ನಮಗೆ ಕನ್ನಡ ಪಾಠ ಮಾಡಿದ ಇನ್ನೊಬ್ಬ ಮೇಷ್ಟ್ರು ಇಲ್ಲವಾದರು
ಮೈಸೂರು : ಕನ್ನಡ ಕಾಳಿದಾಸ ಮಹಾಸಂಪುಟ, ಇಂದ್ರಛಾಪ, ಕೃಷ್ಣಮೇಘ, ಭತೃಹರಿಯ ಶತಕತ್ರಯ ಇತ್ಯಾದಿ ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ ಹೆಸರಾಂತ ಕವಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ ಮೈಸೂರಿನಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಿಧನರಾದರು. ಪರಮೇಶ್ವರ ಭಟ್ಟರಿಗೆ 87 ವರ್ಷ ವಯಸ್ಸಾಗಿತ್ತು. 1914ರ ಫೆಬ್ರುವರಿ 8ರಂದು ಶಿವಮೊಗ್ಗ ಜಿಲ್ಲೆಯ ವಿದ್ಯಾರಣ್ಯಪುರದಲ್ಲಿ ಹುಟ್ಟಿದ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು ಪ್ರೊ. ಎಸ್.ವಿ.ಪಿ. ಎಂದೇ ಖ್ಯಾತರಾಗಿದ್ದರು.
ಭಟ್ಟರು ಕೇವಲ ಸಂಸ್ಕೃತದ ಪ್ರಕಾಂಡ ಪಂಡಿತರಷ್ಟೇ ಅಲ್ಲ, ಆ ಭಾಷೆಯ ಅಂತಃಸತ್ವವನ್ನು ಕನ್ನಡಿಗರಿಗೆ ಪರಿಚಯಿಸಿದ ಸಾಹಿತಿಗಳ ವರ್ಗಕ್ಕೆ ಸೇರಿದವರೂ ಹೌದು. ಮಲೆನಾಡಿನ ಭವ್ಯ ನಿಸರ್ಗದ ಮಡಿಲಲ್ಲಿ ಜನಿಸಿ ಬೆಳೆದ ಭಟ್ಟರು, ಸಂಸ್ಕೃತದ ಕೃತಿಗಳನ್ನು ಕನ್ನಡಕ್ಕೆ ತಂದು ಕನ್ನಡಿಗರಿಗೆ ಸಂಸ್ಕೃತ ಸಾಹಿತ್ಯದ ಪರಿಚಯ ಮಾಡಿಸಿದ್ದರು. ಮಾನಸ ಗಂಗೋತ್ರಿ, ಮಂಗಳ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಎಸ್.ವಿ.ಪಿ. ಅವರಿಗೆ 89-90ರ ಸಾಲಿನಲ್ಲಿ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳನ್ನು ಪಡೆದ ಗೌರವಕ್ಕೆ ಪಾತ್ರರಾಗಿದ್ದ ಭಟ್ಟರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.
ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಗೋಪ, ಗಗನಚುಕ್ಕಿ, ಉಪ್ಪುಕಡಲು, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದವು ಇವರ ಕೃತಿಗಳು.
ವೈದಿಕ ಮನೆತನದಲ್ಲಿ ಹುಟ್ಟಿದ ಭಟ್ಟರು ಒಂದು ವರ್ಷದಲ್ಲೇ ತಾಯಿಯನ್ನೂ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡರೂ ಎದೆ ಗುಂದದೆ, ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬೆಂಗಳೂರಿನಲ್ಲಿ ಪ್ರೌಢ ಶಿಕ್ಷಣ ಪಡೆದು, ಹಲವು ಕಷ್ಟಗಳ ನಡುವೆಯೂ ಎಂ.ಎ ಪದವಿ ಪಡೆದರು. ತಾವು ಬರೆದ ನೀಳ್ಗವನಕ್ಕೆ ಚಿನ್ನದ ಪದಕವನ್ನೂ ಪಡೆದರು. ಇವರ ಚಂದ್ರವೀಥಿ, ಪಾಮರ ಕೃತಿಗಳು ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರಕ್ಕೆ ಪಾತ್ರವಾದವು. ರಾಜ್ಯ ಸರಕಾರ 1970ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತು.
ನಾನು ಕೆರೆ ಕಟ್ಟಲಿಲ್ಲ : ಭಟ್ಟರು ಸೌಜನ್ಯ ಮೂರ್ತಿ, ಅವರು 60ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಆಡಿದ ಮಾತುಗಳು ಅವರ ಸಜ್ಜನಿಕೆಗೆ ಹಿಡಿದ ಕನ್ನಡಿಯಾಗಿದೆ. ಅಂದು ಅವರಾಡಿದ ಮಾತುಗಳು ಏನು ಗೊತ್ತೆ - ‘ ನಾನು ಅರವತ್ತಕ್ಕೆ ಅಡಿ ಇಡುತ್ತಿದ್ದೇನೆ, ಈ ಅವಧಿಯಲ್ಲಿ ನಾನು ಕೆರೆ ಕಟ್ಟಲಿಲ್ಲ, ಬಾವಿ ತೋಡಿಸಲಿಲ್ಲ, ಅರವಟ್ಟಿಗೆ ಇಡಿಸಲಿಲ್ಲ, ತೋಪು ನೆಡಿಸಲಿಲ್ಲ, ಅನ್ನಛತ್ರ ಕಟ್ಟಿಸಲಿಲ್ಲ, ಒಂದು ಗುಡಿಯನ್ನೂ ನಿರ್ಮಿಸಲಿಲ್ಲ, ಜನರಿಗೆ ಉಪಯೋಗ ವಾಗುವಂತಹ ಯಾವುದೇ ಕೆಲಸ ಮಾಡಲಿಲ್ಲ’ 60 ತುಂಬಿದವರು ಕನಿಷ್ಠ ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಮಾಡಬೇಕು.
ಇಂತಹ ವ್ಯಕ್ತಿತ್ವದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರು ನಮ್ಮನ್ನಗಲಿದ್ದಾರೆ. ಶುಕ್ರವಾರ ಸಂಜೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೈಸೂರಿನಲ್ಲಿ ನೆರವೇರಲಿದೆ.
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications