ಏ.18 ಅಥವಾ 19ರಂದು ಜಿ.ಎಸ್.ಎಲ್.ವಿ. ಮರು ಉಡಾವಣೆ
ಬೆಂಗಳೂರು : ಮಾರ್ಚ್ 28ರ ಬುಧವಾರ ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ನಿಗದಿತ ಕಕ್ಷೆಗೆ ಹಾರಲು ಕೆಲವೇ ಕ್ಷಣಗಳಿದ್ದಾಗ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಕೈಬಿಡಲಾಗಿದ್ದ ಮೂರು ಹಂತಗಳ ಜಿಯೋ ಸಿಂಕ್ರೋನಸ್ ಉಪಗ್ರಹ ಉಡ್ಡಯನ ವಾಹನ (ಜಿ.ಎಸ್.ಎಲ್.ವಿ)ಯ ಮರು ಉಡಾವಣೆ ಏಪ್ರಿಲ್ 18 ಅಥವಾ 19ರಂದು ನಡೆಯುವ ಸಾಧ್ಯತೆ ಇದೆ.
ಈ ಸಂಬಂಧ ಇನ್ನು ಒಂದೆರಡು ದಿನದಲ್ಲೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಜಿಎಸ್‌ಎಲ್‌ವಿಯನ್ನು ಮಾರ್ಚ್ 28ರಂದು ಉಡಾವಣೆಗೆ ಸಜ್ಜಾಗಿದ್ದಾಗ, ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಈ ಉಡ್ಡಯನ ಕಾರ್ಯಕ್ರಮವನ್ನೇ ಕೈಬಿಡಲಾಗಿತ್ತು. ಈ ವೈಫಲ್ಯದ ಸಂದರ್ಭದಲ್ಲಿ ವಾಹನಕ್ಕೆ ಹೆಚ್ಚಿನ ಹಾನಿಯೇನೂ ಸಂಭವಿಸಿರಲಿಲ್ಲ. ಈ ಸಂಬಂಧ ಅಮೂಲಾಗ್ರ ಅಧ್ಯಯನ ಮಾಡಿದ ವಿಜ್ಞಾನಿಗಳು ಉಡ್ಡಯನದ ವೈಫಲ್ಯಕ್ಕೆ ಕಾರಣ ಅರಿತಿದ್ದು, ಗ್ಯಾಸ್ ಇಂಜೆಕ್ಟರ್‌ನಿಂದ ಉಂಟಾಗಿದ್ದ ತಾಂತ್ರಿಕ ತೊಂದರೆಯನ್ನು ಈಗ ಪರಿಹರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹಾಳಾಗಿದ್ದ ಗ್ಯಾಸ್ ಇಂಜೆಕ್ಟರ್ ಅನ್ನು ಬದಲಾಯಿಸಲಾಗಿದೆ. ಬೆಂಕಿ ಅನಾಹುತದಿಂದ ಹಾಳಾಗಿದ್ದ ಎಂಜಿನ್ ಹಾಗೂ ಭಾಗಗಳನ್ನೂ ದುರಸ್ತಿ ಮಾಡಲಾಗಿದೆ. ಈಗ ವಾಹನವು ಉಡ್ಡಯನಕ್ಕೆ ಬಹುತೇಕ ಸಜ್ಜಾಗಿದ್ದು, ವಿಜ್ಞಾನಿಗಳು ಅದನ್ನು ಖಾತ್ರಿ ಪಡಿಸಿಕೊಂಡ ಬಳಿಕ ದಿನಾಂಕ ಪ್ರಕಟಿಸಲಿದ್ದಾರೆ ಎಂದೂ ಗೊತ್ತಾಗಿದೆ.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications