• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಿದು ಹೋದ ಜೀಪಿನಿಂದ ಹೊರಗೆ ಜಿಗಿದವಳು

By Super
|

ಇಡೀ ಪ್ರಸಂಗ ಅಚಾನಕ್ಕಾಗಿ ಹೊಸದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ ಅಂತ ಹೊಳ್ಳನಿಗೆ ಅನ್ನಿಸಿದ್ದು ಆವಾಗಲೇ. ವೀಣಾ ಸುಂದರಿಯಲ್ಲ ಅನ್ನುವುದನ್ನು ಒಪ್ಪುವುದಕ್ಕೆ ಆತ ಸಿದ್ಧನಿರಲಿಲ್ಲ. ಅವನ ಮುಂದೆ ವೀಣಾಳ ಫೊಟೋ ಇತ್ತು. ಅದರಲ್ಲಿ ಯಾವ ಚೆಲುವೆಗೂ ಕಮ್ಮಿಯಿಲ್ಲದಂತೆ ವೀಣಾ ಕಂಗೊಳಿಸುತ್ತಿದ್ದಳು. ಆ ಪಾಸ್‌ಪೋರ್ಟ್‌ ಸೈಜಿನ ಫೋಟೋ ಇಟ್ಟುಕೊಂಡು ವೀಣಾ ಸರ್ವಾಂಗ ಸುಂದರಿ ಎಂದು ಹೇಳುವುದಕ್ಕೆ ಯಾವ ಅಡ್ಡಿಯೂ ಇದ್ದಂತೆ ಕಾಣಿಸಲಿಲ್ಲ ಹೊಳ್ಳನಿಗೆ.

ಅದೇ ರೀತಿ ನಾಗೇಶ ಮಯ್ಯ ಅರೆಹುಚ್ಚ ಅನ್ನುವ ಬಗ್ಗೆ ಊರಲ್ಲಿ ಸಾಕಷ್ಟು ಪುಕಾರುಗಳಿದ್ದವು. ಆತ ಧನಂಜಯ ಪೂಜಾರಿಯ ಭಾಷಣ ನಡೆಯುತ್ತಿರಬೇಕಾದರೆ ಹೋಗಿ ಅವರ ಕತ್ತಿನ ಪಟ್ಟಿ ಹಿಡಿದದ್ದು, ಬೆಳಗ್ಗೆ ಎದ್ದು ಬಸ್‌ಸ್ಟಾಂಡಿನಲ್ಲಿ ನಿಂತುಕೊಂಡು ಪತ್ರಿಕೆಯಲ್ಲಿ ಬಂದ ಯಾವುದೋ ಒಂದು ಸಂಗತಿಯ ಬಗ್ಗೆ ಭಾಷಣ ಬಿಗಿಯಲು ಆರಂಭಿಸುತ್ತಿದ್ದದ್ದು, ಒಂದು ಸಣ್ಣ ಘಟನೆಯನ್ನೇ ನೆಪವಾಗಿಟ್ಟುಕೊಂಡು ಅದರ ಬೆನ್ನು ಹಿಡಿದು ಹೋಗಿ ತಿಂಗಳಾನುಗಟ್ಟಲೆ ಸಾವಿರಾರು ರುಪಾಯಿ ಖರ್ಚುಮಾಡುವುದು- ಇವನ್ನೆಲ್ಲ ನೋಡಿದವರು ಅವನನ್ನು ಅಂಡೆಪಿರ್ಕಿ ಎಂದು ಕರೆದದ್ದರಲ್ಲಿ ಯಾವ ಅತಿಶಯೋಕ್ತಿಯೂ ಕುಯುಕ್ತಿಯೂ ಇಲ್ಲವೆಂಬುದು ಹೊಳ್ಳನಿಗೆ ಗೊತ್ತಿತ್ತು. ಹೊಳ್ಳ ಬಂಟ್ವಾಳದಲ್ಲಿ ಎಸ್ಸೈ ಆಗಿದ್ದಾಗ ಇದೇ ನಾಗೇಶ ಮಯ್ಯನೊಮ್ಮೆ ಎಡತಾಕಿದ್ದನ್ನು ಹೊಳ್ಳ ಮರೆತಿರಲಿಲ್ಲ. ಬಿ. ಸಿ. ರೋಡಿನ ಬಸ್‌ಸ್ಟಾಂಡಿನಲ್ಲಿರುವ ಬಸ್ಸು ಸಂಚಾರದ ವೇಳಾಪಟ್ಟಿ ಸರಿಯಿಲ್ಲ ಎಂದು ಟ್ರಾಫಿಕ್‌ ಕಂಟ್ರೋಲರ್‌ ಹತ್ತಿರ ಜಗಳಾಡಿ, ಕೊನೆಗೆ ಅವರಿಗೆ ಕಪಾಳಮೋಕ್ಷ ಮಾಡಿ, ತಾನೇ ಅವರ ಮೇಲೆ ದೂರು ಕೊಟ್ಟು, ಕೊನೆಗೆ ಮಂಗಳೂರಿನ ಡಿವಿಜನಲ್‌ಕಂಟ್ರೋಲರ್‌ ಆಫೀಸಿಗೆ ಪತ್ರ ಬರೆದು, ಅವರಿಂದ ಉತ್ತರ ಬಾರದೇ ಇದ್ದಾಗ ಅವರ ಆಫೀಸಿಗೆ ಹೋಗಿ ಅಲ್ಲಿ ಧರಣಿ ಕುಳಿತು ರಂಪ ಮಾಡಿ, ಮಂಗಳೂರು ಎಸ್ಪಿ ತನಗೆ ಬೆಂಬಲ ನೀಡಲಿಲ್ಲ ಎಂದು ಅವರ ವಿರುದ್ಧ ಪತ್ರಿಕಾಗೋಷ್ಠಿ ಕರೆದು.... ನಾಗೇಶ ಮಯ್ಯ ಎಂಥಾ ಆಸಾಮಿಯೆನ್ನುವುದು ಹೊಳ್ಳನಿಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿತ್ತು.

ಅದಕ್ಕೇ ಅವನು ಅವರಿಬ್ಬರ ನಡುವೆ ಸಂಬಂಧ ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು.

ಆದರೆ ನಾಗೇಶ ಮಯ್ಯ ಮತ್ತು ವೀಣಾ ಒಂದು ವಿಚಿತ್ರ ಸನ್ನಿವೇಶದಲ್ಲಿ ಮದುವೆಯಾಗಬೇಕಾಗಿ ಬಂತು ಅನ್ನುವುದು ಮೋಹನ ವಿವರಿಸಿದ ನಂತರವೇ ಅವನಿಗೆ ಗೊತ್ತಾದದ್ದು.

ಮೋಹನನ ಪ್ರಕಾರ ಅದು ನಡೆದದ್ದು ಹೀಗೆ;

ರಾಮಕುಂಜದ ದಿನೇಶ ಶೆಟ್ಟಿಗೆ ವೀಣಾಳನ್ನು ಕೊಟ್ಟು ಮದುವೆ ಮಾಡುವುದಾಗಿ ಗುರುಹಿರಿಯರು ನಿಶ್ಚಯಿಸಿದರು. ಆದರೆ, ನಿರಂಜನನಿಗೆ ಮನಸೋತಿದ್ದ ವೀಣಾಳಿಗೆ ದಿನೇಶ ಶೆಟ್ಟಿಯನ್ನು ಮದುವೆಯಾಗುವ ಆಸೆ ಎಳ್ಳಷ್ಟೂ ಇರಲಿಲ್ಲ. ಆದರೆ ನಿರಂಜನ ಎಂಥ ಚಂಚಲ ಸ್ವಭಾವದ ವ್ಯಕ್ತಿ ಎಂದರೆ ಅವನಿಗೆ ವೀಣಾಳನ್ನು ಜೀವನಪೂರ್ತಿ ಸಾಕುವುದು ಬೇಕಾಗಿರಲಿಲ್ಲ. ಮದುವೆ ಗೊತ್ತಾದದ್ದೇ ತಡ ವೀಣಾ ಅಳುತ್ತಾ ನಿರಂಜನನ ಬಳಿ ಬಂದಳು. ಹೇಗಾದರೂ ಮಾಡಿ ಈ ಮದುವೆ ತಪ್ಪಿಸುವಂತೆ ಗೋಗರೆದಳು. ನಿರಂಜನ ಹಾಗೇ ಮಾಡುವುದಾಗಿ ಹೇಳಿ ಒಂದಷ್ಟು ಕಾಲತಳ್ಳಿದ. ಹೇಗಾದರೂ ಮಾಡಿ ಮದುವೆ ಆಗಿಬಿಟ್ಟರೆ ಸಾಕು ಅನ್ನುವುದು ಅವನ ಉದ್ದೇಶವಾಗಿತ್ತು. ಈ ಮಧ್ಯೆ ನಿರಂಜನ ಬೇಕೆಂದೇ ತಡಮಾಡುತ್ತಿರುವ ಸಂಗತಿ ವೀಣಾಳ ಗಮನಕ್ಕೂ ಬಂತು. ಆಕೆ ಒಂದು ರಾತ್ರಿ ತಾನು ನಿರಂಜನನೊಂದಿಗೆ ಹೋಗುವುದಾಗಿ ಚೀಟಿ ಬರೆದಿಟ್ಟು ಮನೆಯಿಂದ ಹೊರಬಿದ್ದಳು. ಆಕೆ ನೇರವಾಗಿ ಬಂದದ್ದು ನಿರಂಜನನ ಮನೆಗೆ.

ಅವಳು ಬರುವ ಹೊತ್ತಿಗೆ ನಿರಂಜನ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ಅವನ ಅಕ್ಕಂದಿರು ವೀಣಾಳನ್ನು ಒಳಗೆ ಸೇರಿಸುವುದಕ್ಕೆ ಒಪ್ಪಲಿಲ್ಲ. ಅವರಿಗೆ ವೀಣಾಳ ಸಾಹಸಗಳೆಲ್ಲ ಗೊತ್ತಿದ್ದವು. ಆಕೆ ಕುಡಿಯುತ್ತಾಳೆ, ಸಿಗರೇಟು ಸೇದುತ್ತಾಳೆ ಮತ್ತು ನಿರಂಜನನ ಗೆಳೆಯರೆಲ್ಲರನ್ನೂ ನಿರಂಜನನಂತೆ ಕಾಣುತ್ತಾಳೆ ಎಂಬ ಗುಮಾನಿಗಳಿದ್ದವು. ಹೀಗಾಗಿ ಮನೆಯಾಳಗೆ ಕಾಲಿಡಲು ಯತ್ನಿಸಿದ ವೀಣಾಳನ್ನು ನಿರಂಜನನ ಇಬ್ಬರು ಅಕ್ಕಂದಿರೂ ಹಿಡಸೂಡಿಯಲ್ಲಿ ಜಪ್ಪಿ ಹೊರಗೆ ಅಟ್ಟಿದರು. ತಲೆ ಕೆದರಿಕೊಂಡು ಹುಚ್ಚಿಯಂತಾಗಿ ದಿಕ್ಕೆಟ್ಟು ನಿಂತಿದ್ದ ವೀಣಾಳನ್ನು ಅದೇ ಹೊತ್ತಿಗೆ ದಿನೇಶ ಶೆಟ್ಟಿ ಕೂಡ ಹುಡುಕಿಕೊಂಡು ಬಂದ. ಅವಳ ಕಪಾಳಕ್ಕೆ ಬಿಗಿದು ಅವಳನ್ನು ಜೀಪಿನಲ್ಲಿ ಹಾಕಿಕೊಂಡು ತಂದೆಯ ಮನೆಗೆ ಬಿಟ್ಟುಬರುವುದಕ್ಕೆ ಹೊರಟ.

ವೀಣಾ ಎಂಥ ಹಠಮಾರಿಯೆಂದರೆ ಜೀಪಿನಲ್ಲಿ ಸುಮ್ಮನೆ ಕೂರಲಿಲ್ಲ. ಕಿರುಚಾಡಿದಳು, ಹಾರಾಡಿದಳು. ದಿನೇಶ ಶೆಟ್ಟಿ ಕೊನೆಗೆ ಅವಳ ಕಪಾಳಕ್ಕೆ ಬಿಗಿದು ಅವಳನ್ನು ಸುಮ್ಮನಾಗಿಸಬೇಕಾಯಿತು. ಆತನಿಂದ ಏಟು ತಿಂದ ಎರಡೇ ಕ್ಷಣ ಮಾತ್ರ ಆಕೆ ಸುಮ್ಮನಿದ್ದದ್ದು. ಮರುಕ್ಷಣವೇ ಆಕೆ ವೇಗವಾಗಿ ಧಾವಿಸುತ್ತಿದ್ದ ಜೀಪಿನಿಂದ ಹೊರಗೆ ಜಿಗಿದೇ ಬಿಟ್ಟಳು. ಆ ಕತ್ತಲಲ್ಲಿ ಉಪ್ಪಿನಂಗಡಿಯ ಬೈಪಾಸಿನಿಂದ ಅವಳು ಚೀರಿಕೊಳ್ಳುತ್ತಾ ಜಿಗಿದದ್ದು ನಾಗೇಶ ಮಯ್ಯನ ಮನೆಯ ಮುಂದೆ.

ಹಾಗೆ ಜಿಗಿದ ರಭಸಕ್ಕೆ ಅವಳ ಕೆನ್ನೆ ರಸ್ತೆಗೆ ಉಜ್ಜಿಕೊಂಡು ಹೋಗಿ ಚರ್ಮ ಕಿತ್ತು ಮೂಳೆಗಳು ಕಾಣಿಸಿಕೊಂಡವು. ಆಕೆಯನ್ನು ಆ ರಾತ್ರಿ ಅಂಗಳದಲ್ಲಿ ಕುಳಿತುಕೊಂಡು ಆಕಾಶಕ್ಕೆ ದೃಷ್ಟಿನೆಟ್ಟಿದ್ದ ನಾಗೇಶಮಯ್ಯ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ. ಆಕೆಯನ್ನು ಬಲಾತ್ಕಾರವಾಗಿ ಮದುವೆ ಮಾಡಲು ಯತ್ನಿಸಿದ್ದನ್ನು ಖಂಡಿಸಿದ. ಅವಳನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದ. ಒಂದು ಕೆನ್ನೆ ಕರಟಿಹೋದ ವೀಣಾಳನ್ನು ಕೊನೆಗೆ ತಾನೇ ಮದುವೆಯೂ ಆದ.

ಹಾಗೆ ಮದುವೆಯಾಗುವ ಹೊತ್ತಿಗೆ ನಾಗೇಶಮಯ್ಯನಿಗೆ ವೀಣಾಳ ಯಾವ ಹಿನ್ನೆಲೆಯೂ ಗೊತ್ತಿರಲಿಲ್ಲ. ಆಕೆ ನಿರಂಜನನ್ನು ಪ್ರೀತಿಸಿದ್ದೂ ತಿಳಿದಿರಲಿಲ್ಲ. ಅಸಲಿ, ಅವನಿಗೆ ವೀಣಾಳನ್ನು ಮದುವೆಯಾಗುವ ಆಸಕ್ತಿಯೂ ತುರ್ತೂ ಇರಲಿಲ್ಲ. ಅವನು ಮದುವೆಯಾದದ್ದು ಕೇವಲ ತಾತ್ವಿಕ ಕಾರಣಗಳಿಗೋಸ್ಕರ.

ಅದರಿಂದ ಲಾಭವಾದದ್ದು ವೀಣಾಳಿಗೆ. ಆಕಸ್ಮಿಕವಾಗಿ ಆಕೆ ನಿರಂಜನ ಇರುವ ಊರಿಗೆ ಬಂದುಬಿಟ್ಟಿದ್ದಳುಅದರಿಂದ ತೊಂದರೆಯಾದದ್ದು ನಿರಂಜನನಿಗೆ. ಕೆನ್ನೆಯಿಲ್ಲದ ಕನ್ಯೆಯಾಬ್ಬಳ ಸಖ್ಯ ಅವನಿಗೆ ಯಾವ ಕಾರಣಕ್ಕೂ ಬೇಕಿರಲಿಲ್ಲ. ಹೀಗೆ ಅವಮಾನಿತಳಾದ ವೀಣಾ ಮತ್ತು ಅಸಹಾಯಕ ನಿರಂಜನನ ನಡುವೆ ಸಣ್ಣದೊಂದು ಚಕಮಕಿ ಶುರುವಾಯಿತು.ಅಷ್ಟು ಹೇಳಿ ಮೋಹನ ಮಾತು ನಿಲ್ಲಿಸಿದ. ಈ ವಿವರಗಳೆಲ್ಲ ರಘುವಿಗೂ ಗೊತ್ತಿರಲಿಲ್ಲ. ಇಡೀ ಪ್ರಸಂಗವನ್ನು ಕೇಳಿದ ನಂತರ ಅವನಿಗೆ ತಕ್ಷಣವೇ ನಾಗೇಶ ಮಯ್ಯನನ್ನು ಭೇಟಿಯಾಗಬೇಕು ಅನ್ನಿಸಿತು. ತಿರುಗಿ ತನ್ನ ಹಿಂದೆ ಕೂತಿದ್ದ ಆನಂದನ ಮುಖವನ್ನೇ ನೋಡಿದ ರಘು.ಆನಂದನಿಗೂ ಹಾಗೇ ಅನ್ನಿಸಿತ್ತೋ ಏನೋ? ಆತ ಆಯಾಚಿತವೆಂಬಂತೆ ತಣ್ಣಗಿನ ದನಿಯಲ್ಲಿ 'ಹಾಗಿದ್ದರೆ ನಾಗೇಶ ಮಯ್ಯ ಈಗೆಲ್ಲಿದ್ದಾನೆ?" ಕೇಳಿದ.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more