ಸಂಧಾನಕಾರನಾಗಿ ಮಣಿ : ಸರ್ಕಾರಕ್ಕೆ ಇನ್ನೊಂದು ಹಿನ್ನಡೆ
ಮೈಸೂರು : ಕೊಳತ್ತೂರು ಮಣಿ ಜಾಮೀನು ಅರ್ಜಿ ವಿಚಾರಣೆಯನ್ನು ಚಾಮರಾಜ ನಗರ ಕೋರ್ಟು 2003 ರ ಜನವರಿ 3ನೇ ತಾರೀಕಿಗೆ ಮುಂದೂಡುವ ಮೂಲಕ ವೀರಪ್ಪನ್ ಜೊತೆ ಸಂಧಾನ ಸಾಧಿಸುವ ಕರ್ನಾಟಕ ಸರ್ಕಾರದ ಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಜ್ಯುಡಿಷಿಯಲ್ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ದೇವರಾಜ್, ಬುಧವಾರ ಕೋರ್ಟಿನ ಮುಂದೆ ಮಣಿ ಜಾಮೀನು ಅರ್ಜಿ ವಿಚಾರಣೆ ಬಂದಾಗ ಅದನ್ನು ಜನವರಿ 3ಕ್ಕೆ ಮುಂದೂಡಿದರು. ಜಾಮೀನು ಅರ್ಜಿಯನ್ನು ಗುರುವಾರ ಮೈಸೂರಿನ ಸೆಷನ್ಸ್ ಕೋರ್ಟ್‌ಗೆ ಕೊಂಡೊಯ್ಯುವುದಾಗಿ ಮಣಿ ಪರ ವಾದ ಮಾಡುತ್ತಿರುವ ಟಿ.ಪ್ರಕಾಶ್ ಹೇಳಿದರು.
ಮಣಿಗೆ ಸಂಬಂಧಿಸಿದ ಎರಡು ಜಾಮೀನು ಅರ್ಜಿಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಳೆದ ವಾರ ಕೊಳ್ಳೇಗಾಲ ಕೋರ್ಟು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಚಾರಣೆ ಮುಂದಕ್ಕೆ ಹೋದ ನಂತರ ಸುದ್ದಿಗಾರರೊಡನೆ ಮಾತಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ, ಜಾಮೀನು ದೊರೆತ ನಂತರವೇ ಕಾಡಿಗೆ ಕಳಿಸುವ ಬಗ್ಗೆ ಮಣಿ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ವಿರೋಧ ಪಕ್ಷಗಳು ಮತ್ತು ವಿವಿಧ ಧಾರ್ಮಿಕ ಮಠಗಳ ಮುಖಂಡರ ಒಮ್ಮತದ ನಿರ್ಣಯದ ನಂತರವೇ ಮಣಿಯನ್ನು ಸಂಧಾನಕಾರರಾಗಿ ಕಳಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಪ್ರಶ್ನೆಯಾಂದಕ್ಕೆ ಚಂದ್ರೇಗೌಡ ಉತ್ತರಿಸಿದರು.
ಕೊಳ್ತತೂರು ಮಣಿಯನ್ನು ಬಂಧಿಸಲು ಕರ್ನಾಟಕದಲ್ಲಿ ತಮಿಳುನಾಡಿನ ವಿಶೇಷ ಪೊಲೀಸ್ ಪಡೆಗಳು ಗಸ್ತು ತಿರುಗುತ್ತಿವೆ ಎಂದು ಕೆಲವು ಮಾಧ್ಯಮಗಳು ಪ್ರಕಟಿಸಿವೆ. ಈ ವರದಿ ಹುರುಳಿಲ್ಲದ್ದು ಎಂದು ಚಂದ್ರೇಗೌಡ ಸ್ಪಷ್ಟಪಡಿಸಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications