ಮಹಿಳೆಯಿಂದ ಮಹಿಳೆ ಮೇಲೆ ಆಸಿಡ್

ಕಲಬುರ್ಗಿ ಜಿಲ್ಲೆಯಲ್ಲಿ ಇಲ್ಲಿಯತನಕ ಆಸಿಡ್ ದಾಳಿಯ ಬಗ್ಗೆ ಯಾರೂ ಕೇಳಿರಲೇ ಇಲ್ಲ. ದೂರದ ಜಿಲ್ಲೆಗಳಲ್ಲಿ ಈ ಘಟನೆಗಳು ನಡೆದಾಗ ಇಲ್ಲಿನ ಜನಗಳು ಕುಳಿತಲ್ಲೆ ಬೆಚ್ಚಿಬಿದ್ದಿದ್ದರು. ಆದರೆ ಜಿಲ್ಲೆಯ ಯಾದಗಿರಿಯಲ್ಲಿ ಹಾಡೇ ಹಗಲು ಬನ್ನಮ್ಮ ಎಂಬುವವಳ ಮೇಲೆ ಆಸಿಡ್ ಎರಚಲಾಗಿದೆ. ಆಕೆಯ ದೇಹ ಶೇ. 25 ಸುಟ್ಟು ಹೋಗಿ ಒಂದು ಕಣ್ಣು ಸಂಪೂರ್ಣ ಊನವಾಗುವ ಸಾಧ್ಯತೆಗಳಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆಕೆಯ ಮಾನಸಿಕ ಸ್ಥಿತಿ ಏರುಪೇರಾಗಿ ದಿಕ್ಕುಗಾಣದೆ ಒಂದೆ ಸಮ ರೋಧಿಸುತ್ತಿದ್ದಾಳೆ. ಅವಳ ರೋಧನಕ್ಕೆ ಸಾಂತ್ವನ ಹೇಳುವ ಶಕ್ತಿ ಬಹುಶಃ ಇಲ್ಲಿ ಯಾರಿಗೂ ಇಲ್ಲ.
ಈ ಆಸಿಡ್ ಪ್ರಕರಣದ ಜಾಡು ಹಿಡಿದು ತನಿಖೆಗೆ ಹೊರಟರೆ ಅತ್ಯಂತ ಕೌತುಕಮಯವಾಗಿರುವ ಸಂಬಂಧಗಳ ಚಿತ್ರ ಕಂಡುಬಂತು. ಬನ್ನಮ್ಮ ಯಾದಗಿರಿಯ ಹೊಸಳ್ಳಿಯವಳಾದರೂ ಆಕೆ ಈಗ ವಾಸವಾಗಿರುವುದು ಯಾದಗಿರಿಯಲ್ಲೆ. ಈಕೆ ಅಂಗನವಾಡಿಯ ಕಾರ್ಯಕರ್ತೆ. ಅಲ್ಲದೆ ಈ ಆಸಿಡ್ ಪ್ರಕರಣ ಮೂಲ ರೂವಾರಿಯಾದ ಹೇಮಾವತಿ ಗಂಡ ರಾಚೋಟಿಸ್ವಾಮಿಯ ಸೋದರ ಸೊಸೆ. ಹೇಮಾವತಿ ಕೂಡ ಮೂಲತಃ ಶಹಾಪುರ ತಾಲೂಕಿನ ಗುರುಸುಣಗಿಯವಳು. ಈಕೆಗೆ ಸುಮಾರು 35 ರಿಂದ 40 ರ ವಯಸ್ಸು. ತನ್ನ ಗಂಡ ರಾಚೋಟಿಸ್ವಾಮಿ - ಬನ್ನಮ್ಮ ಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದು ಈಕೆಯ ಬಲವಾದ ನಂಬಿಕೆ. ಈ ನಂಬಿಕೆಗಳು ಸತ್ಯ ಎನ್ನುವ ಹಲವಾರು ಘಟನೆಗಳು ಸಾಲು ಸಾಲಾಗಿ ನಡೆದದ್ದನ್ನು ಈಕೆ ವಿವರಿಸುತ್ತಾಳೆ.
ಅಂಗನವಾಡೆಯ ಕಾರ್ಯಕರ್ತೆಯಾಗಿರುವ ಬನ್ನಮ್ಮಳದೊಂದು ದುರಂತದ ಬದುಕು. ಈಕೆ ಹರೆಯಕ್ಕೆ ಕಾಲಿಟ್ಟ ದಿನಗಳಲ್ಲಿ ಈಕೆಗೆ ಆಂದ್ರ ಮೂಲಕ ಹುಡುಗನೊಬ್ಬನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆತನ ದುರ್ನಡತೆ ಈಕೆಗೆ ಮುಳುವಾದಾಗ ಬನ್ನಮ್ಮ ಅವನೊಂದಿಗಿನ ತನ್ನ ಸಂಬಂಧಕ್ಕೆ ಎಳ್ಳು ನೀರುಬಿಟ್ಟುಕೊಂಡಳು. ಸ್ವಲ್ಪ ದಿನಗಳ ತರುವಾಯ ಆತನಿಂದ ಕೋರ್ಟ್ ಮೂಲಕ ವಿಚ್ಛೇದನ ಕೂಡ ಪಡೆದಳು. ಆದರೆ ಆ ಮಹಾಶಯನ ಬಳುವಳಿಯಾಗಿ ಬನ್ನಮ್ಮಳ ಮಡಿಲಲ್ಲಿ ಮಗುವೊಂದು ಅದಾಗಲೆ ಬೆಳೆದುನಿಂತಿತ್ತು.

ಇದು ವರ್ಷನಾಗಟ್ಟಲೆ ನಡೆದುಹೋಯ್ತು. ಈ ಕಾರಣಕ್ಕಾಗಿಯೆ ಹೇಮಾವತಿ ತನ್ನ ಗಂಡ ರಾಚೋಟಿಸ್ವಾಮಿಯೊಂದಿಗೆ ಹಲವಾರು ಸಲ ಕಲಹ ಮಾಡಿಕೊಂಡಿದ್ದಳು. ಮುನಿಸುಗಳು ದಿನ ನಿತ್ಯ ಸಹಜವೆನ್ನುವಂತೆ ನಡೆಯುತ್ತಿದ್ದವು. ಹೀಗಾಗಿ ದಾಂಪತ್ಯ ಜೀವನದಲ್ಲಿ ಮುಳ್ಳುಗಳು ಎದ್ದುಬಿಟ್ಟಿದ್ದವು. ಮನೆಯಲ್ಲಿ ತನ್ನ ಎದೆ ಎತ್ತರಕ್ಕೆ ಬೆಳೆದು ನಿಂತ ಗಂಡು ಹೆಣ್ಣು ಮಕ್ಕಳಿಗೂ ತಮ್ಮ ತಂದೆ ತಾಯಿಯ ದಾಂಪತ್ಯ ಜೀವನ ಅಷ್ಟು ಸುಖದಾಯಕವಾಗಿಲ್ಲ ಎಂಬುದು ಸತ್ಯವಾಗಿದ್ದರೂ ಅದನ್ನು ಹೇಳುವ ದಾಷ್ಟ್ಯ ಅವರಾರೂ ತೋರಲಿಲ್ಲ. ಅಥವಾ ಯಾರೇನು ಹೇಳಿದರೂ ರಾಚೋಟಿಸ್ವಾಮಿ ಬನ್ನಮ್ಮಳೊಂದಿಗೆ ಇಷ್ಟುಕೊಂಡಿದ್ದ ಸ್ನೇಹ ಕಡಿದುಕೊಳ್ಳಲು ಬಯಸಿರಲಿಲ್ಲ. ಸುಖಮಯವಾಗಬೇಕಿದ್ದ ಹೇಮಾವತಿಯ ಬದುಕು ಮತ್ತಷ್ಟು ಹಳ್ಳಕ್ಕೆ ಬಿದ್ದದ್ದೇ ಇದೆ ಸಂದರ್ಭದಲ್ಲಿ ಎಂದು ಹೇಳಬೇಕಾಗುತ್ತದೆ.
ಹೇಮಾವತಿಯ ಮತ್ತೊಬ್ಬ ಸಹೋದರಿ ಶಾಂತಾ ಎಂಬುವವಳನ್ನು ಶಹಾಪುರದ ಶಿವಕುಮಾರ ಬಿಲ್ಲಂಕೊಂಡಿಮಠ ಎಂಬುವವರಿಗೆ ಕೊಟ್ಟು ಲಗ್ನ ಮಾಡಲಾಗಿತ್ತು. ಸಹೋದರಿಯಾಗಿದ್ದರಿಂದ ಶಾಂತಾ ಆಗಾಗ ಯಾದಗಿರಿಯ ತನ್ನ ಭಾವನ ಮನೆಗೂ ಬರುತ್ತಿದ್ದಳು. ಹೀಗೆ ಬರುವಾಗ ಶಾಂತಾ ತನ್ನ ಗಂಡನ ಮನೆಯ ಮಾರುತಿ ವ್ಯಾನ್ ತರುತ್ತಿದ್ದಳು. ಈ ಮಾರುತಿ ವ್ಯಾನ್ ಡ್ರೈವರ್ ಆಗಿದ್ದ ರೇವಣಸಿದ್ಧಯ್ಯ ನಾಗಯ್ಯ ಡೇಂಗಿಮಠ ಹದಿ ಹರೆಯದ ಹುಡುಗ. ತೊನೆದಾಡುತ್ತಿರುವ ಯೌವನ. ಮೈ -ಕೈ ತುಂಬಿ ಯಾರ ಕಣ್ಣಾದರೂ ಸ್ವಲ್ಪ ಹಾಯಿಸೋಣ ಎನ್ನಿಸುವ ಅಂಗಸೌಷ್ಠವ.
ಎಲ್ಲಿದ್ದನೋ ರೇವಣಸಿದ್ದಯ್ಯ ಡೆಂಗಿಮಠ :ಅದೇಕೋ ಏನೋ, ಹೇಮಾವತಿ ತನ್ನ 38 ರ ವಯಸ್ಸಿನಲ್ಲೂ ತನ್ನ ಗಂಡ ತನ್ನ ಕಡೆ ತೋರುತ್ತಿರುವ ಅಸಹಕಾರಕ್ಕೆ ಪ್ರತಿಭಟನೆ ಎಂಬಂತೆಯೋ ಏನೋ ಅವಳಿಗೆ ಗೊತ್ತಿಲ್ಲದಂತೆ ತಮ್ಮದೆ ಜಂಗಮ ಜಾತಿಯ ಹುಡುಗ ರೇವಣಸಿದ್ದಯ್ಯ ಡೆಂಗಿಮಠ ಎಂಬ ಹುಡುಗನೊಂದಿಗೆ ತನ್ನ ಒಳ ಬೇಗುದಿಯನ್ನು ಹಂಚಿಕೊಂಡಿದ್ದಾಳೆ. ತನ್ನ ನೋವನ್ನು ಕೊಂಚ ಮರೆಯುವ ಯತ್ನ ಮಾಡಿದ್ದಾಳೆ. ಈ ಹುಡುಗನೊಂದಿಗೆ ಇಟ್ಟು ಕೊಂಡ ಸ್ನೇಹ ಆಕೆಯ ಅರಿವಿಗೆ ಬಾರದಂತೆ ಬೇರೆ ಕಡೆ ತಿರುಗಿದ್ದೆ ಈಕೆಯ ದುರಂತ ಬದುಕಿಗೆ ಸಾಕ್ಷಿಯಾಗಿದೆ.
ರೇವಣಸಿದ್ಧಯ್ಯ ನಾಗಯ್ಯ ಡೆಂಗಿಮಠ ಹೇಳಿಕೇಳಿ ಉಂಡಾಡಿ ಗುಂಡಾ. ಪ್ರವೀಣಶೆಟ್ಟಿಯ ಕರ್ನಾಟಕ ರಕ್ಷಣಾವೇದಿಕೆಯ ಸಕ್ರಿಯ ಕಾರ್ಯಕರ್ತ. ಉತ್ತರ ಕರ್ನಾಟಕ ರಕ್ಷಣಾವೇದಿಕೆಯ ಅಧ್ಯಕ್ಷನೊಂದಿಗೆ ಈತನದು ಗಳಸ್ಯ ಕಂಠಸ್ಯ ಸಂಬಂಧ. ಅನೇಕ ಸಂದರ್ಭಗಳಲ್ಲಿ ಶರಣು ಗದ್ದುಗೆಯ ಜೀಪ್ ಡ್ರೈವರ್ ಕೂಡ. ಇದೆಲ್ಲ ಈತ ಮತ್ತಷ್ಟು ರೊಚ್ಚು ಬೆಳೆಸಿಕೊಳ್ಳಲು ಮತ್ತು ಮಿಂಚಬೇಕೆಂದು ಹೊರಟದ್ದು ಸಹಜವಾಗಿಯೆ ಇದೆ.
ಇದನ್ನೆಲ್ಲ ಸಮೀಪದಿಂದ ಗಮನಿಸಿದ ಹೇಮಾವತಿ ತನ್ನ ಗಂಡ ಬನ್ನಮ್ಮಳೊಂದಿಗೆ ಇಟ್ಟುಕೊಂಡ ಸಂಬಂಧ ಕೆಡಿಸಬೇಕೆಂದು ಸಾಕಷ್ಟು ಪ್ರಯತ್ನಿಸಿದ್ದಾಳೆ. ರೇವಣಸಿದ್ದಯ್ಯ ತನ್ನ ನಾಲ್ಕಾರು ಜನ ಹುಡುಗರೊಂದಿಗೆ ಹೋಗಿ ಬನ್ನಮ್ಮಳಿಗೆ ಈ ಬಗ್ಗೆ ಎಚ್ಚರಿಕೆಯೂ ಕೊಟ್ಟಾಗಿದೆ. ಆದರೆ ಬನ್ನಮ್ಮ ಅದನ್ನು ತಿದ್ದಿಕೊಳ್ಳದ್ದು ಗೊತ್ತಾದಾಗ ಹೇಮಾವತಿಯ ಮಾತಿಗೆ , ಅವಳ ಸ್ನೇಹದ ಸಲುಗೆಗೆ ಕಟ್ಟುಬಿದ್ದ ಡೇಂಗಿಮಠ ತನ್ನ ಗೆಳೆಯರಾದ ರಾಜು ಉಭಾಳೆ, ಶಶಿಕಾಂತ ಮಡಿವಾಳರ್ ಹಾಗೂ ವಿಶ್ವನಾಥ ದಿಗ್ಗಿ ಎಂಬುವವರ ಸಹಾಯ ಪಡೆದು ಬನ್ನಮ್ಮಳ ಮೇಲೆ ಆಸಿಡ್ ಎರಚಿದ್ದಾನೆ. ಇದು ನಡೆದದ್ದು ಯಾವುದೋ ಹಳ್ಳಿಯ ಮೂಲೆ ಮೊಡಕಿನಲ್ಲಿ ಅಲ್ಲ. ಯಾದಗಿರಿ ಮುಖ್ಯ ರಸ್ತೆಯ ಮೇಲೆ. ಅದೂ ಹಾಡು ಹಗಲೆ!
ತನ್ನ ಗಂಡನನ್ನು ಸರಿದಾರಿಗೆ ತರಬೇಕೆಂದು ಹೇಮಾವತಿ ಹೂಡಿದ ಆಟ ಪೋಲಿಸ್ ಇಲಾಖೆಯ ಡಿ.ವೈ.ಎಸ್ಪಿ. ಮಲ್ಲಿಕಾರ್ಜುನ ಡಿ.ಹುಲಿಮನಿ ಎಂಬ ಅಧಿಕಾರಿಯ ನಿಷ್ಪಕ್ಷಪಾತ ತನಿಖೆಯಿಂದ ಬಟಾಬಯಲಾಗಿದೆ. ಸುಖ ಸಂಸಾರದ ಸಡಗರವನ್ನು ಅನುಭವಿಸಿಕೊಂಡು ಇರಬೇಕಾದ ಹೇಮಾವತಿ ತಾನು ತೋಡಿದ ಬಲೆಗೆ ತಾನೆ ಬಿದ್ದು ಕಂಬಿಗಳ ನಡುವೆ ಇದ್ದಾಳೆ. ಅತ್ತ, ಬನ್ನಮ್ಮ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.












Click it and Unblock the Notifications