ಅಂತರಂಗದ ಅರಿವು ಬಹಿರಂಗದ ಕ್ರಿಯೆಯಾಗದ ಈ ದಿನಗಳಲ್ಲಿ
*ಸತ್ಯವ್ರತ ಹೊಸಬೆಟ್ಟು
ಅದೇ ಹುಚ್ಚ ತುಘಲಕ್, ಅದೇ ವಾಸಿಯಾಗದ ಗುಣಮುಖ, ಅದೇ ಕುದುರೆಮೂತಿಯ ಹಯವದನ, ಅದೇ ಸಂಕ್ರಾಂತಿ. ಬೇಸರವಾದರೆ ಸತ್ತವರ ನೆರಳು, ರೋಷವುಕ್ಕಿದರೆ ವಿಗಡ ವಿಕ್ರಮರಾಯ, ಹಾಡಿಕುಣಿಯುವುದಕ್ಕೆ ಜೋಕುಮಾರ ಸ್ವಾಮಿ, ಮರಳಿ ಬಂದರೆ ಮಣ್ಣಿನ ಬಂಡಿ.
ಕನ್ನಡ ರಂಗಭೂಮಿ ರಂಗು ಕಳೆದುಕೊಂಡಿದೆ. ಹೊಸ ನಾಟಕಗಳು ಹುಟ್ಟುತ್ತಿಲ್ಲ . ಹಳೆಯ ನಾಟಕಗಳನ್ನು ನೋಡುವ ಮಂದಿ ಸಾಕಷ್ಟು ಸಾರಿ ನೋಡಿಯಾಗಿದೆ. ರಂಗತಂಡಗಳು ಕೂಡ ಚಿತ್ರಕಲಾ ಪ್ರದರ್ಶನದಂತೆ ಕಾಣಿಸುತ್ತಿವೆ. ಅಷ್ಟೇ ಯಾಕೆ ? ವೃತ್ತಿ ರಂಗ ಭೂಮಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಡುಬೀದಿ ನಾರಾಯಣ, ಪಶ್ಚಾತ್ತಾಪ ಮುಂತಾದ ನಾಟಕಗಳನ್ನು ಆಡುತ್ತಿದ್ದ ಮಾಸ್ಟರ್ ಹಿರಣ್ಣಯ್ಯನವರಿಂದ ಹಿಡಿದು, ಮೊನ್ನೆ ಮೊನ್ನೆ ಲಂಡನ್-ಹೂಸ್ಟನ್ ಪ್ರವಾಸ ಮುಗಿಸಿ ಬಂದ ಚಿಂದೋಡಿ ಲೀಲಾ ತನಕ ಎಲ್ಲರೂ ಬಸವಳಿದಿದ್ದಾರೆ.
ಕನ್ನಡ ರಂಗಭೂಮಿಗೆ ಈ ಸ್ಥಿತಿ ಯಾಕೆ ಬಂತು ? ಜೆಫ್ರಿ ಬರ್ನಾರ್ಡ್ ಈಸ್ ಅನ್‌ವೆಲ್ ಎಂಬ ನಾಟಕದಂಥ ನಾಟಕವನ್ನಾಗಲೀ, ಇತ್ತೀಚೆಗೆ ಮರಾಠಿ ರಂಗಭೂಮಿ ಕೊಟ್ಟ ಗಾಂಧಿಯಂಥ ನಾಟಕವನ್ನಾಗಲೀ ಕನ್ನಡ ಯಾಕೆ ಕೊಡುತ್ತಿಲ್ಲ ? ರಂಗಕರ್ಮಿ ಕಾರಂತರಿಂದ ಮರುಹುಟ್ಟು ಪಡೆದ, ಕಾರ್ನಾಡರಿಂದ ಹೊಸ ಚೈತನ್ಯ ಪಡೆದುಕೊಂಡ, ಕಂಬಾರರಿಂದ ಹೊಸ ಪರಿಭಾಷೆ ಕಲಿತ, ಲಂಕೇಶರಿಂದ ಹುರಿಗೊಂಡ, ಪಾಟೀಲರಿಂದ ವರಸೆಗಳನ್ನು ಕಲಿತ ನಾಟಕ ಸದ್ಯಕ್ಕಂತೂ ಅನಾಥವಾಗಿದೆ. ಹಳೆಯ ನಾಟಕಗಳನ್ನು ಆಡಿ ಆಡಿ ಕೆಲವು ಸವಕಲಾಗಿವೆ . ನೆಲದಲ್ಲಿ ಕಾಲೂರುವ ಮೊದಲು ನಕ್ಷತ್ರದಲ್ಲಿ ಟೊಂಗೆ ಬಿಚ್ಚುವುದಾದರೂ ಹೇಗೆ ಎಂಬ ಪ್ರಶ್ನೆಯಾಗಲೀ , ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಕನಸಿಲ್ಲದ ಹಾದಿಯಲ್ಲಿ ನಡೆಯುವುದಾದರೂ ಹೇಗೆ ಎಂಬ ಅನುಮಾನವಾಗಲೀ , ಅಂತರಂಗದ ಅರಿವು ಬಹಿರಂಗದ ಕ್ರಿಯೆಯಾಗದ ಹೊರತು ಏನು ಮಾಡಿದ ಹಾಗಾಯಿತು ಎಂಬ ತಿಳಿವಳಿಕೆಯಾಗಲೀ ಹೊಸ ತಲೆಮಾರಿನ ಮಂದಿಯಲ್ಲಿ ಕುತೂಹಲ ಮೂಡಿಸುತ್ತಿಲ್ಲ.
ಬಹುಶಃ ಹಳೆಯ ಹಾದಿಗಳನ್ನು ತೊರೆಯುವುದಕ್ಕೆ ಇದು ಸಕಾಲವೇ ಇರಬಹುದು. ಪುರಾಣ ಪುರುಷರನ್ನು ಸೆಂಕೇತವಾಗಿಟ್ಟುಕೊಂಡು, ಇತಿಹಾಸ ಪುರುಷರನ್ನು ಕೇಂದ್ರವಾಗಿಟ್ಟುಕೊಂಡು, ಜಾನಪದ ನಾಯಕರನ್ನು ಕುಣಿಸಿ ನಾಟಕವಾಗಿಸುವ ಕಾಲ ಹೊರಟುಹೋಗಿದೆ. ಸಮಕಾಲೀನ ಸಂದರ್ಭಕ್ಕೆ ತೀವ್ರವಾಗಿ ಸ್ಪಂದಿಸುವ ಸ್ಥಿತಿಯಲ್ಲಿ ಇವತ್ತಿನ ಪ್ರೇಕ್ಷಕ ಇಲ್ಲವೆನ್ನುವ ಆರೋಪವನ್ನು ನಾಟಕಕಾರರು ಮಾಡುತ್ತಲೇ ಬಂದಿದ್ದಾರೆ. ಹಾಗೇ ನಾಟಕಕ್ಕೆ ವಸ್ತುವಾಗುವ ಶಕ್ತಿಯೂ ವರ್ತಮಾನದ ವಾತಾವರಣಕ್ಕೆ ಇಲ್ಲವೇನೋ ?
ಐದೂವರೆ ಅಡಿಯ ಮಧ್ಯಮವರ್ಗದ ಮನುಷ್ಯನೊಬ್ಬನ ಆಧುನಿಕ ಅನುಭವಗಳ ಮೇಲೆ ನಾಟಕ ಸೌಧವನ್ನು ಹೇಗೆ ನಿರ್ಮಿಸುವುದು ಎಂದು ಕೇಳುತ್ತಾರೆ ನಾಟಕಕಾರ ಪ್ರಸನ್ನ. ಇದಕ್ಕೆ ಉತ್ತರಿಸಬೇಕಾದ ಹೊಣೆ ಸಮಾಜದ ಮೇಲಿದೆ. ಕಳೆದ ಹತ್ತು ವರ್ಷಗಳಿಂದ ಆಗುತ್ತಾ ಬಂದಿರುವ ಸ್ಥಿತ್ಯಂತರವನ್ನು ನೋಡುತ್ತಿರುವ ವ್ಯಕ್ತಿಯನ್ನು ಒಂದು ಪ್ರಶ್ನೆಯಂತೂ ಕಾಡುತ್ತದೆ. ನಾವೇಕೆ ಸೂಕ,್ಮಜ್ಞತೆಯನ್ನು ಕಳೆದುಕೊಳ್ಳುತ್ತಿದ್ದೇವೆ ? ಯಾಕೆ ಸಂವೇದನಾರಾಹಿತ್ಯವನ್ನು ಬೆಳಿಸಿಕೊಳ್ಳುತ್ತಿದ್ದೇವೆ ? ಯಾಕೆ ಸಾಹಿತ್ಯ ಬದುಕಿನ ಅನಿವಾರ್ಯತೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ ?












Click it and Unblock the Notifications