ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಳಿಕೆಯಲ್ಲಿ ‘ಮುದ್ದಣ’ ಶತಸ್ಮೃತಿ

By Staff
|
Google Oneindia Kannada News

ನಂದಳಿಕೆ : ಗೀತಗೋವಿಂದದಲ್ಲಿನ ರಾಧಾ- ಕೃಷ್ಣರ ದೈವಿಕ ಪ್ರೇಮ ಹಾಗೂ ನಂದಳಿಕೆ ಲಕ್ಷ್ಮಿನಾರಾಣಪ್ಪ ಚಿತ್ರಿಸಿರುವ ಮುದ್ದಣ- ಮನೋರಮೆಯರ ಸಲ್ಲಾಪ, ವಿಷಯ ವಿಶ್ಲೇಷಣೆಯ ಎರಡು ಅತ್ಯುತ್ತಮ ಮಾದರಿಗಳೆಂದು ಕಾಸರಗೋಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ ಹೇಳಿದ್ದಾರೆ.

ಮುದ್ದಣ ಜಗತ್ತಿನ ಅತ್ಯುತ್ತಮ ಕವಿಗಳಲ್ಲಿ ಒಬ್ಬ . ಕನ್ನಡ ಸುಗಂಧವನ್ನು ಜಗತ್ತಿಗೆ ಬೀರಿದ್ದು ಆತನ ಅಗ್ಗಳಿಕೆ ಎಂದು ಅವರು ಅಭಿಪ್ರಾಯಪಟ್ಟರು. ಅವರು, ಫೆ. 15 ರ ಗುರುವಾರ ನಂದಳಿಕೆಯಲ್ಲಿ ನಡೆದ ಮುದ್ದಣ ಶತಸ್ಮೃತಿ ಉತ್ಸವದಲ್ಲಿ ಮಾತನಾಡುತ್ತಿದ್ದರು.

ತುಳುನಾಡಿನಲ್ಲಿ ಮಾತೃಭಾಷೆ ಕನ್ನಡ ಅಲ್ಲದಿದ್ದರೂ, ನಾವೆಲ್ಲ ಕನ್ನಡಿಗರೆಂಬ ವಿಶಾಲ ಮನೋಭಾವನೆಯಿಂದ ಬದುಕುತ್ತಿದ್ದೇವೆ. ಆದ್ದರಿಂದಲೇ ತುಳುನಾಡು ಭರತಭೂಮಿಯ ಪ್ರತೀಕ ಎಂದು ಕಯ್ಯಾರರು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿದ ನಂದಳಿಕೆಯ ನಂದಾದೀಪಗಳು ಪುಸ್ತಕವನ್ನು ಬಿಡುಗಡೆ ಮಾಡಿದರು. ನಂದಳಿಕೆ ಬಾಲಚಂದ್ರರಾವ್‌ ಸಂಪಾದಿಸಿದ ಈ ಕೃತಿಯಲ್ಲಿ ಮುದ್ದಣ, ಬಿಡಾರಂ ಕೃಷ್ಣಪ್ಪ , ಪೊಳಲಿ ಶೀನಪ್ಪ ಹೆಗ್ಡೆ , ಡಾ.ಎನ್‌.ವಿ. ರಾವ್‌, ನ್ಯಾಯಮೂರ್ತಿ ಡಾ. ಎನ್‌. ಡಿ. ಕೃಷ್ಣರಾವ್‌ ಅವರ ವ್ಯಕ್ತಿಚಿತ್ರಗಳಿವೆ.

ಅಮೃತ ಸೋಮೇಶ್ವರರಿಗೆ ಮುದ್ದಣ, ಗೋಪಾಲಕೃಷ್ಣ ಭಟ್‌ರಿಗೆ ಶತಸ್ಮೃತಿ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಹಾಜರಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದ ಸ್ವಾಮೀಜಿ, ಕಿರಿ ವಯಸ್ಸಿನಲ್ಲೇ ಅದ್ಭುತವಾದುದನ್ನು ಸಾಧಿಸಿದ ಮುದ್ದಣ ಅಸಾಮಾನ್ಯ ಎಂದರು. ಅವರು, ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್‌ ಅವರಿಗೆ ಶತಸ್ಮೃತಿ ಪ್ರಶಸ್ತಿ , ಕವಿ ಅಮೃತ ಸೋಮೇಶ್ವರ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ , ಯಕ್ಷಗಾನ ಹಾಸ್ಯ ಕಲಾವಿದ ಪೆರೋಡಿ ನಾರಾಯಣ ಭಟ್ಟರಿಗೆ ದೇರಾಜೆ ಸೀತಾರಾಮಯ್ಯ ಸ್ಮಾರಕ ಪ್ರಶಸ್ತಿಯನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ. ಮೊಗಸಾಲೆ, ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎನ್‌.ವಿ. ಕಿಶನ್‌ ಪ್ರಸಾದ್‌, ನಂದಳಿಕೆ ದೇವಸ್ಥಾನದ ಧರ್ಮದರ್ಶಿ ಸುಂದರರಾಮ ಹೆಗ್ಡೆ ಮುಂತಾದವರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X