• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಳೆಯಿಂದ ನೊಂದ ನಮ್ಮ ಬೆಂಗಳೂರು ಕಥನ...

By Staff
|
 • ಶಾಲಿನಿ ಹೂಲಿ
 • ಅಬ್ಬಾ... ಏನು ಮಳೆ ಈ ಮಳೆಗೆ ಹೊತ್ತುಗೊತ್ತು ಇಲ್ಲವೇ? ಬಿಡದೇ ‘ಧೋ’... ಎಂದು ಸುರಿಯುವ ಈ ವರುಣನ ಆರ್ಭಟಕ್ಕೆ ಕಡಿವಾಣ ಹಾಕುವವರೇ ಇಲ್ಲವೇ? ಎನ್ನುವಷ್ಟು ಮಟ್ಟಿಗೆ ಜುಗುಪ್ಸೆ ಹುಟ್ಟಿಸಿತು. ಮಲೆನಾಡಿನ ಆ ತುಂತುರು ಮಳೆಯಲ್ಲಿ ಬೆಳೆದ ನಾನು ಬೆಂಗಳೂರು ಮಳೆಗೆ ಹೆದರಿ ಕಂಗಲಾಗಿದ್ದೆ. ಏಕೆಂದರೆ ಇಲ್ಲಿನ ಮಳೆಯ ಆರ್ಭಟದಲ್ಲಿ ಬಿದ್ದರೆ ಯಾವ ಮೊರಿಯಲ್ಲಿ ಸಿಗುತ್ತೀವೋ ಗೊತ್ತಿಲ್ಲ. ಹಾಗಾಗಿ ದಿನವೂ ವಾರ್ತೆಯಲ್ಲಿನ ಮೂನ್ಸೂಚನೆಗನುಗುಣವಾಗಿ ಜಾಕೆಟ್‌, ರೇನ್‌ಕೋಟ್‌, ಛತ್ರಿ, ಸ್ವೆಟರ್‌ ಸಿದ್ಧತೆ ನಡೆಯುತ್ತಿತ್ತು.

  ಎಲ್ಲರಿಗೂ ಭಾನುವಾರ ರಜಾ ದಿನವಾದರೆ ಸುದ್ದಿಯ ಹಿಂದೆ ತಿರುಗುವ ಪತ್ರಕರ್ತರಿಗೆ ಎಲ್ಲಾ ದಿನವೂ ಒಂದೇ. ಸುದ್ದಿಜಾಲದಲ್ಲಿ ಕೆಲಸ ಮಾಡುತ್ತಿರುವ ನಾನು ಪ್ರತಿ ಭಾನುವಾರದಂತೆ ಈ ಭಾನುವಾರವೂ ಲೋಚಗುಟ್ಟುತ್ತ ಬ್ಯಾಗ್‌ ನೇತಿಹಾಕಿಕೊಂಡು ಆಫೀಸಿಗಾಗಿ ಬಸ್‌ಸ್ಟಾಂಪ್‌ ಬಂದೆ. ಪ್ರತಿದಿನದಂತೆ ಬುಸುಗುಡುತ್ತ ಬಸ್‌ ಬಂದೇ ಬಿಟ್ಟಿತು. ಬಾಗಿಲಿಗೆ ನೇತಾಡುತ್ತಿದ್ದ ಜನರನ್ನು ನುಗ್ಗಿ ಒಳಗೆ ಹೋದೆ. ಬಸ್ಸಿನಲ್ಲಿ ತಮ್ಮ ಮಕ್ಕಳು, ತಮ್ಮ ಕುಟುಂಬದವರ ಜೊತೆ ಹರಟೆ ಹೊಡೆಯುತ್ತಾ ಸಂತೋಷವಾಗಿ ಶಾಪಿಂಗ್‌ ಹೊರಟ್ಟಿದ್ದರು. ನಾಲ್ಕು ಟಿಕೆಟ್‌ ಫೋರಂ ಕೊಡಿ, ಬಿಗ್‌ ಬಜಾರ್‌ಗೆ ಮೂರು ಟಿಕೆಟ್‌ ಕೊಡಿ ಎನ್ನುವಾಗ... ನಾನು ಒಂದು ಟಿಕೆಟ್‌ ಸಿಲ್ಕ್‌ ಬೋರ್ಡ್‌ ಕೊಡಿ ಎಂದೆ. ಆ ಜನಜಂಗುಳಿ ಮಧ್ಯೆ ನಿಂತಿದ್ದೆ. ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದ ಜಗಳಗಳು ಮಜವಾಗಿತ್ತು. ನನ್ನ ಜೀವನದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬೆಂಗಳೂರಿನ ಟ್ರಾಫಿಕ್‌ ನೀಡುವ ಸಮಯ ಸಾಕಷ್ಟಿತ್ತು. ಕೈಗೆ ಯಾವುದೇ ಕೆಲಸವಿಲ್ಲದೆ, ಯಾವುದೇ ಯೋಚನೆಗಳಿಲ್ಲದೆ ನೇತಾಡುತ್ತಾ ಅವರಿವರಿಗೆ ಶಪಿಸುತ್ತಾ... ಮೈ ಜಾಡಿಸಿಕೊಂಡು ನನ್ನ ಸಿಲ್ಕ್‌ ಬೋರ್ಡ್‌ ಸ್ಟಾಪ್‌ಗೆ ಇಳಿದೆ.Thatkannada office back side Apartment

  ಒಲ್ಲದ ಮನಸ್ಸಿನಲ್ಲಿ ಆಫೀಸಿನತ್ತ ಭಾರವಾದ ಹೆಜ್ಜೆ ಹಾಕುತ್ತಾ ಹೊರಟೆ... ಆಜ್‌ ಆಫ್‌ ಕೋ ಆಫೀಸ್‌ ಹೈ ಕ್ಯಾ? ಎಂದು ದಾರಿ ಮಧ್ಯೆ ಸಿಕ್ಕ ವಾಚ್‌ಮನ್‌ ಹೆಂಡತಿ ತನ್ನ ಕಂಕುಳದಲ್ಲಿದ್ದ 1ವರ್ಷದ ಮಗುವಿನೊಂದಿಗೆ ಬಂದು ಮಾತನಾಡಿಸಿದಳು. ವಾಚ್‌ಮನ್‌ ನಮ್ಮ ಆಫೀಸಿನ ಕೆಳಭಾಗದಲ್ಲಿನ ವಾಹನ ನಿಲುಗಡೆ ಜಾಗದಲ್ಲಿ ಚಿಕ್ಕದೊಂದು ಮನೆಯಲ್ಲಿ ವಾಸವಾಗಿದ್ದಾರೆ. ಓಡಾಡುವಾಗ ಮಗು ಹುಸೇನ್‌ ಮೂಲಕ ಅವರ ಕುಟುಂಬದ ಪರಿಚಯವಾಗಿತ್ತು. ನಾನು ಜೋತು ಮುಖಮಾಡಿಕೊಂಡು.‘ಹ್ಹಾ ಜೀ ಆಜ್‌ ಭೀ ಆಫೀಸ್‌ ಹೈ’... ಎಂದು ಮಗು ಹುಸೇನ್‌ಗೆ ಮುದ್ದು ಮಾಡಿ ಆಫೀಸಿನ ಒಳಗೆ ನುಗ್ಗಿದೆ. ಸೆಕ್ಯೂರಿಟಿ ಅಂಕಲ್‌ಗೆ ಒಂದು ವಿಶ್‌ ಮಾಡಿ ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಹಾಯ್‌ ಬೆಂಗಳೂರ್‌ ಪೇಪರ್‌ ಎತ್ತಿಕೊಂಡು ಸಿಸ್ಟಮ್‌ ಆನ್‌ ಮಾಡಿ ಕುಳಿತೆ. ಪೇಪರ್‌ನಲ್ಲಿ ಸಾರಾಂಶವನ್ನು ಮೇಲುಕುತ್ತಾ ಕೆಲಸ ಪ್ರಾರಂಭಿಸಿದೆ. ಕೆಲಸ ಮಾಡು ಮಾಡುತ್ತಾ ಹಾಗೇ ತಲ್ಲೀನಳಾದೆ.

  ಸ್ವಲ್ಪ ಹೊತ್ತಿನ ನಂತರ ಸೆಕ್ಯೂರಿಟಿ ವಿಜಯ ಓಡಿ ಬಂದು‘ಮೇಡಂ, ಆಫೀಸಿನ ಹೊರಗೆ ಕಣ್‌ ಹಾಯಿಸಿ ನಿಮ್ಮ ದಟ್ಸ್‌ ಕನ್ನಡ ಓದುಗರಿಗೆ ಗರಂ ಗರಂ ಸುದ್ದಿ ಕೊಡಬಹುದು ಎಂದ. ನಾನು ಕುತೂಹಲ ತಾಳಲಾರದೆ ಒಂದೇ ಜಿಗಿತಕ್ಕೆ ಆಫೀಸಿನ ಟೆರೇಸ್‌ ಹತ್ತಿದೆ. ಅಲ್ಲಿ ನೋಡಿದರೆ ಎಲ್ಲೆಡೆ ನೀರು, ಗಿಜಿ ಗಿಜಿ ಜನ. ಹೊಸೂರು ರಸ್ತೆ ಕೆರೆಯಾಗಿ ನಿಂತಿತ್ತು. ಒಂದು ನಿಮಿಷ ನಾನು ಏನು ನೋಡುತ್ತಿದ್ದೇನೆ ಎಂಬುದನ್ನು ಅರಿಯದಾದೆ. ಕುತೂಹಲ ತಾಳಲಾರದೆ ಆಫೀಸಿನ ಲಿಫ್ಟ್‌ ಹಿಡಿದು ಕೆಳಗೆ ಬಂದೆ ಕೆಳಗೆ ನೀರು ತುಂಬುತ್ತಿತ್ತು. ಮಗು ಹುಸೇನ್‌ನ ಅಪ್ಪ ಮನೆಯಾಳಗೆ ನೀರು ಹೋಗಬಾರದೆಂದು ಬಿಡುವಿಲ್ಲದೆ ಮಣ್ಣಿನ ಚೀಲವನ್ನು ಅಡ್ಡಗಟ್ಟತೊಡಗಿದ. ನಾನು ಈ ಸಮಸ್ಯೆಯಿಂದ ನೀರಿನಲ್ಲಿ ಕಾಲಿಡಲಾಗದೇ, ಹೋಗುವವರನ್ನು ಬರುವವರನ್ನು ವಿಚಾರಿಸತೊಡಗಿದೆ. ಆಗ ತಿಳಿದು ಬಂತು... ನಾಲ್ಕು ದಿನದಿಂದ ನಗರದಲ್ಲಿ ಸುರಿದ ಭಾರೀ ಮಳೆ. ಮಳೆಯಿಂದ ಬಿಟಿಎಂ, ಮಡಿವಾಳ ಕೆರೆಗಳು ತುಂಬುವುದರ ಜೊತೆಗೆ ಬೆಂಗಳೂರಿನ ದೊಡ್ಡ ದೊಡ್ಡ ಮೋರಿಗಳೆಲ್ಲಾ ಒಡೆದು ಹೊಸೂರು ರಸ್ತೆ ಆವರಿಸಿತ್ತು. Thatkannada front hosur road

  ತಕ್ಷಣ ಆಫೀಸಿನ ಒಳಗೆ ಬಂದೆ ಲಿಫ್ಟ್‌ಗಾಗಿ ಬಟನ್‌ ಒತ್ತಿದೆ. ಹೊಸೂರು ರಸ್ತೆಗಷ್ಟೇ ಸಮಸ್ಯೆಯಾಗಿದ್ದ ನೀರು ಈಗ ಕ್ರಮೇಣ ಎಲ್ಲಕಡೆಗೆ ವ್ಯಾಪಿಸುತ್ತಿತ್ತು. ಲಿಫ್ಟ್‌ ಹಾಳಾದ ಪರಿಣಾಮ 5ನೇ ಅಂತಸ್ತಿನಲ್ಲಿದ್ದ ನಮ್ಮ ಆಫೀಸಿಗೆ ಮೆಟ್ಟಿಲು ಹತ್ತಿಯೇ ಹೋದೆ. ಒಳಗೆ ಬಂದು ನನ್ನ ಸಹದ್ಯೋಗಿ ರೇವಣ್ಣ ಅವರಿಗೆ, ನೀರು ತುಂಬಾ ತುಂಬಿಕೊಂಡಿದೆ ಎಂದು ಹೇಳಿದೆ. ರೇವಣ್ಣ ಸುದ್ದಿ ಬರೆಯೋಣ ಅಂದರು. ಸರಿ ಎಂದು ನಾನು ಅಫೀಸಿನ ರವಿಯರಿಗೆ ಕ್ಯಾಮರಾ ಕೇಳಿದೆ. ಅದೃಷ್ಟ ವಶಾತ್‌ ಅವರು ಆಗಾಗಲೇ ಕಣ್ಣುಕೊರೆಯುವ ಹೊಸೂರು ರಸ್ತೆ ದೃಶ್ಯವನ್ನು ಕ್ಯಾಮರಾದ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದರು.

  ಒಂದು ಚಿಕ್ಕ ಸುದ್ದಿಬರೆದು, ಫೋಟೋ ಸಮೇತ ನಮ್ಮ ಓದುಗರಿಗೆ ಇಲ್ಲಿನ ಪರಿಸ್ಥಿತಿಯ ಬಗೆ ್ಗ ಕೊಂಚ ಮನವರಿಕೆ ಮಾಡಿಕೊಟ್ಟೆವು.

  ಆನಂತರ ಸಂಜೆ 4.30ರವರೆಗೆ ಕೆಲಸ ಮಾಡಿ ಮನೆಗೆ ಹೊರಟು ನಿಂತೆ. ಇಲ್ಲಿನ ಪರಿಸ್ಥಿತಿ ಏನಾಗಬಹುದೆಂಬ ದುಗುಡವಿತ್ತು. ಜಿಟಿ ಜಿಟಿ ಮಳೆಯಲ್ಲಿ ಬಸ್‌ ಹತ್ತಿ ಮನೆಗೆ ಬಂದೆ. ಅಪ್ಪಾಜಿಗೆ ನಮ್ಮ ಆಫೀಸ್‌ ಎದುರಿನ ಸುದ್ದಿ ಹೇಳಿದೆ. ಅಪ್ಪ ಅಷ್ಟರಲ್ಲಿ ಟೀವಿಯ ಮೂಲಕ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದರು.

  ಅಂದು ಸಾಯಂಕಾಲ ಮಳೆ ಜೋರಾಗಿ ಬೀಳತೊಡಗಿತು. ಮೊದಲೇ ಮಾಯವಾಗಿದ್ದ ಹೊಸೂರು ರಸ್ತೆ ನದಿಯಂತೆ ತೆಲುತ್ತಿರಬಹುದೇನೋ ಎಂದು ಊಹಿಸಿಕೊಂಡು ಅಂದು ರಾತ್ರಿ ಕಳೆದೆ. ಮಾರನೆಯ ದಿನ ಸಿಲ್ಕ್‌ ಬೋರ್ಡ್‌ಗೆ ಇಳಿದಾಗ ತಿಳಿಯಿತು. ಹೊಸೂರು ರಸ್ತೆಗೆ ಸುನಾಮಿ ಬಂದಿದೆ ಎಂದು ! ನಮ್ಮ ಆಫೀಸು ಭಾಗಶಃ ನೀರಿನಲ್ಲಿ ನಿಂತಿತ್ತು. ಎಷ್ಟೋ ವಾಹನಗಳು ಆ ನೀರಿನ ಆರ್ಭಟವನ್ನು ಎದುರಿಸಲಾಗದೆ, ಅಲ್ಲಲ್ಲೇ ನೀರಿನ ಮಧ್ಯೆ ನಿಂತು ಬಿಟ್ಟಿದ್ದವು. ಅನಾಹುತ ತಡೆಗಾಗಿ ಟ್ರಾಫಿಕ್‌ ಪೊಲೀಸರು, ಆಂಬ್ಯುಲೆನ್ಸ್‌ , ಕ್ರೇನ್‌ ಎಲ್ಲರೂ ಬಂದು ನಿಂತಿದ್ದರು. ಎಷ್ಟೇ ವ್ಯವಸ್ಥೆ ಮಾಡಿದರೂ ನೀರಿನಲ್ಲಿ ತೇಲುವವರ, ಬಿಳುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಪರಿಸ್ಥಿತಿ ಗಂಭೀರವಾದಾಗ ಆಫೀಸ್‌, ಶಾಲಾ, ಕಾಲೇಜ್‌ಗಳಿಗೆ ರಜಾ ಘೋಷಿಸಲಾಯಿತು.

  ವರುಣನ ವಿಕೋಪಕ್ಕೆ ಎರಡು ದಿನಗಳ ಕಾಲ ಮಹಾನಗರ ತಲ್ಲಣಗೊಂಡಿತ್ತು. ವರುಣ ಶಾಂತನಾದಾಗ ನಗರದ ದೃಶ್ಯಗಳೇ ಬದಲಾಗಿದ್ದವು. ರಸ್ತೆಗಳ ಸಂಪರ್ಕ ಕಡಿದು ಬಿದ್ದಿದ್ದವು. ವಾಹನಗಳಿಲ್ಲದೇ ರಸ್ತೆಗಳು ಭಣ ಭಣವಾಗಿದ್ದವು. ನೀರಿನಲ್ಲಿ ಕೊಚ್ಚಿಹೋದ ದೇಹಗಳು ಮೋರಿಗಳಲ್ಲಿ ತೇಲತೊಡಗಿದ್ದವು.

  ಸರ್ಕಾರದ ನಿರ್ಲಕ್ಷಕ್ಕೆ ಜೆ.ಪಿ.ನಗರ, ಬಿಟಿಎಂ ಲೇಔಟ್‌, ಕೋರಮಂಗಲ, ಬೊಮ್ಮನಹಳ್ಳಿ, ಮಡಿವಾಳ, ಎಚ್‌ಎಸ್‌ ಆರ್‌ ಲೇಔಟ್‌ನಲ್ಲಿನ ಸಾವಿರಾರು ಮನೆಗಳು ಮುರಿದು ಬಿದ್ದವು. ಸರ್ಕಾರ ದೊಡ್ಡ ದೊಡ್ಡ ಬಿಲ್ಡಿಂಗ್‌, ಫ್ಲೈಓವರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು , ಸಮಸ್ಯೆ ಪರಿಹಾರದ ಮೂಲ ಸೂತ್ರಗಳಾದ ಸುವ್ಯವಸ್ಥಿತ ಒಳಚರಂಡಿ, ಅಚ್ಚುಕಟ್ಟಾದ ರಸ್ತೆ ಕಾಮಗಾರಿ, ಮುಂತಾದವುಗಳತ್ತ ಗಮನ ಹರಿಸಲಿ ಎಂಬುದು ಸಮಸ್ಯೆ ಅನುಭವಿಸಿದವರ ಅಂಬೋಣ...

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more