ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಕವಿ ಕುವೆಂಪು ನಿವಾಸ ಫೆ.2ರಿಂದ ರಾಷ್ಟ್ರೀಯ ಸ್ಮಾರಕ

By Staff
|
Google Oneindia Kannada News

ಶಿವಮೊಗ್ಗ : ಮನುಜ ಮತ ವಿಶ್ವ ಪಥ - ವಿಶ್ವ ಮಾನವ ಸಂದೇಶವನ್ನು ಜಗತ್ತಿಗೇ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರು ಹುಟ್ಟಿ ಬೆಳೆದ ಮಲೆನಾಡಿನ ಮಡಿಲಲ್ಲಿ ಹಚ್ಚ ಹಸುರಿನ ನಡುವೆ ಕಂಗೊಳಿಸುತ್ತಿರುವ ಕುಪ್ಪಳ್ಳಿಯ ನಿವಾಸ ಈಗ ನವೀಕರಣಗೊಂಡು ರಾಷ್ಟ್ರೀಯ ಸ್ಮಾರಕವಾಗಿ ರೂಪುತಳೆದಿದೆ. ಫೆ.2ರಂದು ಈ ಸ್ಮಾರಕವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.

ಕವಿಯ ತವರು ಕುಪ್ಪಳ್ಳಿಯನ್ನು ಅಭಿವೃದ್ಧಿ ಪಡಿಸಲು 1993ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುವೆಂಪು ಅವರ ಮನೆ ಹಾಗೂ ಪರಿಸರವನ್ನು ಸಂರಕ್ಷಿಸುವ ಹಾಗೂ ಅವರ ನೆನಪವನ್ನು ಸದಾ ಹಸಿರಾಗಿರಿಸಲು, ಹಾಗೂ ಇದನ್ನೊಂದು ಸ್ಫೂರ್ತಿಯ ಸೆಲೆಯಾಗಿ ಉಳಿಸಲು ಮೂಲ ನಿವಾಸಕ್ಕೆ ಧಕ್ಕೆ ಬಾರದಂತೆ ಪುನರ್ನವೀಕರಿಸಿದೆ.

ಕುವೆಂಪು ಅವರ ನಿವಾಸದ ನವೀಕರಣ ಹಾಗೂ ಕವಿಶೈಲದ ಸ್ಮಾರಕ ನಿರ್ಮಾಣಕ್ಕೆ 1.20 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಈ ವೆಚ್ಚವನ್ನು ರಾಜ್ಯ ಸರಕಾರ ಹಾಗೂ ಕವಿಯ ಅಭಿಮಾನಿಗಳು ಭರಿಸಿದ್ದಾರೆ. ಈ ವಿಷಯವನ್ನು ಪ್ರತಿಷ್ಠಾನದ ಅಧ್ಯಕ್ಷರೂ ಹಾಗೂ ನ್ಯಾಯಮೂರ್ತಿಗಳೂ ಆದ ಎನ್‌.ಡಿ. ವೆಂಕಟೇಶ್‌ ತಿಳಿಸಿದ್ದಾರೆ.

ಫೆ. 2ರಂದು ನಡೆಯುವ ಕಾರ್ಯಕ್ರಮದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು ಕಾರ್ಯಕ್ರಮದ ನಿಮಿತ್ತ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು. ಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಕವಿಶೈಲದ ಸ್ಮೃತಿಗಳನ್ನು ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್‌. ಅನಂತಮೂರ್ತಿ , ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರೂ ಸೇರಿದಂತೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕುವೆಂಪು ಅವರ ಸಾಹಿತ್ಯ ವರ್ತಮಾನದ ಕಣ್ಣಲ್ಲಿ , ಕುವೆಂಪು ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ, ಕುವೆಂಪು ಸಾಹಿತ್ಯದ ವೈಚಾರಿಕ ನೆಲೆಗಳು ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ. ನ್ಯಾ. ಕೋ. ಚನ್ನಬಸಪ್ಪ, ಪ್ರೊ. ಬಿ.ಎಂ. ಕುಮಾರ ಸ್ವಾಮಿ, ಪ್ರೊ. ಜಿ.ಕೆ. ಗೋವಿಂದರಾವ್‌, ಪ್ರೊ. ಜಿ.ಎಚ್‌. ನಾಯಕ, ಪ್ರೊ. ಪ್ರಧಾನ್‌ ಗುರುದತ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಗೋವಿಂದೇಗೌಡ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ನಾರಾಯಣ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹರಿಕುಮಾರ್‌, ವಾರ್ತಾಧಿಕಾರಿ ರಾಮೇಗೌಡ ಹಾಜರಿದ್ದರು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X