ಕುಷ್ಠರೋಗ ಸಾಂಕ್ರಾಮಿಕವೇ? ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ
ಪ್ರತಿವರ್ಷ ಜ.30 ರಂದು ವಿಶ್ವ ಕುಷ್ಠರೋಗ ದಿನ ಎಂದು ಆಚರಿಸಲಾಗುತ್ತದೆ. ಕುಷ್ಠರೋಗದಿಂದ ಬಳಲುತ್ತಿರುವ ಜನರ ಬಗ್ಗೆ ಕರುಣೆ ಹೊಂದಿದ್ದ ಮಹಾತ್ಮ ಗಾಂಧಿಯವರು ಕುಷ್ಠರೋಗಿಗಳ ಅಭಿವೃದ್ಧಿಗೆ ಶ್ರಮಿಸಿದರು. ಅವರಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸಿದರು ಮತ್ತು ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಈ ಕಾರಣದಿಂದಾಗಿ ಅವರ ಪುಣ್ಯತಿಥಿಯಂದು ʼವಿಶ್ವ ಕುಷ್ಠರೋಗ ದಿನʼ ಎಂದು ಆಚರಿಸಲಾಗುತ್ತದೆ.
2024ರ ವಿಶ್ವ ಕುಷ್ಠರೋಗ ದಿನವನ್ನು ʼಕುಷ್ಠ ರೋಗವನ್ನು ಸೋಲಿಸಿʼ ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿದೆ. ಕುಷ್ಠರೋಗದ ಬಗೆಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸುವುದು ಜೊತೆಗೆ ಕುಷ್ಠರೋಗ ಪೀಡಿತರ ಬಗೆಗೆ ಬೆಳಕು ಚೆಲ್ಲುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕುಷ್ಠರೋಗದ ಬಗೆಗೆ ಇರುವ ಅಪನಂಬಿಕೆಗಳು ಮತ್ತು ಸತ್ಯ ಸಂಗತಿಗಳ ಬಗೆಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ ದೀಪ್ತಿ ಟಿ.ಎನ್ ಮಾಹಿತಿ ಹಂಚಿಕೊಂಡಿದ್ದಾರೆ.

ಕುಷ್ಠರೋಗದ ಲಕ್ಷಣಗಳೇನು ?
ಕುಷ್ಠರೋಗವು ಬ್ಯಾಕ್ಟೀರಿಯಾ ಸೋಂಕಿನಿಂದ ಕೂಡಿದ್ದು,ನಿಧಾನವಾಗಿ ಈ ರೋಗವು ಚರ್ಮ ಮತ್ತು ನರಮಂಡಲಕ್ಕೆ ಹಾನಿಯನ್ನುಂಟು ಮಾಡುತ್ತದೆ. ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾಗಳು ಈ ಸೋಂಕನ್ನುಂಟು ಮಾಡುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕುಷ್ಠರೋಗವು ಶರೀರ ವಿರೂಪಗೊಳ್ಳುವಿಕೆ ಮತ್ತು ಅಂಗವೈಕಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕುಷ್ಠರೋಗದ ಬಗೆಗೆ ಇರುವ ಅಪನಂಬಿಕೆಗಳು ಮತ್ತು ಸತ್ಯಾಂಶಗಳು
ತಪ್ಪು ಕಲ್ಪನೆ 1 - ಕುಷ್ಠರೋಗ ಸಾಂಕ್ರಾಮಿಕ
ಸತ್ಯಾಂಶ: ಕುಷ್ಠರೋಗವು ಸಾಮಾನ್ಯವಾಗಿ ಸಾಂಕ್ರಾಮಿಕವಲ್ಲ. ಜಾಗತಿಕ ಜನಸಂಖ್ಯೆಯಲ್ಲಿ ಸುಮಾರು 95%ರಷ್ಟು ಜನರು ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಒಂದು ವೇಳೆ ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ನಿಕಟ ಸಂಪರ್ಕ ಹೊಂದಿದಲ್ಲಿ ಈ ಸಮಸ್ಯೆ ಹರಡುವ ಸಾಧ್ಯತೆ ಇರುತ್ತದೆ. ಕೈಕುಲುಕುವುದು ಅಥವಾ ಕುಷ್ಠರೋಗವಿರುವ ಯಾರನ್ನಾದರೂ ಸ್ಪರ್ಶಿಸುವುದರಿಂದ ಈ ಸಮಸ್ಯೆ ಬರುವುದಿಲ್ಲ. ಈ ರೋಗದ ಲಕ್ಷಣವು ನಿಧಾನವಾಗಿ ಕಂಡುಬರುತ್ತದೆ. ಅಲ್ಲದೆ ಸೋಂಕಿನ ಮೂಲವನ್ನು ಪತ್ತೆ ಹಚ್ಚುವುದು ಕೂಡ ಒಂದು ಸವಾಲು. ಎರಡರಿಂದ ನಾಲ್ಕು ವಾರಗಳ ಚಿಕಿತ್ಸೆಯ ಬಳಿಕ ಈ ರೋಗವು ಸಾಂಕ್ರಾಮಿಕವಾಗಿರುವುದಿಲ್ಲ.

ತಪ್ಪು ಕಲ್ಪನೆ 2 - ಕುಷ್ಠರೋಗ ಬಂದರೆ ವಿರೂಪಗೊಳ್ಳುವಿಕೆ ಕಂಡುಬರುತ್ತದೆ ಮತ್ತು ಅದನ್ನು ಗುಣಪಡಿಸಲು ಸಾಧ್ಯವಿಲ್ಲ
ಸತ್ಯಾಂಶ: ಈ ಸಮಸ್ಯೆಯ ಲಕ್ಷಣಗಳು ಕಂಡುಬಂದಾಗ ಚಿಕಿತ್ಸೆ ನೀಡದೆ ಇದ್ದರೆ ಮಾತ್ರ ವಿರೂಪಗೊಳ್ಳುತ್ತಾ ಹೋಗುತ್ತದೆ. ಮಲ್ಟಿ-ಡ್ರಗ್ ಥೆರಪಿ (MDT) ಮೂಲಕ ಕುಷ್ಠರೋಗವನ್ನು ವಿರೂಪಗಳಿಲ್ಲದೆ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಚಿಕಿತ್ಸೆಯನ್ನು ತ್ವರಿತವಾಗಿ ಪ್ರಾರಂಭಿಸುವುದು ಕೂಡ ಬಹಳ ಮುಖ್ಯ.
ತಪ್ಪು ಕಲ್ಪನೆ 3 - ಇದು ಹೆಚ್ಚಾಗಿ ಆರ್ಥಿಕವಾಗಿ ದುರ್ಬಲ ಹೊಂದಿದವರ ಮೇಲೆ ಪರಿಣಾಮ ಬೀರುತ್ತದೆ
ಸತ್ಯಾಂಶ: ಕುಷ್ಠರೋಗವು ಬ್ಯಾಕ್ಟೀರಿಯದ ಸೋಂಕಿನಿಂದಾಗಿ ಕಾಣಿಸಿಕೊಳ್ಳುತ್ತದೆ. ಹಣಕಾಸಿನ ಸ್ಥಿತಿ, ವಯಸ್ಸು ಅಥವಾ ಲಿಂಗವನ್ನು ಆಧರಿಸಿ ಬರುವಂತದ್ದಲ್ಲ.
ತಪ್ಪು ಕಲ್ಪನೆ 4 - ಕುಷ್ಠರೋಗವು ದೇವರ ಶಾಪ ಅಥವಾ ಶಿಕ್ಷೆ
ಸತ್ಯಾಂಶ: ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾ ದಿಂದ ಹರಡುತ್ತದೆ. ಪರಿಸರ ಅಥವಾ ಸೋಂಕಿತ ವ್ಯಕ್ತಿಯ ಮೂಲಕ ಹರಡುತ್ತದೆ. ಇದೊಂದು ದೈವಿಕ ಶಿಕ್ಷೆಯಲ್ಲ.
ವಿಶ್ವ ಕುಷ್ಠರೋಗ ದಿನದಂದು ಈ ಕುರಿತಾಗಿ ಹೆಚ್ಚಿನ ಜಾಗೃತಿ ಮೂಡಿಸೋಣ. ಜನರಲ್ಲಿರುವ ಅಪನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡೋಣ.












Click it and Unblock the Notifications