ್ಟು ತಂಪಾದ ಕಾಡು ಪಕ್ಕದಲ್ಲೇ ಇಲ್ಲ. ಬಚಾವ್‌. ಪಂಚಮಿ, ಷಷ್ಠೀ ದಿನ ಹಾಲೆರೆಯುವಾಗ, ಅಲ್ಲೆಲ್ಲೋ ಹಾವು ಬಂದೀತೆಂಬ ಭಯ ಇಲ್ಲ. ಅಲ್ಲಲ್ಲಿ ಇರುವ ನಾಗರ ಕಟ್ಟೆಗಳ ಮುಂದೆ, ಸುಬ್ರಹ್ಮಣ್ಯ ದೇವಸ್ಥಾನಗಳ ಮುಂದೆ ಭಕ್ತರು ಸಾಲಾಗಿ ನಿಲ್ಲುವುದಕ್ಕೆ ಬೇಕಾದಷ್ಟು ವೆರಾಂಡಕ್ಕೆ ಸಿಮೆಂಟು ಹಾಕಿ ನೀಟು ಮಾಡಿರುತ್ತಾರೆ. ಹಾಗೇನೂ ಆಗದೆ ಉಳಿದಿರುವ ದೇವಸ್ಥಾನಗಳ ಜೀರ್ಣೋದ್ಧಾರ ಕಮಿಟಿಯವರು ಆ ಬಗ್ಗೆ ಶತಾಯ ಗತಾಯ ಪ್ರಯತ್ನ ಮಾಡುತ್ತಾರೆ. ನಮ್ಮದು ಅಭಿವೃದ್ಧಿಯ ಪಥದಲ್ಲಿರುವ ದೇಶ ಅಲ್ಲವಾ.

ವರ್ಷದಲ್ಲಿ ನಾಗರ ಪಂಚಮಿ, ಹಾಗೂ ಸ್ಕಂದ ಪಂಚಮಿ, ಕುಕ್ಕೇ ಷಷ್ಠೀ ದಿನಗಳಂದು ನಾಗರ ಕಲ್ಲುಗಳ ಮೇಲೆ ಕ್ಷೀರವಾಹಿನಿ. ಅರಿಶಿಣದ ಪುಡಿಯ ಪ್ರಸಾದ, ಸೀಯಾಳಾಭಿಷೇಕ. ಕುಟುಂಬಕ್ಕೆ ನಾಗನ ದೋಷವಿರಲೀ, ದೋಷದ ಕಾಟ ಇಲ್ಲದಿರಲಿ ನಾಗನಿಗೆ ವಾರ್ಷಿಕ ಅಶನಾರ್ಥ ಸಲ್ಲುತ್ತದೆ.

*

ನಮ್ಮೂರಿನಲ್ಲೂ ಅಷ್ಟೇ. ಪಾಲು ಪಟ್ಟಿ ಆಗಿ, ತುಂಡು ಭೂಮಿಗಳನ್ನು ಮಾರಿಯಾಯಿತು. ಹಿರಿ ಮನೆಯ ನಾಗಬನ ಅಮೆರಿಕಾದಲ್ಲಿರುವ ದೊಡ್ಡಪ್ಪನ ಪಾಲಿಗೆ ಬಂದಿತ್ತು. ಅದನ್ನು ಕೊಳ್ಳುವುದಕ್ಕೆ ಯಾರೂ ಮುಂದೆ ಬರಲಿಲ್ಲ. ನಾಗ ದೋಷದ ಹೆದರಿಕೆ. ಈ ಹಿಂದೂಗಳ ಹಣೆಬರಹವೇ ಇಷ್ಟು ಅಂತ ರೇಗುತ್ತಾ ದೊಡ್ಡಪ್ಪ, ಮುಸ್ಲಿಂ ಹಾಗೂ ಕ್ರೆೃಸ್ತ ಗಿರಾಕಿಗಳನ್ನು ಹುಡುಕಿದರು. ದೊಡ್ಡಪ್ಪನ ರಜೆ ಮುಗಿಯುವುದರೊಳಗೆ ಜಾಗದ ವಿಲೇವಾರಿ ಆಗಿ, ದೊಡ್ಡಪ್ಪನ ಎಲ್ಲ ಲೆಕ್ಕಗಳೂ ಚುಕ್ತ ಆಗಿ ನೆಮ್ಮದಿಯಿಂದ ಫ್ಲೈಟು ಹತ್ತಿದರು.

ಜಾಗ ಕೊಂಡ ಸ್ಟೀಫನ್‌ ಡಿಸೋಜ ಬನವನ್ನು ಕಡಿದು ಮನೆ ಕಟ್ಟಿಕೊಂಡ.

ಬನದಲ್ಲಿದ್ದ ಚೆಂದದ ಎರಡು ಪಾರಿಜಾತದ ಮರ ಮತ್ತೊಂದು ಸಾಗುವಾನಿ ಮರವನ್ನು ಸದಭಿರುಚಿಯ ಸ್ಟೀಫನ್‌ ಹಿತ್ತಿಲಲ್ಲಿ ಇಟ್ಟುಕೊಂಡಿದ್ದಾರೆ. ನಾಗರ ಕಲ್ಲು ಊರಿನ ದೇವಸ್ಥಾನದಲ್ಲಿದೆ. ಪ್ರತಿ ವರ್ಷ ಪಂಚಮಿ, ಷಷ್ಠೀ ಹಬ್ಬಗಳಂದು ಕುಟುಂಬದವರೆಲ್ಲ ಆ ಕಲ್ಲಿಗೆ ಹಾಲೆರೆಯುವುದು ಮಾತ್ರ ನಿಂತಿಲ್ಲ.... ಹಾಗೇ ಮನೆಯ ಹೆಂಗಸರಿಂದ ನಾಗರ ಪಂಚಮಿ ಹಾಗೂ ಸ್ಕಂದ ಪಂಚಮೀ ದಿನಗಳಂದು ಕಟ್ಟು ನಿಟ್ಟಿನ ಉಪವಾಸ ಆಚರಣೆ.

ನೀವೂ ಉಪವಾಸ ಆಚರಿಸುವುದುಂಟಾ ?

ಮುಖಪುಟ / ಲೋಕೋಭಿನ್ನರುಚಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+