ಬೇಸಿಗೆಯಲ್ಲಿ ನೀರಿನತ್ತ ಎಚ್ಚರ ವಹಿಸದಿದ್ದರೆ ರೋಗ ಬರಬಹುದು!
ಬೇಸಿಗೆಯಲ್ಲಿ ನೀರನ್ನು ಕುಡಿಯುವ ಮುನ್ನ ಎಚ್ಚರ ವಹಿಸುವುದು ಒಳಿತು. ಬಾಯಾರಿಕೆ ಆಯಿತೆಂದು ಸಿಕ್ಕ ಸಿಕ್ಕಲ್ಲಿ ನೀರನ್ನು ಕುಡಿಯುವ ಮುನ್ನ ಅದರತ್ತ ಗಮನಹರಿಸುವುದು ಅಗತ್ಯ. ಶುದ್ಧ ನೀರನ್ನು ಕುಡಿಯದೆ ಹೋದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಆದಷ್ಟು ಶುದ್ಧ ನೀರನ್ನು ಸೇವಿಸುವುದಕ್ಕೆ ಆದ್ಯತೆ ನೀಡಿ. ಹಾಗೆಯೇ ಹೋಟೆಲ್, ಜ್ಯೂಶ್ ಅಂಗಡಿ ಸೇರಿದಂತೆ ಆಹಾರವನ್ನು ಮಾರಾಟ ಮಾಡುವವರು ಶುಚಿತ್ವಕ್ಕೆ ಆದ್ಯತೆ ನೀಡ ಬೇಕಾಗುತ್ತದೆ.
ಬೇಸಿಗೆಯ ದಿನಗಳಲ್ಲಿ ನೀರಿಗೆ ಬೇಡಿಕೆ ಬರುವುದು ಸಹಜ. ಜತೆಗೆ ಕೆಲವೊಮ್ಮೆ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರವಾಗಿ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡಬಹುದು. ಇನ್ನು ಕೆಲವೆಡೆ ಕೊಳಚೆ, ತ್ಯಾಜ್ಯ ನೀರು ನದಿಗೆ ಸೇರುತ್ತಿದ್ದು ಅದನ್ನು ಶುದ್ದೀಕರಿಸದೆ ಕುಡಿಯುವುದರಿಂದ ರೋಗಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಶುಚಿತ್ವವನ್ನು ನೀರಿನ ಮೂಲಗಳಲ್ಲಿ ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಅದರಲ್ಲೂ ನೀರಿನ ಟ್ಯಾಂಕ್, ಬೋರ್ ವೆಲ್, ಬಾವಿಗಳ ಬಳಿ ಶುಚಿತ್ವತೆಗೆ ಆದ್ಯತೆ ಇರಲೇ ಬೇಕಾಗುತ್ತದೆ.

ಈ ಸ್ಥಳಗಳಲ್ಲಿ ಕೊಳಚೆ ನೀರುಗಳು ನಿಲ್ಲುತ್ತಿದ್ದು ಇಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟಿರಿಯಾ ಮತ್ತು ಸೊಳ್ಳೆಗಳು ಕಾಯಿಲೆಗಳನ್ನು ಹರಡುತ್ತವೆ. ಕೆರೆ, ಬಾವಿ, ನದಿಗಳಿಂದ ತಂದ ನೀರನ್ನು ಚೆನ್ನಾಗಿ ಕುದಿಸಿ ಉಪಯೋಗಿಸದೆ ಕೆಲವರು ನೇರವಾಗಿ ಕುಡಿಯುತ್ತಿರುವುದರಿಂದಲೂ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕಲುಷಿತ ನೀರಿನಿಂದಾಗಿ ಕಾಲರಾ, ಕರಳುಬೇನೆ(ವಾಂತಿ ಬೇಧಿ), ಟೈಫಾಯ್ಡ್ (ವಿಷಮಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮೊದಲಾದ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬೇಸಿಗೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ
ಹೆಚ್ಚಿನ ಕಾಯಿಲೆಗಳು ಸೋಂಕುಗಳಾಗಿದ್ದು, ಅವು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದರಿಂದಾಗಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕ್ ಗಳ ಸುತ್ತಮುತ್ತ ಬಳಸಿದ ನೀರು ನಿಲ್ಲುವುದರಿಂದ, ಕೆರೆ ಬಳಿ ಮಲ ವಿಸರ್ಜನೆ ಮಾಡುವುದು, ದನಕರುಗಳನ್ನು ತೊಳೆಯುವುದು, ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವುದು, ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್ ನಿಂದ ಸರಬರಾಜಾಗುವ ಪೈಪುಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸದಿರುವುದರಿಂದ ಬ್ಯಾಕ್ಟರಿಯಾಗಳು ಉತ್ಪತ್ತಿಯಾಗಿ ಅವು ನೀರಿನ ಮೂಲಕ ಶರೀರವನ್ನು ಸೇರುವ ಸಾಧ್ಯತೆಯಿರುತ್ತದೆ.
ಮೊದಲಿಗೆ ಬೇಸಿಗೆಯಲ್ಲಿ ತಮ್ಮ ಮನೆ ಮತ್ತು ಬೀದಿಯಲ್ಲಿ ಶುಚಿತ್ವಕ್ಕೆ ಮೊದಲು ಆದ್ಯತೆ ನೀಡಬೇಕು, ಕುಡಿಯುವ ನೀರಿನ ಸ್ಥಳಗಳಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಡೆಗಟ್ಟಬೇಕು, ಕುಡಿಯುವ ನೀರಿನ ಸ್ಥಳಗಳಲ್ಲಿ ದನಕರುಗಳನ್ನು, ಬಟ್ಟೆ ಪಾತ್ರೆ ತೊಳೆಯುವುದನ್ನು ತಡೆಗಟ್ಟಬೇಕು. ಒಂದು ವೇಳೆ ತೊಳೆದರೂ ಅದರ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಬೇಸಿಗೆಯಲ್ಲಿ ಕಾಮಾಲೆ ರೋಗ ಹೆಚ್ಚು ಹೆಚ್ಚು ಕಾಡುತ್ತಿದ್ದು, ವೈದ್ಯರ ಪ್ರಕಾರ ಯಕೃತಿನ (ಲಿವರ್) ಸೋಂಕಿನಿಂದ ಕಾಮಾಲೆ ಬರುತ್ತದೆಯಂತೆ.
ಕಾಮಾಲೆ ರೋಗದತ್ತ ಹೆಚ್ಚಿನ ನಿಗಾವಹಿಸಿ
ಕಾಮಾಲೆ ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿದ್ದು, ಆ ಪೈಕಿ ಸೌಮ್ಯ ಸ್ವರೂಪದ ಎ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ಬಿ ವೈರಾಣು ಹಾಗೂ ಸಿ, ಡಿ, ಇ ಮತ್ತು ಜಿ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು. ಕಾಮಾಲೆ ರೋಗವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಸಾಂದ್ರತೆ ಜಾಸ್ತಿ ಇರುವಲ್ಲಿ ಮತ್ತು ವೈಯಕ್ತಿಕ ಹಾಗೂ ಪರಿಸರ ನೈರ್ಮಲ್ಯ ಕೊರತೆ ಇರುವ ಕಡೆ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬರುತ್ತಿದೆ.
ಈ ರೋಗ ಹರಡಲು ವಯಸ್ಸಿನ ಮತ್ತು ಲಿಂಗ ತಾರತಮ್ಯವಿಲ್ಲ. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ.
ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ದ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಬೇಸಿಗೆಯಲ್ಲಿ ಬಹುತೇಕ ಸಾಂಕ್ರಾಮಿಕ ಕಾಯಿಲೆಗಳು ಕಲುಷಿತ ನೀರಿನಿಂದಲೇ ಬರುತ್ತಿದ್ದು, ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಎಲ್ಲೆಂದರಲ್ಲಿ ಆಹಾರ ಸೇವಿಸುವ ಮತ್ತು ನೀರು ಕುಡಿಯುವ ಮೊದಲು ಶುಚಿತ್ವವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು. ಇಲ್ಲದೆ ಹೋದರೆ ನಾವೇ ಕಾಯಿಲೆಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.












Click it and Unblock the Notifications