ರಂಗಾಯಣದ ನಿರ್ದೇಶಕರಾಗಿ ಜನಪ್ರಿಯ ರಂಗಕರ್ಮಿ ಪ್ರಸನ್ನ
ಬೆಂಗಳೂರು : ಕರ್ನಾಟಕದ ರಂಗಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ ನಾಟಕಕಾರ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಶನಿವಾರ ಪ್ರಕಟಿಸಿದ್ದಾರೆ.
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಈಗಿನ ನಿರ್ದೇಶಕ ಸಿ. ಬಸವಲಿಂಗಯ್ಯ ಅವರ ಅವಧಿ ಕೊನೆಗೊಳ್ಳಲಿದ್ದು, ನಿರ್ದೇಶಕರ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು . ಈ ನಡುವೆ ಬಸವಲಿಂಗಯ್ಯನವರು ತಮ್ಮ ಅವಧಿ ವಿಸ್ತರಣೆಗಾಗಿ ಪ್ರಯತ್ನಿಸುತ್ತಿದ್ದರು. ಆರ್. ನಾಗೇಶ್ ಮತ್ತು ಸುರೇಶ್ ಅನಗಳ್ಳಿ ಅವರ ಹೆಸರನ್ನೂ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಸೂಚಿಸಲಾಗಿತ್ತು.
ಈ ಮುನ್ನ ರಂಗಾಯಣ ನಿರ್ದೇಶಕರನ್ನು ಆರಿಸುವ ಸಮಿತಿಯು, ನಿರ್ದೇಶಕರ ಹುದ್ದೆಗಾಗಿ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ದುಡಿಯುತ್ತಿರುವ ಲಿಂಗದೇವರು ಹಳೆಮನೆ ಅವರನ್ನು ಹೆಸರಿಸಿತ್ತು . ಆದರೆ, ಸಿಐಐಎಲ್ ಲಿಂಗದೇವರು ಅವರನ್ನು ರಂಗಾಯಣದ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ಬಿಟ್ಟುಕೊಡಲು ನಿರಾಕರಿಸಿದ್ದರಿಂದ, ಮತ್ತೊಬ್ಬ ನಿರ್ದೇಶಕರ ಆಯ್ಕೆ ಅನಿವಾರ್ಯವಾಯಿತು.
ರಂಗಭೂಮಿಯಲ್ಲಿ ದಶಕಗಳಿಂದಲೂ ದುಡಿಯುತ್ತಿರುವ ಪ್ರಸನ್ನ , ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಬೆಳೆದವರು. ನಂತರ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಇತ್ತೀಚೆಗೆ ಪ್ರಸನ್ನ ಅವರು ತಮ್ಮನ್ನು ದೇಸೀ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆಯೇ ಪ್ರಸನ್ನ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಉದ್ದೇಶಿಸಿದ್ದರೂ ಪ್ರಸನ್ನ ಅವರ ಒಪ್ಪಿಗೆಗಾಗಿ ಕಾಯಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications