ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?

By: ಬಾಲರಾಜ್ ತಂತ್ರಿ
Subscribe to Oneindia Kannada

ಯಾವುದೇ ತಿಂಗಳಿರಲಿ, ಯಾವುದೇ ಮಾಸವಿರಲಿ, ಹಬ್ಬವಿರಲಿ, ಇಲ್ಲದೇ ಇರಲಿ, 'ಜುಟ್ಟಿನ' ತೆಂಗಿನಕಾಯಿಗೆ ಭಾರೀ ಬೇಡಿಕೆ. ಹಾಗೆಯೆ, ಬುಟ್ಟಿಗಳಲ್ಲಿ ಬೆಚ್ಚಗೆ ಕುಳಿತಿರುತ್ತಿದ್ದ ದಪ್ಪಗಿರುವ ತೆಂಗಿನಕಾಯಿಗೆ 'ಕೊಬ್ಬೂ' ಜಾಸ್ತಿ. ಈಗ ಇದ್ದಕ್ಕಿದ್ದಂತೆ ತೆಂಗಿನಕಾಯಿಯ 'ಕೊಬ್ಬು' ಸ್ವಲ್ಪ ಇಳಿದ ಹಾಗೆ ಕಾಣಿಸುತ್ತದೆ, 'ಜುಟ್ಟು' ಕೂಡ ಕೊಳ್ಳುಗರ ಕೈಗೆ ಸಿಗುತ್ತಿದೆ.

ಇದಕ್ಕೆಲ್ಲ ಕಾರಣ ಸಗಟು ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ರೇಟು ದಿಢೀರನೆ ಕುಸಿದಿರುವುದು. ಮೂವತ್ತು ರುಪಾಯಿ ಬೆಲೆಬಾಳುತ್ತಿದ್ದ ಡುಮ್ಮಗಿನ ಕಾಯಿಯು ಇಪ್ಪತ್ತು ರುಪಾಯಿಗೆ ದಕ್ಕುತ್ತಿದೆ, ಹದಿನೈದರಿಂದ ಇಪ್ಪತ್ತು ರುಪಾಯಿ ಬಾಳುತ್ತಿದ್ದ ಮೀಡಿಯಂ ಕಾಯಿಗಳು ತಮ್ಮ ರೇಟನ್ನು ಹತ್ತು ರುಪಾಯಿಗೆ ಇಳಿಸಿಕೊಂಡಿವೆ. ತೆಂಗಿನಕಾಯಿ ಕಾಯಿ ವ್ಯಾಪಾರಿ ಸ್ವಲ್ಪ ಮಂಕಾಗಿದ್ದಾನೆ.

ಇದಕ್ಕೆ ಕಾರಣಗಳು ಕೂಡ ಹಲವಾರು. ಕೆಳೆದ ಕೆಲ ವರ್ಷಗಳಿಗಿಂತ ಈ ವರ್ಷ ಇಳುವರಿ ನಿರೀಕ್ಷೆಗೂ ಮೀರಿ ಜಾಸ್ತಿಯಾಗಿದೆ. ಜೊತೆಗೆ, ಮದುವೆ, ಮುಂಜಿ ಮತ್ತಾವುದೇ ಶುಭಕಾರ್ಯಗಳಿಗೆ ಅಡ್ಡಗಾಲು ಹಾಕುವ ಆಷಾಢ ಮಾಸ ಆರಂಭವಾಗಿದೆ. ಹೀಗಾಗಿ ತೆಂಗಿನಕಾಯಿಗಳು ಮಂಡಿಯಲ್ಲಿ ಆರಾಮವಾಗಿ ನಿದ್ದೆ ಮಾಡುತ್ತಿವೆ. [ವಿಚಿತ್ರಾನ್ನ : ತೆಂಗಿನಕಾಯಿಗೆ ಜುಟ್ಟು ಶೃಂಗಾರ!]

Why coconut price has fallen steeply in Karnataka

ಬೆಳೆಗಾರ ಕಷ್ಟಪಟ್ಟು ಬೆಳೆದ ತೆಂಗಿನಕಾಯಿಯನ್ನು ಮಾರುಕಟ್ಟೆಯಲ್ಲಿ ಕೇಳುವವರಿಲ್ಲ, ಎಪಿಎಂಸಿ ಯಾರ್ಡಿನಲ್ಲಿ ತೆಂಗಿನಕಾಯಿಯನ್ನು ಇಳಿಸಲೂ ಬಿಡುತ್ತಿಲ್ಲ, ಪಕ್ಕದ ರಾಜ್ಯದಿಂದ ಅಪಾರ ಪ್ರಮಾಣದಲ್ಲಿ ಕರ್ನಾಟಕಕ್ಕೆ ಹರಿದು ಬರುತ್ತಿರುವ ತೆಂಗಿನಕಾಯಿಯಿಂದಾಗಿ ರಾಜ್ಯದ ರೈತ ಮುಂದೇನು ಎಂದು ಕಂಗಾಲಾಗುವಂತಾಗಿದೆ.

ದಕ್ಷಿಣಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರಕನ್ನಡ, ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ತೆಂಗಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ತರಕಾರಿ, ಹಣ್ಣಿನ ಬೆಲೆ ಕಮ್ಮಿಯಾದರೂ, ತೆಂಗಿನಕಾಯಿಯ ಬೆಳೆ ಈ ಮಟ್ಟಿಗೆ ಬಿದ್ದ ಉದಾಹರಣೆಗಳು ತೀರಾ ವಿರಳ. [ನಿಮ್ ಮನೇಲೂ ಇಳಿಗೆಮಣೆಯಲಿ ಕಾಯಿ ತುರೀತಿರಾ?]

Why coconut price has fallen steeply in Karnataka

ಆಷಾಢದ ನಂತರ ಚೇತರಿಕೆ : ಎನ್ಆರ್ ಕಾಲೋನಿಯಲ್ಲಿ ತೆಂಗಿನಕಾಯಿ ಮಂಡಿ ಇಟ್ಟುಕೊಂಡಿರುವ ಹಾಸನದ ಶ್ರೀನಿವಾಸ್ ಅವರು ಪ್ರಕಾರ, ಬೆಲೆ ಇಳಿಕೆ ತಾತ್ಕಾಲಿಕ, ಈಗ ಅಷ್ಟು ವ್ಯಾಪಾರ ಇಲ್ಲದಿದ್ದರೂ ಆಷಾಢ ಮುಗಿದ ನಂತರ ಬೆಲೆ ಏರಿಕೆಯಾಗಬಹುದು ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ. ಅವರು ಹೆಚ್ಚಾಗಿ ತಿಪಟೂರು, ಚನ್ನರಾಯಪಟ್ಟಣಗಳಿಂದ ತೆಂಗಿನಕಾಯಿಗಳನ್ನು ತರಿಸುತ್ತಾರಂತೆ.

ಯಾರ್ಡಿನಲ್ಲೇ ಅಡ್ಡಗಾಲು : ಕಳೆದ ಸುಮಾರು ಒಂದು ದಶಕಗಳಿಂದ ನುಸಿಪೀಡೆ ಸಮಸ್ಯೆಯಿಂದ ಹೆಚ್ಚಿನ ಇಳುವರಿ ಬರದೇ ಕಂಗಾಲಾಗಿದ್ದ ರೈತ, ಈಗ ಬೆಲೆ ಕುಸಿತದಿಂದ ಇನ್ನಷ್ಟು ಬಸವಳಿದಿದ್ದಾನೆ. ತೆಂಗಿನ ತೋಟಕ್ಕೆ ಬಂದು ವ್ಯಾಪಾರ ಕುದುರಿಸುತ್ತಿದ್ದ ಮಧ್ಯವರ್ತಿಗಳು, ಎಪಿಎಂಸಿ ಬಾಗಿಲಿಗೇ ತೆಂಗಿನಕಾಯಿ ಬಂದರೆ 'ಟ್ರ್ಯಾಕ್ಟರ್ ನಿಂದ ಇಳಿಸಬೇಡಿ' ಎಂದು ವಾಪಸ್ ಕಳುಹಿಸುತ್ತಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಎಪಿಎಂಸಿ ಏಷ್ಯಾದಲ್ಲೇ ಪ್ರಸಿದ್ಧಿ ಪಡೆದ ಮಾರುಕಟ್ಟೆ. ಆದರೆ ಇಲ್ಲೂ ಕೂಡಾ ತೆಂಗಿನಕಾಯಿ, ಕೊಬ್ಬರಿ, ತೆಂಗು ಉಪ ಉತ್ಪನ್ನಗಳಿಗೆ ಬೇಡಿಕೆ ಕಮ್ಮಿಯಾಗುತ್ತಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಹತ್ತು ಹದಿನೈದು ದಿನಗಳ ಹಿಂದೆ ಬಂದು ಬಿದ್ದಿರುವ ಕಾಯಿಗಳು ಇನ್ನೂ ಮಂಡಿಯಲ್ಲೇ ನಿದ್ದೆ ಹೊಡೆಯುತ್ತಿವೆ. [ಎಲ್ಲರಂತಲ್ಲ ಮಂಗಳೂರು ಎಳನೀರು ವ್ಯಾಪಾರಿ 'ಮುರುಗನ್ ಮಾಮ']

Why coconut price has fallen steeply in Karnataka

ಕಳೆದ ವರ್ಷ ಸಣ್ಣ ಗಾತ್ರದ ಕಾಯಿ ಹತ್ತು ರೂಪಾಯಿಗೆ, ಮೀಡಿಯಂ ಸೈಜ್ ಹನ್ನೆರಡು ರೂಪಾಯಿಗೆ ಮತ್ತು ದೊಡ್ಡ ಗಾತ್ರದ ಕಾಯಿ ಹದಿನೈದು ರೂಪಾಯಿಗೆ ಮಾರಾಟ ಆಗುತ್ತಿತ್ತು. ಈ ವರ್ಷ ಮೂರು, ಐದು, ಎಂಟು ರೂಪಾಯಿಗೆ ಮಾರಾಟ ಆಗುತ್ತಿದೆ. ಇದು ತಿಪಟೂರಿನ ಕಥೆ. ಬೆಂಗಳೂರಿನಂಥ ನಗರಗಳಲ್ಲಿ ಕಥೆ ಭಿನ್ನವಾಗೇನೂ ಇಲ್ಲ.

ಹೊರ ರಾಜ್ಯಗಳಿಂದ ಪ್ರಮುಖವಾಗಿ ಆಂಧ್ರ ಮತ್ತು ತಮಿಳುನಾಡಿನಿಂದ ತೆಂಗಿನಕಾಯಿ ಕಮ್ಮಿ ಬೆಲೆಗೆ ಮಾರುಕಟ್ಟೆಗೆ ಹರಿದು ಬರುತ್ತಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದು ಎಪಿಎಂಸಿ ಯಾರ್ಡಿನ ಮಧ್ಯವರ್ತಿಗಳ ಮತ್ತು ವ್ಯಾಪಾರಸ್ಥರ ಅಭಿಪ್ರಾಯ.

ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಸಮಾರಂಭಗಳು ಕಮ್ಮಿ ಎನ್ನುವುದನ್ನು ಬಿಟ್ಟರೆ, ವರ್ಷದ ಉಳಿದೆಲ್ಲಾ ತಿಂಗಳಲ್ಲಿ ತೆಂಗಿನಕಾಯಿಗೆ ಬೇಡಿಕೆ ಇದ್ದೇ ಇರುತ್ತದೆ. ಚಟ್ನಿಯಿಂದ ಹಿಡಿದು ತಾಂಬೂಲದ ತನಕ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ 'ಕಲ್ಲವೃಕ್ಷ' ತೆಂಗಿನಕಾಯಿಗೆ ಬೇಡಿಕೆ ಕಮ್ಮಿಯಾಗಿದೆ ಎನ್ನುವುದಕ್ಕಿಂತ, ಅಗಾಧ ಪ್ರಮಾಣದಲ್ಲಿ ಹರಿದು ಬರುತ್ತಿರುವ ಫಸಲೇ ಬೆಲೆಯಿಳಿಕೆಗೆ ಕಾರಣ ಎನ್ನಬಹುದು.

Why coconut price has fallen steeply in Karnataka

ಕರ್ನಾಟಕಕ್ಕೆ ಎರಡನೇ ಸ್ಥಾನ : ಬೆಂಗಳೂರಿನ ನರಸಿಂಹರಾಜ ಕಾಲೋನಿಯ ತೆಂಗಿನಕಾಯಿ ಸಗಟು ವ್ಯಾಪರಿಯೊಬ್ಬರ ಪ್ರಕಾರ, ರಾಜ್ಯದ ತೆಂಗಿನಕಾಯಿಗೆ ಉತ್ತರಭಾರತದಲ್ಲಿ ಬೇಡಿಕೆ ಹೆಚ್ಚು. ಜೊತೆಗೆ ನಮ್ಮ ಬೆಳೆಗಾರರು ಬೆಲೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೇರಳ ಬಿಟ್ಟರ ತೆಂಗಿನಕಾಯಿ ಹೆಚ್ಚು ಉತ್ಪಾದಿಸುವ ರಾಜ್ಯವೆಂದರೆ ಕರ್ನಾಟಕ. ಆದರೂ ಈ ಗತಿ!

ನಮಗೆ ಆಂಧ್ರಪ್ರದೇಶದಿಂದ ಈ ಬಾರಿ ಭಾರೀ ಪ್ರಮಾಣದಲ್ಲಿ ತೆಂಗಿನಕಾಯಿ ಹರಿದುಬರುತ್ತಿದೆ. ಅಲ್ಲಿನ ಬೆಳೆಗಳು ಹೆಚ್ಚುದಿನ ಬಾಳಿಕೆ ಬರುವುದಿಲ್ಲ ಎನ್ನುವುದು ಸತ್ಯವಾದರೂ, ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ಅಲ್ಲಿನ ತೆಂಗಿನಕಾಯಿಯನ್ನು ಖರೀದಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿ ನರಸಿಂಹ ಶೆಟ್ಟಿ.

ಕಳೆದ ಜೂನ್ 27ರಂದು ಹದಿನೈದು ಜಿಲ್ಲೆಯ ತೆಂಗು ಬೆಳೆಗಾರರು ಬಂದ್ ಗೆ ಕರೆನೀಡಿದ್ದರು. ಇದಾದ ನಂತರ ಸ್ವಲ್ಪ ಎಚ್ಚೆತ್ತುಕೊಂಡಿರುವ ಸರಕಾರ ಬೆಂಬಲ ಬೆಲೆ ಮೂಲಕ ತೆಂಗಿನಕಾಯಿ ಖರೀದಿಗೆ ಮುಂದಾಗಿದೆ. ಕ್ವಿಂಟಲ್‌ ಒಂದಕ್ಕೆ 1600 ರೂಪಾಯಿ ನಿಗದಿ ಪಡಿಸಿ, ಕಾಯಿ ಖರೀದಿಗೆ ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆಯನ್ನು ಸರಕಾರ ನೀಡಿದೆ.

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು, ಎಪಿಎಂಸಿ ಯಾರ್ಡಿಗೆ ತೆಂಗಿನಕಾಯಿ ತರುವ ರೈತ ಪಹಣಿ, ಬ್ಯಾಂಕ್‌ ಖಾತೆ, ಆಧಾರ್‌ ಸಂಖ್ಯೆ ಹೊಂದಿರಬೇಕು. ಒಂದು ವೇಳೆ ಆಧಾರ್‌ ಸಂಖ್ಯೆ ಇಲ್ಲದವರಿಗೆ ಸ್ಥಳದಲ್ಲೇ ಆಧಾರ್‌ ನೋಂದಣಿ ಮಾಡಿಸಿ ತೆಂಗಿನಕಾಯಿ ಖರೀದಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ಸರಕಾರ ಭರವಸೆ ನೀಡಿದೆ.

Why coconut price has fallen steeply in Karnataka

ಅಡಿಕೆ ಬೆಳಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಿದೆ, ರಾಜ್ಯದ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಮತ್ತು ಸ್ಥಳೀಯ ಅಡಕೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಅಡಿಕೆ ಆಮದಿಗೆ ತಾತ್ಕಾಲಿಕ ನಿಷೇಧ ಹೇರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವರೂ ಭರವಸೆ ನೀಡಿ ಹೋಗಿದ್ದಾರೆ.

ವಾರ್ಷಿಕ ಸುಮಾರು ಎರಡು ಸಾವಿರ ಕೋಟಿ ವಹಿವಾಟಿನ ತೆಂಗು ಬೆಳೆಯುವ ರೈತರಿಗೆ ಶಾಸ್ವತ ಪರಿಹಾರವನ್ನು ಸರಕಾರ ಕಲ್ಪಿಸಬೇಕಾಗಿದೆ. ಕೇರಳ ಮಾದರಿಯಂತೆ ಒಣಗಿದ ಮರವೊಂದಕ್ಕೆ ಹದಿನೈದು ಸಾವಿರ ಪರಿಹಾರ, ಬದಲಿ ಗಿಡ ನೆಡಲು ಮತ್ತು ಗೊಬ್ಬರಕ್ಕೆ ಹನ್ನೆರಡು ಸಾವಿರ ಪ್ರೋತ್ಸಾಹ ಧನ, ಸಾವಯವ ಕೃಷಿಗೆ ಉತ್ತೇಜನ.. ಹೀಗೆ ಏನಾದರೂ ಸರಕಾರ ರೈತರ ನೋವಿಗೆ ಸ್ಪಂದಿಸಲಿ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 2013ರಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಬಳ್ಳಾರಿಯ ಕನಕದುರ್ಗಮ್ಮ ದೇವಾಲಯಕ್ಕೆ ಅಭಿಮಾನಿಯೊಬ್ಬ 121 ತೆಂಗಿನಕಾಯಿ ಒಡೆದು ಸಿದ್ದು ಮೇಲೆ ಅಭಿಮಾನ ಮೆರೆದಿದ್ದ. ಈಗ ತೆಂಗು ಬೆಳೆಯುವ ರೈತ ಕಂಗಾಲಾಗಿದ್ದಾನೆ, ಮುಖ್ಯಮಂತ್ರಿಗಳೇ ನಿಮ್ಮ ಮಧ್ಯಪ್ರವೇಶ ಇಲ್ಲಿ ತುರ್ತಾಗಿ ಆಗಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The cash less cash crop - Steep fall in coconut prices worries Karnataka farmers. A dream shattered for millions of growers. APMC yards in many places, including Bengaluru are refusing to take the stock as there are no buyers in market.
Please Wait while comments are loading...