ಬಣ್ಣದ ಮೋಹದ ಶುಕ್ರಿ (ಭಾಗ 2)

Vaishali Hegde
(ಕಥೆ ಮುಂದುವರಿದಿದೆ)

ಅಲ್ವೇ? ಈ ಶುಕ್ರಿಗೂ ಆ ಹುಡುಗನಿಗೂ ಹೇಗೋ ಫ್ರೆಂಡ್ಶಿಪ್ ಆಗಿರಬೇಕು. ಊರಿಗೆ ಬಂದಾಗ ಓಡಿ ಹೋಗುವ ಎಂದು ಪುಸಲಾಯಿಸಿರ್ಬೇಕು. ಈ ಮಳ್ಳಿ ಏನೂ ಗೊತ್ತಿಲ್ಲದೇ ಸಿಕ್ಕಿ ಹಾಕ್ಕೊಂಡಿರ್ಬೇಕು ಆ ಜಾಲದಲ್ಲಿ.

ಅಯ್ಯೋ ನಿಮ್ಮ ಲಾಯರ್ ಬುದ್ಧಿ ಎಲ್ಲಿ ಹೋಗುತ್ತದೆಯಲ್ಲವೇ? ಬೇಡದ ದಾರಿಯಲ್ಲಿ ಓಡುವುದೇ ಸೈ ಅದು.

ನೀವೆಲ್ಲ ಏನೇ ಹೇಳಿ, ನಾನಂತೂ ನಿಮ್ಮ ವಾದವನ್ನು ಒಪ್ಪುವುದಿಲ್ಲ. ಶುಕ್ರಿಗೆ ಅಂತ ಗೆಳೆತನ ಇದ್ದರೆ ಆ ಬಾಯ್ಬಡುಕಿ ನನಗೆ ಹೇಳಿರುತ್ತಿದ್ದಳು. ಎಂದು ಸುಮನ ಮಾತು ಮುಗಿಸಿದರೂ ಮನಸ್ಸು ನೋವು ಭಯದಿಂದ ಕುಗ್ಗಿಹೋಗಿತ್ತು. ಇವರ ಲಾಜಿಕ್ ನಿಜವೇ ಆಗಿದ್ದರೆ? ಪಾಪ ಆ ಹೆಣ್ಣುಹುಡುಗಿ ಎಷ್ಟು ಮೋಸಹೊದಳೊ, ನಿಜವಾಗಿಯೂ ಅವಳು ಹಾಗೆ ಓಡಿಹೊಗಿದ್ದಿರಬಹುದೇ? ಇಬ್ಬರೂ ಹಾಲಕ್ಕಿ ಒಕ್ಕಲರೆ. ಓಡಿ ಹೋಗುವ ಪ್ರಸಂಗ ಬರುತ್ತಿರಲಿಲ್ಲ. ಛೆ ಇರಲಿಕ್ಕಿಲ್ಲ. ಸರ ಬಳೆ ಎಂದು ಓಡಾಡುವ ಹುಡುಗಿ ಏನಾದರೂ ಹುಚ್ಚು ಆಸೆಗೆ ಮರುಳಾದಳೆ? ಹಾಗೆಂದು ಇಂತ ಅಪಕಾರ್ಯ ಮಾಡುವಂತ ಮನಸ್ಸಿನವಳಂತೂ ಅವಳಲ್ಲ. ಖಂಡಿತ ಅವಳಿಗೂ ಈ ದರೋಡೆಕೊರರಿಗೂ ಸಂಬಂಧ ಇಲ್ಲ ಎಂದು ತರ್ಕ ವಿತರ್ಕಗಳಲ್ಲಿ ತನ್ನನ್ನು ತಾನೇ ಸಮಧಾನಿಸಿಕೊಳ್ಳುತ್ತಿದ್ದಳು. ಆದರೂ ದೇವಿಗೆ ಏನು ಹೇಳುವುದು. ನಿನ್ನ ಹುಡಿಗಿ ಸಿಕ್ಕರೂ ಸಿಗಬಹುದು ಎಂತಲೇ? ಸಿಕ್ರೆ ಜೈಲಿನಲ್ಲಿರ್ತಾಳೆ ಹೋಗಿ ಬಿಡಿಸಿಕೊಂಡು ಬಾ ಎಂತಲೇ? ಅಯ್ಯೋ ದೇವ್ರೇ ಇದು ಸುಳ್ಳಾಗಲಿ. ಅವಳು ಹೀಗೆ ಸಿಗುವುದಕ್ಕಿಂತಲೂ ಎಲ್ಲೋ ಸುಖವಾಗಿರಲಿ ಎನ್ನಿಸಿಬಿಟ್ಟಿತು.

ಇದಾಗಿ ಸುಮಾರು ಐದಾರು ತಿಂಗಳಾಗಿರಬಹುದೇನೋ. ಮಧ್ಯ ಮಧ್ಯ ದರೋಡೆಯ ಬಗ್ಗೆ ಚಿಕ್ಕಪುಟ್ಟ ಅಪ್ಡೇಟ್ ಬರುತ್ತಿದ್ದರೂ ಮೇಜರ್ ಕನೆಕ್ಷನ್ ಏನೂ ಸಿಕ್ಕಿರಲಿಲ್ಲ. ಒಂದು ಭಾನುವಾರ ಮಧ್ಯಾಹ್ನ ಈ ಹೊಸ ಕೆಲಸದ ಹುಡುಗಿ ಓಡೋಡಿ ಬಂದಳು. ಏನೇ, ರಜೆ ಅಲ್ವೇನೆ ಇವತ್ತು, ಈಗೆಂತಬಂದ್ಯೇ?

ಪಿಚ್ಚರಿಗ್ ಹೋಗಿದ್ದೆ, ಅಲ್ಲಿಂದ ಸೀದಾ ನಿಮ್ಮನೀಗೆ ಓಡ ಬಂದೆ.
ಅಂಥಾದ್ದೇನ್ತಾಯ್ತೆ?
ನೀವು ಹೋಗಿ ಒಂದ್ ಸರ್ತಿ ನೋಡ್ಕಂಬನ್ನಿ ಖರೆ ಹೇಳ್ತೆ, ಆ ಹುಡುಗಿ, ನಮ್ಮ ಶುಕ್ರಿನೆಯ.
ಎಂತದೆ? ತಲೆಬುಡ ಇಲ್ಲ ಸಮ ಬಿಡ್ಸಿ ಹೇಳೇ.
ಪಿಚರ್ ಹೀರೋಯಿನ್ ಗೆಳತಿ ಆಕ್ಟಿಂಗ್ ಮಾಡಿದ ಹುಡುಗಿ ನಮ್ಮ ಶುಕ್ರಿನೆಯ.
ನಿನ್ನ ತಲೆ, ನಿಮಗೆಲ್ಲ ಎಲ್ಲರೂ ಈಗಿತ್ಲಾಗೆ ಶುಕ್ರಿ ಹಾಂಗೆ ಕಾಣ್ತೀರು ಬಿಡು.
ಇಲ್ಲ ಅಮ್ಮ, ನೀವು ಒಂದ್ ಸರ್ತಿ ಹೋಗಿ ನೋಡ್ಕಂಬನ್ನಿ. ದೇವರಾಣೆ ಮಾಡಿ ಹೇಳ್ತೆ. ನಮ್ಮ ಶುಕ್ರಿನೆಯ ಥೇಟ್.

ಪವ್ಡರ್, ಮೇಕಪ್ಪಿನ ಹುಚ್ಚು ಹತ್ತಿದ ಹುಡುಗಿ ಸೀದಾ ಸಿನಮ ಸೇರಿಕೊಂಡಳೆ? ಇರಲಿ, ಇವತ್ತೇ ರಾತ್ರಿ ಶೋಗೆ ಹೋಗಿ ನೋಡುವ ಎಂದುಕೊಂಡು ಮನೋಹರ್ ಬಂದ ಮೇಲೆ ಅವರಿಗೆ ಏನೂ ಹೇಳದೆ, ಒಂದು ಒಳ್ಳೆ ಸಿನಿಮಾವಂತೆ ತುಂಬಾ ದಿನವಾಯಿತು ಹೋಗಿಬರುವ ಎಂದಳು. ಸರಿ, ಹೇಗೂ ಭಾನುವಾರ, ನಡಿ ಎಂದು ಸಿನಿಮಾಕ್ಕೆ ಹೋದರೆ, ಇವಳಿಗೆ ಒಳಗೊಳಗೇ ಆತಂಕ. ಆ ಹುಡುಗಿ ಯಾರು, ತನಗೆ ಗುರುತು ಹತ್ತುವುದೋ, ನಿಜವಾಗಿಯೂ ಶುಕ್ರಿ ತರಾ ಕಾಣುವಳೊ? ಸಿನಿಮಾ ಬಿಟ್ಟ ಮೇಲೆ ಕತೆ ಏನಾಯಿತು ಎಂದು ಒಂದು ಚೂರು ತಲೆಗೆ ಹತ್ತಲಿಲ್ಲ. ಹೌದು, ಅದು ನಮ್ಮ ಶುಕ್ರಿಯೇ ಸೈ. ಆದರೆ ಅಷ್ಟು ಪಾಲಿಶ್ಡ್ ಆಗಿ ಕಾಣುವುದು, ಮಾತನಾಡುವುದು, ಶುಕ್ರಿ ಹೌದಾ? ಮನೆಗೆ ವಾಪಸ್ ಬರುವಾಗ ನಿಧಾನಕ್ಕೆ ಹೇಳಿದಳು, ಆ ಹುಡುಗಿ, ಅದೇ, ಆ ಫ್ರೆಂಡ್ ರೋಲ್ ಮಾಡಿದವಳು ಥೇಟ್ ನಮ್ಮ ಶುಕ್ರಿ ಹಂಗೆ ಇದ್ದಳು ಅಲ್ವ? ಮನೋಹರ್ ಗಹಗಹಿಸಿ ನಕ್ಕುಬಿಟ್ಟರು. "ನಿಂಗೆ ಚಸ್ಮ ನಂಬರ್ ಚೇಂಜ್ ಆಗಿದೆ, ನಾಳೆ ಹೋಗಿ ಸರಿ ಮಾಡಿಸ್ಕೋ."

ಹೌದು, ಈ ಶುಕ್ರಿ ಸಿನಿಮಾಕ್ಕೆ ಸೇರಿದ್ದಾದರೂ ಹೇಗೆ? ಇದ್ದಕ್ಕಿದ್ದಂತೆ ಅಲ್ಲಿಗೆ ಓಡಿ ಹೋಗುವುದೆಂದರೆ ಏನೂ ಸುಲಭವಲ್ಲ. ಇತ್ತೀಚೆಗೆ ಈ ಮಳೆ, ಮಂಜು , ಮಿಂಚು ಎನ್ನುವ ಸಿನಿಮಾಗಳು ಬರತೋಡಗಿದ ಮೇಲೆ ಈ ಕಡೆಗೆ ಸಿನಿಮಾ ಶೂಟಿಂಗ್ ತಂಡ ಬರುವುದು ಹೆಚ್ಚಾಗಿದೆ. ಎಲ್ಲಿ ಯಾಣ, ಗೋಕರ್ಣದ ಬದಿಗೆ ಬಂದವರು, ಇಲ್ಲಿನ ಬೀಚಿಗೆ ಬಂದಿದ್ದರೋ ಏನೋ, ಇವಳೆಲ್ಲಿ ನೋಡಿದಳೋ ಏನು ಕತೆಯೋ. ಅವರೊಂದಿಗೆ ಹೋಗಿಬಿಟ್ಟಳೇನೋ, ಬಣ್ಣಬಣ್ಣದ ಮಾತಿಗೆ, ಬಟ್ಟೆಗೆ ಮರುಳಾಗಿ, ಮರುಳು ಹುಡುಗಿ. ಹೌದು, ಹಾಗೆ ಎಲ್ಲೋ ಆಗಿರಬೇಕು ಎಂದು ಸಮಜಾಯಿಷಿ ಸಿಕ್ಕಂತೆ ಸಮಾಧಾನವಾಯಿತು.

ಮಾರನೆ ದಿವಸ ಸಂಜೆ ದೇವಿ ಕುಣಿಯುತ್ತ ಬಂದಳು. ನನಗೆ ಸುಳಿವು ಹತ್ತಿತ್ತು. ಅಮ್ಮ ಪಿಚ್ಚರ್ ನೋಡೀರಿ? ನಮ್ಮ ಶುಕ್ರಿ ಸಿಲೀಮ್ ನಟಿ ಆಗೀದು ಅಂದು ಮುಖ ಊರಗಲ ಮಾಡಿಕೊಂಡು. "ಹೌದು ನಂಗೂ ಹಂಗೆ ಕಂಡ್ತು. ಅದು ಶುಕ್ರಿನೆ ಇರುದು. ಯಾವ್ದಕ್ಕೂ ಸರಿ ವಿಚಾರಿಸುವಾ" ಎಂದೆ. ಆ ಎರಡು ದಿನದಲ್ಲಿ ಇಡೀ ಒಕ್ಕಲಕೇರಿ ಸಿನೆಮಾ ನೋಡಿ ಮುಗಿಸಿತ್ತು. ಶುಕ್ರಿ ಸಿನೆಮಾದಲ್ಲಿ ಇದ್ದಳೋ ಇಲ್ಲವೋ, ಟಾಕೀಸ್ ಓನರ್ ರಾಯ್ಕರನಂತೂ ಖುಷಿಯಲ್ಲಿದ್ದ. ಇಡೀ ಕರ್ನಾಟಕದ ಕಲೆಕ್ಷನ್ ಹೇಗೋ, ನಮ್ಮೂರಲ್ಲಂತೂ ಈ ಸಿನಿಮಾ ಕಲೆಕ್ಷನ್ ಜೋರಾಗಿರ್ಬೇಕು ಎನ್ನುತ್ತಾ ಮನೋಹರ್ಗೆ ನಗುವುದೊಂದೇ ಕೆಲಸವಾಗಿತ್ತು.

ಈಗ ಒಕ್ಕಲಕೇರಿಯಿಂದ ಒಂದಿಷ್ಟು ಜನ ಬೆಂಗಳೂರಿಗೆ ಹೂರಟಿದ್ದಾರಂತೆ, ಗಾಂಧಿನಗರದಲ್ಲಿ ಶುಕ್ರಿ ಹುಡುಕಾಟಕ್ಕೆ ಎಂದು ಬೆಳಿಗ್ಗೆ ಕೆಲಸಕ್ಕೆ ಬಂದ ಹುಡುಗಿ ವರದಿ ಒಪ್ಪಿಸಿದಳು. ಮಧ್ಯಾಹ್ನ ಇನ್ಸ್ಪೆಕ್ಟರ್ ಫೋನ್ ಬಂತು, ಮೇಡಂ ಆ ದರೋಡೆಕೋರರ ಗುಂಪು ಮುಂಬೈನಲ್ಲಿ ಸಿಕ್ಕಿಬಿದ್ದಿದೆ. ಅವರ ಗುಂಪಿನಲ್ಲಿ ಒಂದು ಹುಡುಗಿಯೂ ಇದ್ದಾಳೆ, ನೀವು ಒಂದ್ಸರ್ತಿ ನಿಮ್ಮ ಆ ಕಳೆದುಹೋಗಿರುವ ಹುಡುಗಿ ಮನೆ ಜನ ಯಾರಾದ್ರೂ ಇದ್ರೆ ಜೊತೆಗೆ ಕರ್ಕೊಂಡಬನ್ನಿ, ಫೊಟೊ ಇದೆ, ಗುರ್ತು ಸಿಗ್ತದ, ಅದೇ ಹುಡುಗಿಯೋ ನೋಡಿ ಹೋಗಿ ಎಂದರು. ಏನೂ ಹೇಳದೆ ಸುಮ್ಮನೆ ಫೋನಿಟ್ಟುಬಿಟ್ಟೆ. ಮನೋಹರ್ಗೂ ತಿಳಿಸಲಿಲ್ಲ.

ಮಾರನೆ ದಿನ ಒಕ್ಕಲಕೆರಿಯಿಂದ ಬಂದಿದ್ದ ಶುಕ್ರಿಯ ಅಣ್ಣ, ದೇವಿಗೆ, ಶುಕ್ರಿ ಸಿಗ್ಲಿ ನಿಮಗೆ, ಬರೀ ನಟಿ ಅಲ್ಲ, ದೊಡ್ಡ ಹೀರೋಯಿನ್ ಆಗ್ಲಿ, ನಾ ಕೇಳ್ದೆ ಹೇಳು ಎಂದೆಲ್ಲ ಹೇಳಿ. ಶುಕ್ರಿಯ ಹೆಸರಿನಲ್ಲಿಟ್ಟಿದ್ದ ಅಕೌಂಟಿನ ಹಣವನ್ನು ಕೊಟ್ಟು, ಇದೆಲ್ಲ ಶುಕ್ರಿ ದುಡಿದದ್ದಾಗಿತ್ತು, ಅವಳಿಗೆ ಮುಟ್ಟಿಸಿಬಿಡಿ ಎಂದು ಕೊಟ್ಟು, ಅವರ ಬಸ್ ಖರ್ಚಿಗೆಂದು ಮತ್ತೊಂದಿಷ್ಟು ಹಣಾ ಕೊಟ್ಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+