‘ನಡಿಗರ್ ತಿಲಕಂ’ ಶಿವಾಜಿ ಗಣೇಶನ್(74)ಅಸ್ತಂಗತ
ಚೆನ್ನೈ : ದಕ್ಷಿಣಭಾರತದ ಪ್ರಸಿದ್ಧ ಸಿನಿಮಾ ನಟ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿಲ್ಲಿಪುರಂ ಚಿನ್ನಯ್ಯ ಗಣೇಶನ್(74) ಶನಿವಾರ ರಾತ್ರಿ 8 ಗಂಟೆಗೆ ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಶಿವಾಜಿಗಣೇಶನ್ ಎಂದೇ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದ ಅವರನ್ನು ‘ತಮಿಳು ಚಿತ್ರರಂಗದ ಭೀಷ್ಮ ’ ಎಂದು ಗೌರವಿಸಲಾಗುತ್ತಿತ್ತು .
ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಶಿವಾಜಿ ಗಣೇಶನ್ ಅಗಲಿದ್ದಾರೆ. ದೀರ್ಘಕಾಲದ ಹೃದ್ರೋಗದಿಂದ ಬಳಲುತ್ತಿದ್ದ ಅವರು 15 ದಿನಗಳ ಹಿಂದೆ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ‘ಛತ್ರಪತಿ ಶಿವಾಜಿ’ ಚಿತ್ರದಲ್ಲಿ ಶಿವಾಜಿ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದ ಅವರು, ಆ ಚಿತ್ರದಿಂದ ಶಿವಾಜಿ ಗಣೇಶನ್ ಎಂದು ಹೆಸರಾದರು. ‘ನಡಿಗರ್ ತಿಲಕಂ’ ಅವರ ಇನ್ನೊಂದು ಪ್ರಸಿದ್ಧ ಚಿತ್ರ.
‘ವೀರಪಾಂಡ್ಯ ಕಟ್ಟಬೊಮ್ಮನ್’ನ ದೇಶಭಕ್ತನ ಪಾತ್ರದಿಂದ ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಗುರ್ತಿಸಲಾಗಿದ್ದ ಶಿವಾಜಿಗಣೇಶನ್ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಸ್ಕೂಲ್‌ಮಾಸ್ಟರ್’ ಹಾಗೂ ‘ಮಕ್ಕಳರಾಜ್ಯ’ ಸಿನಿಮಾಗಳಲ್ಲಿ ಶಿವಾಜಿ ಅವರ ಅಪರೂಪದ ನಟನೆ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರು.
(ಯುಎನ್‌ಐ)