ಮಾಜಿ ಕವಿಯ ಪ್ರಲಾಪ
*ನಟರಾಜ
ನಾನೂ ಒಂದು ಕಾಲದಲ್ಲಿ
ಕಾವ್ಯ ಬರೆಯುತ್ತಿದ್ದೆ ಸ್ವಾಮೀ,
ಕಾವ್ಯ ಎಂದರೆ ಪಂಪ-ರನ್ನ - ಜನ್ನ - ಪೊನ್ನ-
ಕುಮಾರವ್ಯಾಸರು ಬರೆದಂಥಾ
ಮಹಾ ಕಾವ್ಯಗಳಲ್ಲಾ
(ಇವನೇನೊ ಮಹಾ,
ಕಾವ್ಯ ಬರೆಯುತ್ತಾನಂತೆ
ಎಂದು ಹಂಗಿಸಿದವರಿಗೂ
ಕೊರತೆ ಇರಲಿಲ್ಲ )
ಎಲ್ಲೋ ಆಗೊಮ್ಮೆ ಈಗೊಮ್ಮೆ
ಹಮ್ಮಿ ಧುಮ್ಮಿಕ್ಕಿ ಬಂದ
ಭಾವಗಳೆಲ್ಲವನ್ನೂ ಬರೆದಿಡಲು ದಮ್ಮಿಲ್ಲದೆ
ಆಯ್ದು ತೇಯ್ದು ನೇಯ್ದು
ಅಳೆದು ಸುರಿದು ಹೊಯ್ದು
ಭಾವಗಳೇ ಬತ್ತಿ ಹೋಗಿ
ಸರಿಯಾಗಿ
ಮೂಡಿಲ್ಲವೆಂದು ಬಯ್ದು
ಹಾಗೂ ಉಳಿದದ್ದನ್ನು
ಹೆಣೆದು ಪೋಣಿಸಿದಾಗ
ಮೂಡಿ ಬಂದದ್ದು
ಮೂರು ನಾಲ್ಕು ಅಥವಾ ಐದು
ಅವುಗಳಲ್ಲೂ
ಒಂದಕ್ಕೆ ಛಂದಸ್ಸಿಲ್ಲ
ಇನ್ನೊಂದಕ್ಕೆಚೆಂದವಿಲ್ಲ
ಮತ್ತೊಂದರಲ್ಲಿ ಲಾಲಿತ್ಯವಿಲ್ಲ
ಮಗದೊಂದೋ ಸಾಹಿತ್ಯವೇ ಅಲ್ಲ
ಕೊನೆಯದೊಂದಾದರೂ
ಹಿಡಸೀತೇನೋ ಓದುಗರಿಗೆ
ಅಚ್ಚಳಿಯದೇ
ಮೆಚ್ಚುಗೆಯ ಗಳಿಸುವುದೇನೋ
ಎಂದೆಲ್ಲಾ ಗಾಳಿ ಗೋಪುರಗಳ
ಕಟ್ಟುತ್ತಿರುವಾಗಲೇ
ನಾನು ‘ಮಾಜಿ ಕವಿ’ ಆಗಿಬಿಟ್ಟೆ
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications