ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಪನ ಪೆಂಪು ಜಿನಸೇನನಿಂದ ಕೊಂಡದ್ದೆ ?

By Staff
|
Google Oneindia Kannada News

* ಚ.ಹ. ರಘುನಾಥ

ಮಂಡ್ಯ : ತಮಿಳು ಕವಿ ತಿರುವಳ್ಳುವರ್‌ ಅವರ ತಿರು-ಕ್ಕು-ರು-ಳ್‌ ಕೃತಿಗೆ ಪಂಪಭಾರತ ಋಣಿಯಾಗಿದೆ ಎಂದು ಕೆಲವು ವರ್ಷಗಳ ಹಿಂದೆ ಹಿರಿಯ ಸಾಹಿತಿ, ಗೋಕರ್ಣದ ವಯೋವೃದ್ಧ ಗೌರೀಶ ಕಾಯ್ಕಿಣಿ ಬರೆದ ಲೇಖನವೊಂದು ಪತ್ರಿಕೆಯ ಪುರವಣಿಯಲ್ಲಿ ಪ್ರಕಟವಾಗಿತ್ತು . ಆ ಲೇಖನಕ್ಕೆ ಪರೀಕ್ಷೆಯಲ್ಲಿ ಪಕ್ಕದ ವಿದ್ಯಾರ್ಥಿಯಿಂದ ಮತ್ತೊಬ್ಬ ವಿದ್ಯಾರ್ಥಿ ನಕಲು ಮಾಡುತ್ತಿರುವಂತೆ ತಿರುವಳ್ಳುವರ್‌ ಹಾಗೂ ಪಂಪನ ಚಿತ್ರವೊಂದನ್ನು ವ್ಯಂಗ್ಯಚಿತ್ರಕಾರ ನರೇಂದ್ರ ಚಿತ್ರಿಸಿದ್ದರು. ಅದೆಲ್ಲಾ ಮುಗಿದ ಕಥೆ. ಕಾಯ್ಕಿಣಿ ಹಾಗೂ ನರೇಂದ್ರ ಓದುಗ ಸಹೃದಯರ ಕೋಪಕ್ಕೂ ತುತ್ತಾಗಿದ್ದರು. ಇದೆಲ್ಲಾ ಹಳೆಯ ಕಥೆಯ ನೆನಪಿಸಲಿಕ್ಕೆ ಕಾರಣ, ಆದಿಕವಿ ಪಂಪನ ಬಗ್ಗೆ ಹೊಸತಾಗಿ ಬಂದಿರುವ ಮತ್ತೊಂದು ನಕಲಿನ ಆರೋಪ.

ಡಾ. ರಾಮೇಗೌಡ ಎಂಬೊಬ್ಬ ಕನ್ನಡ ಪ್ರಾಧ್ಯಾಪಕರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯದ ಸ್ನಾತಕೋತ್ತರ ವಿಭಾಗದಲ್ಲಿ ಇತ್ತೀಚೆಗೆ ಪಂಪನ ಕುರಿತಾಗಿ, ವಿಶೇಷವಾಗಿ ಆದಿಪುರಾಣದ ಕುರಿತಾಗಿ ಅವರು ಮಾತನಾಡುತ್ತಿದ್ದರು.

ನಾವು ಆಗಾಗ ಭಾವಾವೇಶದಲ್ಲಿ ಉದ್ಧರಿಸುವ, ಉದಾಹರಿಸುವ- ಮನುಷ್ಯ ಜಾತಿ ತಾನೊಂದೆ ವಲಂ ಅನ್ನುವ ಆದಿಪುರಾಣದಲ್ಲಿ ಬರುವ ಮಾತು ಪಂಪನದಲ್ಲ ಅನ್ನುವುದು ರಾಮೇಗೌಡರು ಕಂಡುಕೊಂಡ ಸತ್ಯ. ಅವರ ಪ್ರಕಾರ, ಜಿನಸೇನನ ಸಂಸ್ಕೃತದ ಪೂರ್ವಪುರಾಣದಲ್ಲೇ ಈ ಮಾತಿದೆ. ಅದನ್ನು ಜಾಣತನದಿಂದ ಎತ್ತಿಕೊಂಡದ್ದೇ ಪಂಪನ ಸಾಧನೆ.

ರಾಮೇಗೌಡರು ಮುಂದುವರೆಯುತ್ತಾರೆ - ಆದಿಪುರಾಣದ ಹಲವು ಭಾಗಗಳು ಶ್ರೇಷ್ಠ ಎಂದೆನಿಸಿದಾಗೆಲ್ಲ ನಾವು ಜಿನಸೇನನ ನೆನೆಯಬೇಕು (ಎಷ್ಟಾದರೂ ಆದಿಪುರಾಣ ನಕಲಿ). ಪೂರ್ವ ಪುರಾಣಕ್ಕೆ ಹೊರತಾದ ಭಾಗಗಳನ್ನು ಪಂಪ ಸೃಷ್ಟಿಸಿದ್ದೇ ಇದ್ದಲ್ಲಿ , ಅಲ್ಲಿ ಜಿನಸೇನನ ಪ್ರಭಾವ ಇಲ್ಲದಿದ್ದಲ್ಲಿ , ಅಲ್ಲಿ ಪಂಪ ಪ್ರತಿಭೆ ವೈಯಕ್ತಿಕವಾಗಿ ವಿಜೃಂಭಿಸಿದ್ದಲ್ಲಿ - ಅದನ್ನು ಒಪ್ಪಿಕೊಳ್ಳಬಹುದು (ಅಂಥಾ ಯಾವ ಭಾಗಗಳನ್ನೂ ಅವರು ಉದಾಹರಿಸಿಲ್ಲ . ಅಂದಮೇಲೆ, ಆದಿಪುರಾಣ ಪೂರ್ಣ ನಕಲಿಯಿರಬೇಕು, ಅರ್ಥಾತ್‌ ಕನ್ನಡಾನುವಾದ. ಆದರೆ, ಉತ್ತಮ ಅನುವಾದಕಾರ ಅನ್ನುವ ಅಗ್ಗಳಿಕೆಯನ್ನೂ ಪಾಪದ ಕವಿ ಪಂಪನಿಗೆ ರಾಮೇಗೌಡರು ದಯಪಾಲಿಸಿಲ್ಲ).

ಅದೇನೇ ಇರಲಿ. ಪಂಪನ ನಕಲು ಸಾಮರ್ಥ್ಯದ ಬಗ್ಗೆ ಆಗಾಗ ನಮ್ಮ ಸಂಶೋಧಕರು ದನಿ ಎತ್ತುತ್ತಿದ್ದಾರೆ. ಸದ್ಯಕ್ಕೆ ಅವರೆಲ್ಲಾ ಇನ್ನೂ 10 ನೇ ಶತಮಾನದಲ್ಲೇ ಇದ್ದಾರೆ. ಕುಮಾರವ್ಯಾಸ ಯುಗದವರೆಗೆ ಅವರ್ಯಾರೂ ಮುಟ್ಟಿಲ್ಲ . ಇಲ್ಲದಿದ್ದಲ್ಲಿ ಈ ಹೊತ್ತಿಗೆ ಕುಮಾರವ್ಯಾಸನ ಕಳ್ಳತನಗಳೆಲ್ಲಾ ಬಯಲಾಗುತ್ತಿದ್ದವು. ಪಂಪ, ಕುಮಾರವ್ಯಾಸರದೇ ಈ ಪಾಡಾದಲ್ಲಿ , ಕುವೆಂಪು (ವರ್ಡ್ಸ್‌ವರ್ತ್‌ಗೆ ಋಣಿ), ಬೇಂದ್ರೆ (ಜಾನಪದಕ್ಕೆ ಋಣಿ). ರಾಮೇಗೌಡರ ಸಂಶೋಧನೆ ಹುಲುಸಾಗಲಿ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X