ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೂ ತಂತ್ರಜ್ಞಾನ ಶಿಕ್ಷಣ : ವಿಪ್ರೋ ಹೆಜ್ಜೆ
ಬೆಂಗಳೂರು: ಹೆಣ್ಣುಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವಿಪ್ರೋದ ಅಜೀಮ್ ಪ್ರೇಮ್‌ಜೀ ಪ್ರತಿಷ್ಠಾನ ಯೂನಿಸೆಫ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಶುಕ್ರವಾರ ಈ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಬೆಂಗಳೂರಿನಲ್ಲಿ ಜರುಗಿತು.
ಭಾರತದಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ನೀಡುವುದರ ಜೊತೆಗೆ ಜಾಗತಿಕ ಗುರಿ ಸಾಧಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯು ಭಾರತದಲ್ಲಿ ಆರಂಭಿಕವಾಗಿ ಕರ್ನಾಟಕದಲ್ಲಿ ಚಾಲನೆ ಪಡೆಯಲಿದೆ. ಉತ್ತರೋತ್ತರದಲ್ಲಿ ಯೋಜನೆಯನ್ನು ದೇಶದ ಇತರ ರಾಜ್ಯಗಳಿಗೆ ವಿಸ್ತರಿಸುವ ಉದ್ದೇಶ ಪ್ರೇಮ್‌ಜೀ ಪ್ರತಿಷ್ಠಾನಕ್ಕಿದೆ.
ಶುಕ್ರವಾರ ನಡೆದ ಸಮಾರಂಭದಲ್ಲಿ ಭಾರತದಲ್ಲಿರುವ ಯುನಿಸೆಫ್ ಪ್ರತಿನಿಧಿ ಮಾರಿಯಾ ಕಲಿವಿಸ್ ಮತ್ತು ಅಜೀಮ್ ಪ್ರೇಮ್‌ಜೀ ಅವರು ಒಪ್ಪಂದ ಪತ್ರಕ್ಕೆ ಪರಸ್ಪರ ಸಹಿ ಹಾಕಿದರು. ಗುಲ್ಬರ್ಗಾ ಜಿಲ್ಲೆಯ ಯಾದಗಿರಿ, ಶಹಾಪುರ, ಜೇವರ್ಗಿ ಹಾಗೂ ಗುಲ್ಬರ್ಗಾ ಗ್ರಾಮಾಂತರ ಪ್ರದೇಶದ ಮತ್ತು ರಾಯಚೂರು, ಮಂಡ್ಯ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು, ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆ, ಉತ್ತಮ ಕಲಿಕಾ ಪರಿಸರ ಸೃಷ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯದ ಸೇರ್ಪಡೆಗೆ ಆದ್ಯತೆ, ಪ್ರಾಥಮಿಕ ಶಿಕ್ಷಣ ಹಂತದಿಂದಲೇ ತಂತ್ರಜ್ಞಾನದ ಅರಿವು ಮೂಡಿಸುವ ಶಿಕ್ಷಣ ರೂಪಿಸುವುದಲ್ಲದೆ, ಮೇಲ್ಕಂಡ ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಪ್ರತ್ಯೇಕ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಅಜೀಮ್ ಪ್ರೇಮ್‌ಜೀ ತಿಳಿಸಿದರು.
(ಪಿಟಿಐ/ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications