Get Updates
Get notified of breaking news, exclusive insights, and must-see stories!

ತಮ್ಮ ಆರೋಗ್ಯಕ್ಕೆ ಕವಿತೆಯೇ ಕಾರಣ - ಕೆ.ಎಸ್‌. ನರಸಿಂಹಸ್ವಾಮಿ

(ಇನ್ಫೋ ವಿಶೇಷ ವಾರ್ತೆ)

ಬೆಂಗಳೂರು : ಪ್ರಸ್ತುತದ ಮನುಷ್ಯನ ಬದುಕು ನೆಮ್ಮದಿ ಕಳೆದುಕೊಂಡಿರುವ ಬಗ್ಗೆ ವಿಷಾದಿಸಿರುವ ಮೈಸೂರು ಮಲ್ಲಿಗೆ ಕವಿ ಕೆ.ಎಸ್‌. ನರಸಿಂಹಸ್ವಾಮಿ ತಮ್ಮ ಆರೋಗ್ಯಕ್ಕೆ ಕವಿತೆಗಳೇ ಕಾರಣ ಎಂದು ಹೇಳಿದ್ದಾರೆ.

ಕನ್ನಡ ಕಾವ್ಯ ಲೋಕ ಎತ್ತ ಸಾಗುತ್ತಿದೆ ಎಂದು ಹೇಳುವುದು ಕಷ್ಟ ಎಂದ ನರಸಿಂಹಸ್ವಾಮಿ, ಕನ್ನಡ ಕಾವ್ಯ ಸಾಗುತ್ತಿರುವ ಹಾದಿಯನ್ನು - ಹಾಡಲು ಕೋಗಿಲೆಗಳು ಸಿದ್ಧವಾಗಿವೆ, ಆದರೆ ವಸಂತವೇ ಬಂದಿಲ್ಲ ಎಂದು ಮುಗುಮ್ಮಾಗಿ ಹೇಳಿದರು. ಅವರು ಸೋಮವಾರ ಕನ್ನಡಭವನದ ನಯನ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜೋಗದ ಸಿರಿಯ ಕವಿ. ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌ರ ‘ಅರವತ್ತೆೈದರ ಐಸಿರಿ’ ಹಾಗೂ ‘ಸಮಗ್ರ ಭಾವಗೀತೆಗಳು’ ಸಂಕಲಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಶ್ರೀವಾರಿ ಪ್ರಕಾಶನ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ.

ಸತ್ಸಂಗದಿಂದ ನಿಸಾರ್‌ ಒಳ್ಳೆಯ ಕವಿಯಾಗಿದ್ದಾರೆ ಎಂದು ನಿಸಾರರ ಕಾವ್ಯವನ್ನು ಪ್ರಶಂಸಿದ ಕೆಎಸ್‌ನ, ನಿಸಾರರ ಪ್ರಥಮ ಸಂಕಲನಕ್ಕೆ ತಾವು ಮುನ್ನುಡಿ ಬರೆದುದನ್ನು ನೆನಪಿಸಿಕೊಂಡರು.

ಭಾವಗೀತೆಗಳನ್ನು ಬರೆಯುವುದು ಪಾಪವಲ್ಲ : ನಿಸಾರರ ಕವಿತೆಗಳನ್ನು ಕುರಿತು ಮಾತನಾಡಿದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಒಳ್ಳೆಯ ಹಾಡು ಬರೆಯುವುದು ಸುಲಭವಲ್ಲ . ಗಂಭೀರ ಕಾವ್ಯ ದಟ್ಟವಾಗಿ ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ನಿಸಾರರು ಒಳ್ಳೆಯ ಭಾವಗೀತೆ ಬರೆದರು ಎಂದು ವೆಂಕಟೇಶಮೂರ್ತಿ ಹೇಳಿದರು. ಭಾವಗೀತೆಗಳನ್ನು ಬರೆಯುವುದು ಪಾಪ ಎಂದಾದಲ್ಲಿ ನಮ್ಮನ್ನು ಪುರಂದರ ಹಾಗೂ ಕನಕದಾಸರು ಎಂದೂ ಕ್ಷಮಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ನಿಸಾರರ ಕವಿತೆಗಳ ಬಗ್ಗೆ ಮಾತನಾಡಿದ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಜನರ ಪ್ರೀತಿಯನ್ನು ನಂಬಿ ಬರೆದ ಕವಿ ನಿಸಾರ್‌ ಎಂದರು. ಪ್ರೊ.ಎಂ.ಎಚ್‌.ಕೃಷ್ಣಯ್ಯ ‘ಅರವತ್ತೆೈದರ ಐಸಿರಿ’ ಸಂಕಲನದ ಬಗ್ಗೆ ಮಾತನಾಡಿದರು. ಪ್ರೊ. ದೇ. ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುನರ್ಜನ್ಮ ಗಾಂಧಿ ಬಜಾರಿನಲ್ಲೇ ಇರಲಿ : ಮರುಜನ್ಮ ಇರುವುದಾದರೇ ನಾನು ಗಾಂಧಿ ಬಜಾರಿನಲ್ಲೇ ಇರಲು ಬಯಸುತ್ತೇನೆ. ಮತ್ತೆ ಮಾಸ್ತಿ ನನ್ನ ಬೆನ್ನು ತಟ್ಟಬೇಕು. ಅವರೊಂದಿಗೆ ಹರಟಬೇಕು. ಇದು ಸಾಧ್ಯವಾಗದಿದ್ದಲ್ಲಿ ನನಗೆ ಮರುಜನ್ಮ ಬೇಡವೇ ಬೇಡ ಎಂದು ನಿಸಾರ್‌ ಅಹಮದ್‌ ಭಾವುಕರಾಗಿ ಹೇಳಿದರು.

ಭಾವಗೀತೆಯ ಪ್ರಕಾರ ತಮಗೆ ಅಂತರ್ಗತ ಎನ್ನುವುದನ್ನು ಒತ್ತಿ ಹೇಳಿದ ನಿಸಾರ್‌, ಭಾವಗೀತೆಗಳಿಗೆ ಅಭಾವ ಬಂದಿರುವ ಸಂದರ್ಭದಲ್ಲೇ ಕೆಎಸ್‌ನ ‘ಸಂಜೆಹಾಡು’ ಬರೆದಿರುವುದನ್ನು ಎತ್ತಿ ಹೇಳಿದರು.

ಕೆಎಸ್‌ನಗೆ ಸನ್ಮಾನ : ನರಸಿಂಹಸ್ವಾಮಿ ಹಾಗೂ ಅವರ ಪತ್ನಿ ವೆಂಕಟಮ್ಮ ಅವರನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಮಾಲತಿಶರ್ಮ, ನಗರ ಶ್ರೀನಿವಾಸ ಉಡುಪ ಹಾಗೂ ಅರ್ಚನ ಉಡುಪ ಭಾವಗೀತೆಗಳನ್ನು ಹಾಡಿದರು.

ಮುಖಪುಟ / ಸಾಹಿತ್ಯ ಸೊಗಡು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+