ಮಂಗಳೂರಿನ ಮೊದಲ ಸೈಬರ್ ಕಾಮಿಯ ಬಂಧನ
ಮಂಗಳೂರು : ಸಂದೀಪ್ ಶಿವತಾಯ ಎಂಬ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕನನ್ನು ನವೆಂಬರ್ 27ನೇ ತಾರೀಕು ಸಿಓಡಿಯ ಸೈಬರ್ ಅಪರಾಧ ವಿಭಾಗದವರು ಬಂಧಿಸಿದಾಗಿನಿಂದ ಮಂಗಳೂರು ವಿವಿಯಲ್ಲಿ ಇದೇ ಚರ್ಚೆಯ ವಸ್ತು. ಯಾಕೆಂದರೆ, ಸಂದೀಪ್ ಮಂಗಳೂರಿನ ಮೊದಲ ಸೈಬರ್ ಆರೋಪಿ!
ಸಂದೀಪ್ ಮಾಡಿದ್ದಾದರೂ ಏನು ?
ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯಾಬ್ಬಳಿಗೆ ಅಶ್ಲೀಲ ಇ- ಮೇಲ್ ಕಳಿಸುವುದು ಕೊಡಗಿನ ಮೂಲದ ಸಂದೀಪ್ ಚಾಳಿಯಾಗಿತ್ತು. ಪದೇಪದೇ ಈ ಪರಿಯ ಇ- ಮೇಲ್ ನೋಡಿ ಬೇಸತ್ತ ಹುಡುಗಿ ಸೈಬರ್ ಪೊಲೀಸರಿಗೆ ದೂರಿತ್ತಳು. ಕಾರ್ಯ ಪ್ರವೃತ್ತರಾದ ಪೊಲೀಸರು ಈ ಕೆಲಸ ಮಾಡಿದ್ದು ಸಂದೀಪ್ ಎಂಬುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಲೈಂಗಿಕ ಕಿರುಕುಳದ ಆರೋಪದ ಮೇಲೆ ಸಂದೀಪ್ ವಿರುದ್ಧ ಸೈಬರ್ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ.
ಮಂಗಳೂರು ವಿವಿಯ ಕುಲಸಚಿವ ಹನುಮಯ್ಯ ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ- ‘ಸಂದೀಪ್ ನಮ್ಮ ಕಾಲೇಜಿನ ಅತಿಥಿ ಉಪನ್ಯಾಸರಾಗಿದ್ದರು. ಈಗವರು ಪೊಲೀಸರ ಅತಿಥಿ. ನಮ್ಮ ವಿಶ್ವ ವಿದ್ಯಾಲಯದಲ್ಲಿ ಪಾಠ ಮಾಡಲು ಅವರಿಗೆ ಇನ್ನು ಮುಂದೆ ಅವಕಾಶವಿಲ್ಲ’.
ಅಂದಹಾಗೆ, ಇದು ಮಂಗಳೂರಲ್ಲಿ ಪತ್ತೆಯಾಗಿರುವ ಮೊದಲ ಸೈಬರ್ ಅಪರಾಧ. ಕೆಲವು ವಾರಗಳ ಹಿಂದೆ ತಮಿಳುನಾಡು ಪೊಲೀಸರು ಇದೇ ಮಂಗಳೂರು ವಿವಿಗೆ ಬಂದು, ತಮ್ಮ ನಾಡಿನ ಮಂತ್ರಿಯಾಬ್ಬರಿಗೆ ಯಾರೋ ಇ- ಮೇಲ್ ಮೂಲಕ ಇಲ್ಲಿಂದಲೇ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಿ ಕೆಲವು ಮಾಹಿತಿ ಪಡೆದುಕೊಂಡು ಹೋಗಿದ್ದರು. ಹೀಗಾಗಿ ಸಂದೀಪ್ ವಿಚಾರಣೆಯಿಂದ ಹೊಸ ವಿಚಾರಗಳು ಹೊರ ಬರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications