ಪ್ರಥಮ ಪ್ರನಾಳ ಶಿಶು ಸಂಭ್ರಮದಲ್ಲಿ ಮಂಗಳೂರು ಜಿಲ್ಲೆ
ಮಂಗಳೂರು : ಅದು ಮಗು ಹುಟ್ಟಿದ ಸಂದರ್ಭದ ಸಂಭ್ರಮ. ‘ಸಂಗಾತಿ’ ರಿಪ್ರೊಡಕ್ಟಿವ್ ಮೆಡಿಸಿನ್ ಸೆಂಟರ್‌ನಲ್ಲಿ ತುಳುಕುವ ಸಡಗರ. ಡಾ.ಕಿಶನ್ ಸುಳ್ಯ ಹಾಗೂ ಡಾ.ರವೀಂದ್ರನಾಥ್ ಅವರ ಮೊಗದಲ್ಲಿ ಸಾರ್ಥಕ್ಯ. ಅದು ಅಂತಿಂಥ ಮಗುವಲ್ಲ - ಪ್ರನಾಳ ಶಿಶು. ಜಿಲ್ಲೆಯ ಪ್ರಥಮ ಪ್ರನಾಳ ಶಿಶು !
ಸಂಗಾತಿ ನರ್ಸಿಂಗ್ ಹೋಂನಲ್ಲಿ ಮಂಗಳೂರು ಜಿಲ್ಲೆಯ ಪ್ರಥಮ ಪ್ರನಾಳ ಶಿಶು (ಟೆಸ್ಟ್ ಟ್ಯೂಬ್ ಬೇಬಿ) ಗುರುವಾರ (ಜೂ.20) ಜನಿಸಿತು. ಮಗು ಹೆಣ್ಣು , 3.1 ಕೇಜಿ ತೂಕವಿದೆ. ಆರೋಗ್ಯವಾಗಿದೆ.
ಕಳೆದ 10 ವರ್ಷಗಳಿಂದ ಸಂತಾನಭಾಗ್ಯವಿಲ್ಲದೆ ಕೊರಗುತ್ತಿದ್ದ ಅಪ್ಪ ಅಮ್ಮನ ಮಡಿಲು ಈಗ ತುಂಬಿದೆ. ಆದರೆ, ಸದ್ಯಕ್ಕೆ ಪ್ರನಾಳ ಶಿಶುವಿನ ಪೋಷಕರು ವೈಯಕ್ತಿಕ ಕಾರಣಗಳಿಂದ ಅನಾಮಧೇಯರಾಗಿಯೇ ಉಳಿಯಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ವೈದ್ಯರು. ದಕ್ಷಿಣ ಭಾರತದಲ್ಲಿ ಕೆಲವೇ ಕೆಲವು ಆರೋಗ್ಯ ಕೇಂದ್ರ( fertility centres)ಗಳು ಪ್ರನಾಳ ಶಿಶು ಚಿಕಿತ್ಸೆ ಸೌಲಭ್ಯ ಹೊಂದಿದ್ದು , ಅಂಥಾ ಕೇಂದ್ರಗಳಲ್ಲಿ ಸಂಗಾತಿಯೂ ಒಂದು ಎನ್ನುವುದು ವೈದ್ಯರ ಹೆಮ್ಮೆ .
ಪ್ರನಾಳ ಶಿಶುವನ್ನು ಪಡೆಯುವ ಮುನ್ನ ದಂಪತಿಗಳು ಸಂತಾನಕ್ಕಾಗಿ ಅನೇಕ ರೀತಿಯ ಚಿಕಿತ್ಸೆ ಪಡೆದಿದ್ದಾರೆ. ಐವಿಎಫ್, ಐಸಿಎಸ್‌ಐ ಸೇರಿದಂತೆ ಎಲ್ಲ ಚಿಕಿತ್ಸೆಗಳ ನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಂಪತಿಗಳು ಸಂಗಾತಿಯ ಮೊರೆ ಹೊಕ್ಕರು. ಈಗ ಮಡಿಲಲ್ಲಿ ಮಗು! ಮನದಲ್ಲಿ ನಗು !
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications