ಗಾಂಧೀಜಿ ಸಾವು ಬಯಸಿದ್ದ ಚರ್ಚಿಲ್!
ಮಹಾತ್ಮಾಗಾಂಧಿ ಅವರನ್ನು ‘ಅರೆನಗ್ನ ಫಕೀರ’ ಎಂದು ಜರಿದಿದ್ದ ಬ್ರಿಟನ್‌ನ ಅಂದಿನ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್, ಗಾಂಧೀಜಿ ಸಾವನ್ನು ಬಯಸಿದ್ದರೆ?
ಲಂಡನ್‌ನಲ್ಲಿ ಬಿಡುಗಡೆ ಮಾಡಿರುವ ರಾಷ್ಟ್ರೀಯ ದಾಖಲೆಗಳ ಪ್ರಕಾರ ಹೌದು. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಕಾರಾಗೃಹದಲ್ಲಿದ್ದ ಗಾಂಧೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದರೆ ಅವರನ್ನು ಸಾಯಲು ಬಿಡುವಂತೆ ಚರ್ಚಿಲ್ ಸೂಚಿಸಿದ್ದರು.
ಎರಡನೇ ಮಹಾಯುದ್ಧದಲ್ಲಿ ಭಾರತ ಶಸ್ತ್ರ ಹಿಡಿಯಲೇಬೇಕು ಎಂಬ ಬ್ರಿಟನ್ ಕಟ್ಟಪ್ಪಣೆಯನ್ನು ವಿರೋಧಿಸಿದ ಗಾಂಧೀಜಿ ಅಸಹಕಾರ ಚಳವಳಿ ಆರಂಭಿಸಿದ್ದರು. 1942ರ ಆಗಸ್ಟ್‌ನಲ್ಲಿ ಅವರನ್ನು ಬಂಧಿಸಿ ಪುಣೆಯ ಆಗಾಖಾನ್ ಕಾರಾಗೃಹದಲ್ಲಿ ಇರಿಸಲಾಯಿತು.
‘ಆತನನ್ನು ಜೈಲಿನಲ್ಲೇ ಬಿಡಿ. ಏನು ಬೇಕಾದರೂ ಮಾಡಿಕೊಳ್ಳಲಿ. ಉಪವಾಸ ಮಾಡಿ ಜೀವ ಕಳೆದುಕೊಂಡರೆ, ಹಾಗೆಯೇ ಆಗಲಿ’ ಎಂದು ಚರ್ಚಿಲ್ ನಿರ್ಧರಿಸಿದ್ದರು.
ಚರ್ಚಿಲ್ ಅಭಿಪ್ರಾಯ ಹಲವು ಸಂಪುಟ ಸಭೆಗಳಲ್ಲಿ ದಾಖಲಾಗಿದೆ. ಜತೆಗೆ ಗಾಂಧೀಜಿ ಅವರನ್ನು ಎದುರಿಸುವುದು ಹೇಗೆ ಎಂಬ ಗೊಂದಲವೂ ಅವರನ್ನು ಕಾಡುತ್ತಿತ್ತು. ಗಾಂಧೀಜಿ ಉಪವಾಸ ಸಾಯಲಿ ಎಂಬ ಸಂದೇಶವನ್ನು ಭಾರತದ ಅಂದಿನ ವೈಸ್‌ರಾಯ್ ಲಾರ್ಡ್ ವಿಕ್ಟರ್ ಲಿನ್ಲಿತ್‌ಗೌ ಕೆಲವು ಸಚಿವರಿಗೆ ಕಳುಹಿಸಿದ್ದರು.
ಆದರೆ ಗಾಧೀಜಿ ಬಗ್ಗೆ ಕಟುವಾಗಿ ನಡೆದುಕೊಂಡರೆ ಭಾರತದಲ್ಲಿ ತೀವ್ರ ವಿರೋಧ ಎದುರಾಗಬಹುದು ಎಂಬ ಭೀತಿ ಬ್ರಿಟಿಷ್ ಅಧಿಕಾರಿಗಳಿಗಿತ್ತು. ಹಾಗೊಮ್ಮೆ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಬಲಿಯಾದರೆ ದೇಶದಲ್ಲಿ ದಂಗೆಯೂ ನಡೆಯಬಹುದು ಎಂಬ ಹೆದರಿಕೆ ಸಚಿವರಿಗೆ ಇದ್ದಿದ್ದು ಉಪಸಚಿವ ಸರ್ ನಾರ್ಮನ್ ಬ್ರೂಕ್ಸ್ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. 
ಹಾಗೆಂದು ಮಹಾತ್ಮರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆಯೂ ಇರಲಿಲ್ಲ. ಕಾರಾಗೃಹದಿಂದ ಹೊರಬಂದರೆ ಮಹಾಯುದ್ಧ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಗಾಂಧೀಜಿ ಚಳವಳಿ ಆರಂಭಿಸುವುದು ನಿಚ್ಚಳವಾಗಿತ್ತು. ಆದರೆ ಜೈಲಿನಲ್ಲೇ ಉಪವಾಸ ಮಾಡಿ ಜೀವಬಿಟ್ಟರೆ, ಅದರ ಪರಿಣಾಮವೂ ಘೋರ ಎಂಬುದು ತಿಳಿದಿತ್ತು. ಒಟ್ಟಾರೆ ಗಾಂಧೀಜಿ ಬ್ರಿಟನ್ ಪಾಲಿಗೆ ಬಿಸಿ ತುಪ್ಪವಾಗಿದ್ದರು.
1943ರಲ್ಲಿ ಗಾಂಧೀಜಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಬಗ್ಗೆ ಬ್ರಿಟನ್ ಸರಕಾರ ಚಿಂತಿಸುತ್ತಿತ್ತು. ಅಪವಾಸ ಸತ್ಯಾಗ್ರಹ ಮಾಡದಿದ್ದರೂ, ಆರೋಗ್ಯ ಕ್ಷೀಣಿಸಿದ್ದರಿಂದ ಕಾರಾಗೃಹದಲ್ಲೇ ಕೊನೆಯುಸಿರೆಳೆಯಬಹುದು ಎಂಬ ಆತಂಕ ಸರ್ಕಾರಕ್ಕಿತ್ತು. ಕೊನೆಗೆ 1944ರಲ್ಲಿ ಗಾಂಧೀಜಿಯನ್ನು ಬಿಡುಗಡೆ ಮಾಡಲಾಯಿತು. ಅದೇನೇ ಇರಲಿ, ಇಂದಿಗೂ ಗಾಂಧೀಜಿ ವ್ಯಕ್ತಿತ್ವಕ್ಕೆ ಬ್ರಿಟನ್‌ನಲ್ಲಿ ಮಾರುಹೋಗುವವರ ಸಂಖ್ಯೆ ಕಡಿಮೆಯಿಲ್ಲ.
ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಡೇವಿಡ್ ಕ್ಯಾಮೆರೂನ್ 2006ನೇ ವರ್ಷಾಗಮನದ ಮುನ್ನಾದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ,‘ಗಾಂಧಿ ಹೇಳಿದಂತೆ, ಜಗತ್ತಿನಲ್ಲಿ ನಾವು ನೋಡಬಯಸುವ ಬದಲಾವಣೆ ಮೊದಲು ನಮ್ಮಲ್ಲಿ ಬರಬೇಕು’ ಎಂದು ಉಲ್ಲೇಖಿಸಿದ್ದಾರೆ.
(ಸ್ನೇಹ ಸೇತು: ವಿಜಯ ಕರ್ನಾಟಕ)












Click it and Unblock the Notifications