Co Sleeping: ಕೋ ಸ್ಲೀಪಿಂಗ್: ಭಾರತೀಯರ ಈ ಹಳೇ ರೂಢಿ ಈಗ ವಿದೇಶಗಳಲ್ಲೂ ಟ್ರೆಂಡಿಂಗ್!
ಸಣ್ಣ ಮಕ್ಕಳಾಗಿದ್ದಾಗ ನಾವು ಎಲ್ಲಿ ಮಲಗುತ್ತಿದ್ದೆವು ನೆನಪಿದೆಯಾ? ಅಮ್ಮನ ಸೆರಗಿನ ಮರೆಯಲ್ಲಿ, ಅಪ್ಪನ ಶರ್ಟನ್ನು ಗಟ್ಟಿಯಾಗಿ ಹಿಡಿದುಕೊಂಡು. ಕೆಲವೊಮ್ಮೆ ಅಪ್ಪನ ಹೆಗಲ ಮೇಲೆ. ಇನ್ನು ಹಲವೊಮ್ಮೆ ಅಮ್ಮ ಜೋಗುಳ ಹಾಡುತ್ತ ಚುಕ್ಕು ತಟ್ಟಿ ಮಲಗಿಸುತ್ತಿದ್ದಳು. ಭಾರತೀಯರಾದ ನಾವೆಲ್ಲರೂ ಸುಮಾರಾಗಿ ಹೈಸ್ಕೂಲಿಗೆ ಹೋಗುವವರೆಗೂ ಅಮ್ಮ- ಅಪ್ಪನ ಜೊತೆಗೆ ಮಲಗುವುದೇ ರೂಢಿ. ಹಿಂದೆಲ್ಲಾ ಮನೆ ಎಂದರೆ ಒಂದೇ ದೊಡ್ಡ ಮಲಗುವ ಕೋಣೆ. ಹೀಗಾಗಿ ಪ್ರತ್ಯೇಕ ಮಲಗುವುದು ಎಂಬ ರೂಢಿಯೇ ಇರಲಿಲ್ಲ.
ನೀವು ಚಿಕ್ಕವರಿದ್ದಾಗ ಮೊದಲ ಬಾರಿಗೆ ಒಬ್ಬರೇ ಒಂದು ಕೋಣೆಯಲ್ಲಿ ಮಲಗಿದ್ದು ನೆನಪಿದೆಯಾ? ಭಾರತದ ಬಹುತೇಕ ಕುಟುಂಬಗಳಲ್ಲಿ ಬಾಲ್ಯದ ರಾತ್ರಿ ಎಂದರೆ ಒಬ್ಬರೇ ಮಲಗುವ ರೂಢಿಯೇ ಇಲ್ಲ. ಅಪ್ಪ-ಅಮ್ಮನ ಜೊತೆ, ಅಜ್ಜ-ಅಜ್ಜಿಯ ಜೊತೆ, ಕೆಲವೊಮ್ಮೆ ಮನೆಯಲ್ಲಿರುವ ಎಲ್ಲರೂ ಒಂದೇ ಕೋಣೆಯಲ್ಲಿ ಮಲಗುವುದು ಸಾಮಾನ್ಯವಾಗಿತ್ತು. ಮಲಗುವ ಮುನ್ನ ಅಜ್ಜಿ ಹೇಳುವ ಕಥೆ, ಅಮ್ಮ ಹಾಡುವ ಜೋಗುಳ, ಅಪ್ಪನ ಪಕ್ಕದಲ್ಲಿ ಮಲಗುವ ಖುಷಿ... ರಾತ್ರಿ ಮಧ್ಯದಲ್ಲಿ ಭಯವಾದಾಗ ಅಮ್ಮನ ಕೈ ಹುಡುಕುವುದು... ಇವೆಲ್ಲವೂ ನಮ್ಮ ಬಾಲ್ಯದ ನೆನಪುಗಳ ಭಾಗವಾಗಿತ್ತು.

ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪ್ರತ್ಯೇಕವಾಗಿ ಮಲಗುವುದನ್ನು ಸ್ವಾವಲಂಬನೆಯ ಒಂದು ಹಂತ ಎಂದು ನೋಡಲಾಗುತ್ತದೆ. ಅಲ್ಲಿ ಹುಟ್ಟಿದ ಕೆಲವೇ ತಿಂಗಳಲ್ಲಿ ಮಗುವನ್ನು ಬೇರೆ ಮಲಗಿಸಲಾಗುತ್ತದೆ. ವೈಯಕ್ತಿಕತೆ, ಪ್ರೈವೆಸಿ ಮೊದಲಾದವುಗಳೆಲ್ಲಾ ಇದಕ್ಕೆ ಕಾರಣ. ಆದರೆ ಭಾರತದಲ್ಲಿ ಮಾತ್ರ ಮಕ್ಕಳನ್ನು ತಮ್ಮ ಹತ್ತಿರವೇ ಮಲಗಿಸಿಕೊಳ್ಳುವುದು ಹಲವು ವರ್ಷಗಳಿಂದ ಸಹಜವಾದ ಸಂಗತಿ. ಇದು ರೂಢಿ, ಮಗುವಿನ ಮೇಲಿನ ಪ್ರೀತಿ, ಕಾಳಜಿ ಮತ್ತು ಭದ್ರತೆಯ ಭಾವನೆಯ ಭಾಗ.
ಕೋ ಸ್ಲೀಪಿಂಗ್ (ಒಟ್ಟಿಗೆ ಮಲಗೋದು) ಟ್ರೆಂಡ್
ಇತ್ತೀಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಟ್ಟಿಗೆ ಮಲಗೋದು (co-sleeping) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಿಂದ ಆಗುವ ಅನುಕೂಲಗಳು, ಆರೋಗ್ಯದ ಪ್ರಯೋಜನಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಆದರೆ ಭಾರತದಲ್ಲಿ ಇದು ಹೊಸ ವಿಷಯ ಅಲ್ಲ. ನಮ್ಮ ಮನೆಗಳಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಸಣ್ಣ ಮನೆಗಳಲ್ಲಿ ಜಾಗದ ಕೊರತೆ ಇರಬಹುದು. ತಾಯಿಗೆ ರಾತ್ರಿ ಮಗುವಿಗೆ ಹಾಲುಣಿಸಲು ಅನುಕೂಲವಾಗಬಹುದು. ಮಗು ಅಳುತ್ತಿದ್ದರೆ ತಕ್ಷಣ ಎತ್ತಿಕೊಂಡು ಸಮಾಧಾನ ಮಾಡಬಹುದು.
ಅದಕ್ಕಿಂತ ಮುಖ್ಯವಾಗಿ, ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ 'ನಾವು' ಎನ್ನುವ ಭಾವನೆಗೆ ಬಹಳ ಮಹತ್ವ. ಊಟ ಒಟ್ಟಿಗೆ. ಹಬ್ಬ ಒಟ್ಟಿಗೆ. ಪ್ರವಾಸ ಒಟ್ಟಿಗೆ. ಹಾಗೆಯೇ ನಿದ್ದೆಯೂ ಒಟ್ಟಿಗೆ. ಮಗುವನ್ನು ಬೇಗನೇ ಪ್ರತ್ಯೇಕವಾಗಿ ಮಲಗಿಸಬೇಕು ಎಂಬ ಒತ್ತಡ ಹಿಂದಿನ ತಲೆಮಾರುಗಳಲ್ಲಿ ಅಷ್ಟಾಗಿ ಇರಲಿಲ್ಲ.
ಏಷ್ಯಾದ ಹಲವು ದೇಶಗಳಲ್ಲಿ, ಭಾರತ, ಚೀನಾ ಮತ್ತು ಜಪಾನ್ ಸೇರಿದಂತೆ, ಕುಟುಂಬದ ಸದಸ್ಯರು ಹತ್ತಿರ ಹತ್ತಿರ ಮಲಗುವ ಪದ್ಧತಿ ಸಾಕಷ್ಟು ಸಾಮಾನ್ಯವಾಗಿದೆ ಎಂದು ಹಲವು ಅಧ್ಯಯನಗಳು ಸೂಚಿಸಿವೆ.
ಒಟ್ಟಿಗೆ ಮಲಗುವುದರಿಂದ ಏನು ಪ್ರಯೋಜನ?
ಮಕ್ಕಳನ್ನು ಹತ್ತಿರದಲ್ಲಿ ಮಲಗಿಸುವುದನ್ನು ಇಷ್ಟಪಡುವ ಪೋಷಕರು ಇದನ್ನು ತುಂಬಾ ಸಹಜವಾದ ವಿಷಯ ಎಂದು ಹೇಳುತ್ತಾರೆ. ಮಗು ರಾತ್ರಿ ಅತ್ತರೆ ತಕ್ಷಣ ಗಮನ ಕೊಡಬಹುದು. ಹಸಿವಾದರೆ ಹಾಲು ಕೊಡಬಹುದು. ಹೆದರಿದರೆ ಸಮಾಧಾನ ಮಾಡಬಹುದು. ಅಂದರೆ ಮಗು ಮತ್ತು ಪೋಷಕರ ನಡುವೆ ದೈಹಿಕ ಅಂತರ ಕಡಿಮೆ ಇರುತ್ತದೆ.
ವಿಶೇಷವಾಗಿ ಚಿಕ್ಕ ಮಗುವಿನ ವಿಷಯದಲ್ಲಿ ಇದು ತಾಯಿಗೆ ಅನುಕೂಲವಾಗಬಹುದು. ಮಗು ಹತ್ತಿರದಲ್ಲಿದ್ದರೆ ರಾತ್ರಿ ಹಾಲುಣಿಸಲು ಬೇರೆ ಕೋಣೆಗೆ ಹೋಗಬೇಕಾದ ಅಗತ್ಯ ಇರುವುದಿಲ್ಲ. ಮಗುವಿಗೆ ಕೂಡ 'ಅಮ್ಮ-ಅಪ್ಪ ಇಲ್ಲೇ ಇದ್ದಾರೆ' ಎನ್ನುವ ಭದ್ರತೆಯ ಭಾವನೆ ಸಿಗುತ್ತದೆ. ಇದೇ ಕಾರಣಕ್ಕೆ ಈಗ attachment parenting ಮತ್ತು responsive parenting ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ.
ಮನುಷ್ಯರು ಗುಂಪುಜೀವಿಗಳು
ಮಾನವ ಇತಿಹಾಸವನ್ನು ನೋಡಿದರೆ, ಕುಟುಂಬದಿಂದ ದೂರವಾಗಿ ಪ್ರತ್ಯೇಕ ಕೋಣೆಯಲ್ಲಿ ಒಬ್ಬರೇ ಮಲಗುವ ಪದ್ಧತಿಯೇ ಇರಲಿಲ್ಲ. ಹಿಂದೆ ಮನುಷ್ಯರು ಗುಂಪುಗಳಲ್ಲಿ ಬದುಕುತ್ತಿದ್ದರು. ಒಂದೇ ಜಾಗದಲ್ಲಿ ಮಲಗುತ್ತಿದ್ದರು. ಇದರಿಂದ ಚಳಿ, ಅಪಾಯ ಮತ್ತು ಕಾಡುಪ್ರಾಣಿಗಳಿಂದ ರಕ್ಷಣೆ ಸಿಗುತ್ತಿತ್ತು. ಜೊತೆಗೆ ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳುವುದೂ ಸುಲಭವಾಗುತ್ತಿತ್ತು.
ಅಂದರೆ, 'ಮಕ್ಕಳು ಪ್ರತ್ಯೇಕ ಕೋಣೆಯಲ್ಲಿ ಮಲಗಬೇಕು' ಎನ್ನುವ ನಿಯಮ ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ಒಂದೇ ಥರ ಇಲ್ಲ. ಕೆಲವು ದೇಶಗಳಲ್ಲಿ ಇದು ಸ್ವಾವಲಂಬನೆ, ಪ್ರೈವೆಸಿಯ ಸಂಕೇತವಾದರೆ, ಭಾರತದಂತಹ ಸಂಸ್ಕೃತಿಗಳಲ್ಲಿ ಕುಟುಂಬದ ಹತ್ತಿರ ಇರುವುದು ಭದ್ರತೆಯ ಸಂಕೇತವಾಗಿದೆ.
ಸುರಕ್ಷತೆ ಮುಖ್ಯ
ಮಕ್ಕಳನ್ನು ಹತ್ತಿರದಲ್ಲಿ ಮಲಗಿಸುವುದರಲ್ಲಿ ಭಾವನಾತ್ಮಕವಾಗಿ ಹಲವು ಒಳ್ಳೆಯ ಅಂಶಗಳಿರಬಹುದು. ಆದರೆ ಸಣ್ಣ ಮಗುವಿನ ವಿಷಯದಲ್ಲಿ ಸುರಕ್ಷತೆ ಬಹಳ ಮುಖ್ಯ. ವಿಶೇಷವಾಗಿ ನವಜಾತ ಶಿಶುವನ್ನು ಅಪ್ಪ-ಅಮ್ಮನ ಜೊತೆ ಒಂದೇ ಹಾಸಿಗೆಯಲ್ಲಿ ಮಲಗಿಸುವುದರಿಂದ ಉಸಿರುಗಟ್ಟುವಿಕೆ ಸೇರಿದಂತೆ ಕೆಲವು ಅಪಾಯಗಳು ಹೆಚ್ಚಾಗಬಹುದು.
ಪೋಷಕರು ಧೂಮಪಾನ ಮಾಡುತ್ತಿದ್ದರೆ, ಮದ್ಯ ಸೇವಿಸಿದ್ದರೆ ಅಥವಾ ನಿದ್ದೆ ತರಿಸುವ ಔಷಧ ತೆಗೆದುಕೊಂಡಿದ್ದರೆ ಅಪಾಯ ಇನ್ನಷ್ಟು ಹೆಚ್ಚಾಗಬಹುದು. ಅದೇ ರೀತಿ ತುಂಬಾ ಮೃದುವಾದ ಹಾಸಿಗೆ, ಸೋಫಾ ಅಥವಾ ಅಸುರಕ್ಷಿತ ಜಾಗದಲ್ಲೂ ಮಗುವನ್ನು ಮಲಗಿಸುವುದು ಅಪಾಯಕಾರಿ. ಅವಧಿಗೆ ಮುಂಚಿತವಾಗಿ ಜನಿಸಿದ ಅಥವಾ ಕಡಿಮೆ ತೂಕದ ಮಕ್ಕಳ ವಿಷಯದಲ್ಲಿ ಇನ್ನಷ್ಟು ಎಚ್ಚರಿಕೆ ಅಗತ್ಯ.
ಅದಕ್ಕಾಗಿಯೇ ಮಕ್ಕಳ ವೈದ್ಯರು ಸಾಮಾನ್ಯವಾಗಿ ಚಿಕ್ಕ ಮಗುವನ್ನು ಪೋಷಕರ ಕೋಣೆಯಲ್ಲೇ, ಆದರೆ ಪ್ರತ್ಯೇಕವಾದ ಗಟ್ಟಿಯಾದ ಮತ್ತು ಸುರಕ್ಷಿತ ಮಲಗುವ ಜಾಗದಲ್ಲಿ ಮಲಗಿಸುವುದನ್ನು ಸಲಹೆ ಮಾಡುತ್ತಾರೆ. ಅಂದರೆ, ಮಗುವನ್ನು ಹತ್ತಿರದಲ್ಲಿಟ್ಟುಕೊಳ್ಳುವುದು ಬೇರೆ, ಒಂದೇ ಹಾಸಿಗೆಯಲ್ಲಿ ಮಲಗಿಸುವುದು ಬೇರೆ. ಇವೆರಡೂ ಒಂದೇ ಅಲ್ಲ.
ಸಂಸ್ಕೃತಿಗಳ ಭಿನ್ನ
ಹಾಗಾದರೆ ಪಾಶ್ಚಾತ್ಯ ದೇಶಗಳೂ ಸರಿಯೋ, ಭಾರತೀಯರು ಸರಿಯೋ? ಇದು ಸರಿಯೋ ತಪ್ಪೋ ಎನ್ನುವುದಕ್ಕಿಂತ, ಪ್ರತಿ ಕುಟುಂಬದ ಪರಿಸ್ಥಿತಿ ಮತ್ತು ಸಂಸ್ಕೃತಿ ಹೇಗಿದೆ ಎನ್ನುವುದನ್ನು ನೋಡಬೇಕು. ಕೆಲವು ಮಕ್ಕಳು ಅಮ್ಮ-ಅಪ್ಪನ ಜೊತೆ ಮಲಗಿದಾಗ ಹೆಚ್ಚು ಸುರಕ್ಷಿತವಾಗಿರಬಹುದು. ಕೆಲವರು ಪ್ರತ್ಯೇಕವಾಗಿ ಮಲಗಿದರೂ ಆರಾಮವಾಗಿರಬಹುದು.
ಅಂತಿಮವಾಗಿ ಮುಖ್ಯವಾಗುವುದು ಮಗು ಎಲ್ಲಿ ಮಲಗುತ್ತದೆ ಎನ್ನುವುದಕ್ಕಿಂತ, ಮಗು ಸುರಕ್ಷಿತವಾಗಿದೆಯೇ, ಪ್ರೀತಿಯನ್ನು ಅನುಭವಿಸುತ್ತಿದೆಯೇ ಮತ್ತು ಪೋಷಕರು ಅದರ ಅಗತ್ಯಕ್ಕೆ ಸ್ಪಂದಿಸುತ್ತಿದ್ದಾರೆಯೇ ಎಂಬುದು.
ಇವತ್ತು co-sleeping, attachment parenting, responsive caregiving ಎಂದು ದೊಡ್ಡ ದೊಡ್ಡ ಹೆಸರುಗಳಲ್ಲಿ ಚರ್ಚೆಯಾಗುತ್ತಿರುವ ವಿಷಯ ನಮ್ಮ ಮನೆಗಳಲ್ಲಿ ಹಲವು ತಲೆಮಾರುಗಳಿಂದ ಸಹಜವಾಗಿಯೇ ನಡೆದುಕೊಂಡು ಬಂದಿದೆ. ಅಜ್ಜಿಯ ಪಕ್ಕದಲ್ಲಿ ಮಲಗಿದ ಮಗು, ಅಮ್ಮನ ಕೈ ಹಿಡಿದು ನಿದ್ದೆ ಮಾಡುವ ಮಗು, ರಾತ್ರಿ ಹೆದರಿದಾಗ ಅಪ್ಪನನ್ನು ಹುಡುಕುವ ಮಗು. ಹೆತ್ತವರು ಪಕ್ಕದಲ್ಲಿದ್ದರೆ 'ನಾನು ಒಬ್ಬನೇ ಅಲ್ಲ' ಎನ್ನುವ ಭಾವನೆ ಮಗುವಿಗೆ ಒಂದು ರೀತಿಯ ಭದ್ರತೆ ಕೊಡುತ್ತದೆ.
ಬಹುಶಃ ಅದಕ್ಕಾಗಿಯೇ ದೊಡ್ಡವರಾದ ಮೇಲೂ ನಮ್ಮ ಬಾಲ್ಯದ ಕೆಲವು ರಾತ್ರಿಗಳು ನೆನಪಿನಲ್ಲಿ ಉಳಿದುಬಿಡುತ್ತವೆ. ಅಜ್ಜಿ ಹೇಳಿದ ಕಥೆ ನೆನಪಿರುತ್ತದೆ. ಅಮ್ಮ ಹಾಡಿದ ಜೋಗುಳ ನೆನಪಿರುತ್ತದೆ. ಅಪ್ಪನ ಪಕ್ಕದಲ್ಲಿ ಮಲಗಿದ್ದ ಅನುಭವ ನೆನಪಿರುತ್ತದೆ. ಮುಖ್ಯವಾಗಿ, ಆಗ ನಮ್ಮ ಪಕ್ಕದಲ್ಲಿ ಯಾರೋ ಇದ್ದರು ಎಂಬ ಭಾವನೆ ನೆನಪಿರುತ್ತದೆ.
ಮಕ್ಕಳು ಬೆಳೆದು ದೊಡ್ಡವರಾಗಬೇಕು. ಸ್ವತಂತ್ರರಾಗಬೇಕು. ಒಂದು ದಿನ ತಮ್ಮದೇ ಕೋಣೆಯಲ್ಲಿ, ತಮ್ಮದೇ ಜಗತ್ತಿನಲ್ಲಿ ಬದುಕಬೇಕು. ಆದರೆ ಸ್ವಾತಂತ್ರ್ಯ ಕಲಿಯುವುದಕ್ಕೂ ಮುನ್ನ "ನಾನು ಸುರಕ್ಷಿತವಾಗಿದ್ದೇನೆ. ನನ್ನನ್ನು ಪ್ರೀತಿಸುವವರು ನನ್ನ ಜೊತೆ ಇದ್ದಾರೆ ಎಂಬ ಭಾವ ಅವರಲ್ಲಿರಬೇಕು.


Click it and Unblock the Notifications
