Mental health: ಮಾನಸಿಕ ನೆಮ್ಮದಿಗಾಗಿ 80/20 ನಿಯಮ: ಕಡಿಮೆ ಕೆಲಸ ಮಾಡಿ ಹೆಚ್ಚು ಸಂತೋಷವಾಗಿರಲು ಪಂಚಸೂತ್ರ
ಇಂದಿನ ವೇಗದ ಬದುಕಿನಲ್ಲಿ ಪ್ರತಿಯೊಬ್ಬರ ಮುಂದೆಯೂ ಒಂದಲ್ಲ ಒಂದು ಜವಾಬ್ದಾರಿ ಇರುತ್ತದೆ. ಕಚೇರಿ ಕೆಲಸ, ಕುಟುಂಬದ ಹೊಣೆಗಾರಿಕೆ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ, ವೈಯಕ್ತಿಕ ಆಸಕ್ತಿಗಳು, ಆರ್ಥಿಕ ಗುರಿಗಳು... ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬೇಕು ಎಂಬ ಒತ್ತಡ ಕೆಲವೊಮ್ಮೆ ಮಾನಸಿಕ ಆಯಾಸಕ್ಕೂ ಕಾರಣವಾಗುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಸಾಧನೆಗಳನ್ನು ನೋಡಿದಾಗ ಅವರಂತೆಯೇ ನಾವೂ ಎಲ್ಲವನ್ನೂ ಸಾಧಿಸಬೇಕು ಎಂಬ ಹಂಬಲ ಮೂಡುತ್ತದೆ. ಯಾವುದನ್ನಾದರೂ ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಭಯ (FOMO) ನಮ್ಮನ್ನು ಸದಾ ಓಡುತ್ತಲೇ ಇರುವಂತೆ ಮಾಡುತ್ತದೆ. ಆದರೆ ನಿಜವಾಗಿಯೂ ಎಲ್ಲವನ್ನೂ ನಿಭಾಯಿಸುವುದು ಸಾಧ್ಯವೇ? ಮಾನಸಿಕ ತಜ್ಞರು ಹೇಳುವಂತೆ, ಎಲ್ಲ ಕೆಲಸಗಳನ್ನೂ ಒಂದೇ ಸಮಯದಲ್ಲಿ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಂದು ಕೆಲಸಗಳಿಗೆ ಆದ್ಯತೆ ನೀಡಬೇಕು, ಇನ್ನು ಕೆಲವು ಕೆಲಸಗಳನ್ನು ಕೈಬಿಡಲು ಕಲಿಯಬೇಕು ಎಂಬುದು ಅವರ ಮಾತಿನ ಸಾರ.

ಇದಕ್ಕೆ ಸಂಬಂಧಿಸಿದಂತೆ, 'ದಟ್ ಕಲ್ಚರ್ ಥಿಂಗ್' ಸಂಸ್ಥೆಯ ಸಂಘಟನಾ ಮನೋವಿಜ್ಞಾನಿ ಮತ್ತು ಕಾರ್ಯನಿರ್ವಾಹಕ ತರಬೇತುದಾರರಾದ ಗುರ್ಲೀನ್ ಬರೂವಾ ಹೇಳುವುದು ಹೀಗೆ- ಇಂದಿನ ಕಾಲದಲ್ಲಿ ಮಾಹಿತಿಯ ಪ್ರವಾಹವೇ ಇದೆ. ಎಲ್ಲೆಡೆ ಏನಾದರೊಂದು ನಡೆಯುತ್ತಿರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಬೇಕೆಂಬ ಒತ್ತಡ ಜನರನ್ನು ಕಾಡುತ್ತಿದೆ. ಹಾಗಾದರೆ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆ? ಇದಕ್ಕೆ ನೆರವಾಗಬಲ್ಲ ಸರಳ ಸೂತ್ರವೇ 80/20 ನಿಯಮ.
Mental Health: ಏನಿದು 80/20 ನಿಯಮ?
80/20 ನಿಯಮವನ್ನು ಪ್ಯಾರೆಟೊ ತತ್ವ ಎಂದೂ ಕರೆಯಲಾಗುತ್ತದೆ. ನಾವು ಮಾಡುವ ಶ್ರಮದ ಶೇ.20ರಷ್ಟು ಭಾಗದಿಂದಲೇ ಬಹುತೇಕ ಶೇ.80ರಷ್ಟು ಫಲಿತಾಂಶ ದೊರೆಯುತ್ತದೆ ಎಂಬುದು ಈ ತತ್ವದ ಸಾರ.
ಇದನ್ನು ದಿನನಿತ್ಯದ ಬದುಕಿಗೂ ಅನ್ವಯಿಸಬಹುದು. ನಿಮ್ಮ ನೆಮ್ಮದಿ, ಸಂತೋಷ ಮತ್ತು ಪ್ರಗತಿಗೆ ಹೆಚ್ಚು ಕೊಡುಗೆ ನೀಡುವ ಕೆಲವು ಕೆಲಸಗಳನ್ನು ಗುರುತಿಸಿ, ಅವುಗಳಿಗೆ ಹೆಚ್ಚಿನ ಗಮನ ಕೊಡಿ. ಎಲ್ಲ ಕೆಲಸಗಳನ್ನೂ ಸಮಾನವಾಗಿ ಮಾಡಲು ಪ್ರಯತ್ನಿಸುವ ಬದಲು, ನಿಜವಾಗಿಯೂ ಮುಖ್ಯವಾದುದನ್ನು ಆಯ್ಕೆ ಮಾಡಿಕೊಳ್ಳಿ.
ಉದಾಹರಣೆಗೆ, ದಿನವಿಡೀ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡರೂ ನಿಮಗೆ ತೃಪ್ತಿ ಸಿಗದಿರಬಹುದು. ಆದರೆ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವುದು, ಇಷ್ಟದ ಹವ್ಯಾಸಕ್ಕೆ ಸಮಯ ನೀಡುವುದು ಅಥವಾ ಆರೋಗ್ಯದ ಕಡೆ ಗಮನ ಹರಿಸುವುದು ಹೆಚ್ಚು ಸಂತೋಷ ನೀಡಬಹುದು.
ವರ್ಷಕ್ಕೆ 30 ಗುರಿಗಳಲ್ಲ, ನಾಲ್ಕೈದು ಮುಖ್ಯ ಗುರಿಗಳಿರಲಿ
ಒಂದು ವರ್ಷದಲ್ಲಿ ಸಾಧಿಸಬೇಕಾದ ಗುರಿಗಳ ಪಟ್ಟಿಯನ್ನು ಸಿದ್ಧಪಡಿಸುವಾಗ ಕೆಲವರು 20ರಿಂದ 30 ಗುರಿಗಳನ್ನು ಬರೆದುಕೊಳ್ಳುತ್ತಾರೆ. ಆದರೆ ಇಷ್ಟೊಂದು ಗುರಿಗಳನ್ನು ಏಕಕಾಲದಲ್ಲಿ ಸಾಧಿಸಲು ಪ್ರಯತ್ನಿಸುವುದು ಒತ್ತಡ ಹೆಚ್ಚಿಸಬಹುದು.
ವರ್ಷಕ್ಕೆ ನಾಲ್ಕರಿಂದ ಐದು ಪ್ರಮುಖ ಗುರಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂಬುದು ಗುರ್ಲೀನ್ ಬರೂವಾ ಅವರ ಸಲಹೆ. ಅವುಗಳಲ್ಲಿ ಎರಡು ವೈಯಕ್ತಿಕ ಗುರಿಗಳು, ಎರಡು ವೃತ್ತಿಪರ ಗುರಿಗಳು ಮತ್ತು ಒಂದು ಆಧ್ಯಾತ್ಮಿಕ ಗುರಿ ಇರಬಹುದು.
ಉದಾಹರಣೆಗೆ, ಪ್ರತಿದಿನ ವ್ಯಾಯಾಮ ಮಾಡುವುದು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು, ವೃತ್ತಿಯಲ್ಲಿ ಹೊಸ ಕೌಶಲ ಕಲಿಯುವುದು, ಉಳಿತಾಯ ಹೆಚ್ಚಿಸುವುದು ಅಥವಾ ಧ್ಯಾನಕ್ಕೆ ಸಮಯ ಮೀಸಲಿಡುವುದು ನಿಮ್ಮ ಗುರಿಗಳಾಗಿರಬಹುದು.
ಎಲ್ಲ ಕೆಲಸಗಳನ್ನೂ ನೀವೇ ಮಾಡಬೇಕಿಲ್ಲ
ಕೆಲವರು ಪ್ರತಿಯೊಂದು ಕೆಲಸವನ್ನೂ ತಾವೇ ಮಾಡಬೇಕು ಎಂದುಕೊಳ್ಳುತ್ತಾರೆ. ಇದರಿಂದ ಸಮಯವೂ ವ್ಯರ್ಥವಾಗುತ್ತದೆ, ಒತ್ತಡವೂ ಹೆಚ್ಚುತ್ತದೆ. ನಿಮ್ಮ ಸಮಯಕ್ಕೆ ಹೆಚ್ಚು ಮೌಲ್ಯ ನೀಡುವ ಕೆಲಸಗಳು ಯಾವುವು ಎಂಬುದನ್ನು ಮೊದಲು ಗುರುತಿಸಿ. ಸಾಧ್ಯವಾದಲ್ಲಿ ಕೆಲವು ಕೆಲಸಗಳನ್ನು ಇತರರಿಗೆ ವಹಿಸಿ. ತಂತ್ರಜ್ಞಾನದ ನೆರವಿನಿಂದ ಸ್ವಯಂಚಾಲಿತವಾಗಿ ಮಾಡಬಹುದಾದ ಕೆಲಸಗಳನ್ನು ಹಾಗೆಯೇ ನಿರ್ವಹಿಸಿ. ಎಲ್ಲ ಜವಾಬ್ದಾರಿಗಳನ್ನೂ ನಿಮ್ಮ ಹೆಗಲ ಮೇಲೆ ಹಾಕಿಕೊಳ್ಳುವ ಅಗತ್ಯವಿಲ್ಲ.
ಸಮಯ ನಿರ್ವಹಣೆಗಿಂತ ಗಮನ ನಿರ್ವಹಣೆ ಮುಖ್ಯ
ಪ್ರತಿಯೊಬ್ಬರಿಗೂ ದಿನದಲ್ಲಿ ಇರುವುದು 24 ಗಂಟೆಗಳೇ. ಹೀಗಿರುವಾಗ ಸಮಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದರೆ ಆ ಸಮಯದಲ್ಲಿ ನಮ್ಮ ಗಮನವನ್ನು ಎಲ್ಲಿ ಕೇಂದ್ರೀಕರಿಸುತ್ತೇವೆ ಎಂಬುದನ್ನು ನಿಯಂತ್ರಿಸಬಹುದು.
ಕೆಲಸ ಮಾಡುವಾಗ ಪದೇಪದೆ ಮೊಬೈಲ್ ನೋಡುವುದು, ಅನಗತ್ಯ ಸಂದೇಶಗಳಿಗೆ ಉತ್ತರಿಸುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಸಮಯ ಕಳೆಯುವುದು ನಮ್ಮ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಒಂದು ಸಮಯದಲ್ಲಿ ಒಂದು ಮುಖ್ಯ ಕೆಲಸದ ಮೇಲೆ ಗಮನ ಹರಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ಎಲ್ಲದಕ್ಕೂ 'ಹೌದು' ಎನ್ನುವ ಅಭ್ಯಾಸ ಬಿಡಿ
ಮಾನಸಿಕ ಆಯಾಸ ಮತ್ತು ಕೆಲಸದ ಒತ್ತಡದಿಂದ ದೂರವಿರಲು ವೈಯಕ್ತಿಕ ಗಡಿಗಳನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಕೇಳಿದಾಗಲೆಲ್ಲ ಒಪ್ಪಿಕೊಳ್ಳುವುದು, ಇಷ್ಟವಿಲ್ಲದ ಕೆಲಸಗಳನ್ನೂ ಮಾಡುವುದು, ವಿಶ್ರಾಂತಿಯನ್ನು ತ್ಯಜಿಸುವುದು ದೀರ್ಘಕಾಲದಲ್ಲಿ ಮಾನಸಿಕ ಆರೋಗ್ಯದ (mental health) ಮೇಲೆ ಪರಿಣಾಮ ಬೀರಬಹುದು.
ನಿಮಗೆ ಮುಖ್ಯವಾದುದು ಯಾವುದು, ಯಾವ ಕೆಲಸಗಳು ಉತ್ಸಾಹ ನೀಡುತ್ತವೆ, ಯಾವ ಕೆಲಸಗಳು ಆಯಾಸ ಉಂಟುಮಾಡುತ್ತವೆ ಎಂಬುದನ್ನು ಗುರುತಿಸಿಕೊಳ್ಳಿ. ನಿಮ್ಮ ಆದ್ಯತೆಗಳಿಗೆ ವಿರುದ್ಧವಾದ ಕೆಲಸಗಳಿಗೆ ಅಗತ್ಯವಿದ್ದಾಗ 'ಇಲ್ಲ' ಎನ್ನಲು ಕಲಿಯಿರಿ.
ಇತರರು ನಮ್ಮನ್ನು ಇಷ್ಟಪಡುತ್ತಾರೆಯೇ, ಒಪ್ಪಿಕೊಳ್ಳುತ್ತಾರೆಯೇ ಎಂಬ ಭಯದಿಂದ ಎಲ್ಲದಕ್ಕೂ ಒಪ್ಪಿಗೆ ಸೂಚಿಸುವ ಅಗತ್ಯವಿಲ್ಲ. ಸಹಾಯ ಬೇಕಾದಾಗ ಕೇಳುವುದೂ ತಪ್ಪಲ್ಲ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳದಿರುವುದು ಸ್ವಾರ್ಥವಲ್ಲ; ಅದು ಸ್ವಯಂ ಕಾಳಜಿ.
ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಎಂದರೆ 50:50 ಅಲ್ಲ
ಕೆಲಸ ಮತ್ತು ವೈಯಕ್ತಿಕ ಜೀವನಕ್ಕೆ ಸಮಾನ ಸಮಯ ನೀಡಿದಾಗ ಮಾತ್ರ ಸಮತೋಲನ ಸಾಧ್ಯ ಎಂಬ ಕಲ್ಪನೆ ಸರಿಯಲ್ಲ. ಜೀವನದ ವಿವಿಧ ಹಂತಗಳಲ್ಲಿ ಆದ್ಯತೆಗಳು ಬದಲಾಗುತ್ತವೆ.
ಹೊಸ ಉದ್ಯೋಗಕ್ಕೆ ಸೇರಿದಾಗ ಕೆಲಸಕ್ಕೆ ಹೆಚ್ಚಿನ ಸಮಯ ನೀಡಬೇಕಾಗಬಹುದು. ಮಗುವಿನ ಆರೈಕೆಯ ಹೊಣೆಗಾರಿಕೆ ಹೆಚ್ಚಾದಾಗ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡಬೇಕಾಗಬಹುದು. ಹೀಗಾಗಿ ಸಮತೋಲನ ಎನ್ನುವುದು ಪ್ರತಿದಿನವೂ ಶೇ.50ರಷ್ಟು ಕೆಲಸ ಮತ್ತು ಶೇ.50ರಷ್ಟು ವೈಯಕ್ತಿಕ ಜೀವನ ಎಂಬ ಲೆಕ್ಕಾಚಾರವಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸಮಯ ಮತ್ತು ಶ್ರಮವನ್ನು ಹಂಚಿಕೊಳ್ಳುವುದೇ ನಿಜವಾದ ಸಮತೋಲನ.
ಮಾನಸಿಕ ನೆಮ್ಮದಿಗಾಗಿ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
1. ಹವ್ಯಾಸಗಳಿಗೆ ಸಮಯ ನೀಡಿ: ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು ಅಥವಾ travel ಮಾಡುವುದು ಹೀಗೆ ನಿಮಗೆ ಸಂತೋಷ ನೀಡುವ ಚಟುವಟಿಕೆಗಳಿಗೆ ಸಮಯ ಮೀಸಲಿಡಿ. ಇವು ದೈನಂದಿನ ಒತ್ತಡದಿಂದ ಮನಸ್ಸಿಗೆ ವಿರಾಮ ನೀಡುತ್ತವೆ.
2. ವ್ಯಾಯಾಮ ಮರೆಯಬೇಡಿ: ನಿಯಮಿತ ದೈಹಿಕ ಚಟುವಟಿಕೆ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ನೆಮ್ಮದಿಗೂ ಮುಖ್ಯ. ನಡಿಗೆ, ಯೋಗ, ಈಜು ಅಥವಾ ಸರಳ ವ್ಯಾಯಾಮದಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು.
3. ಧ್ಯಾನ ಮತ್ತು ಮನಸ್ಸಿನ ಜಾಗೃತಿಗೆ ಆದ್ಯತೆ ನೀಡಿ: ಪ್ರತಿದಿನ ಕೆಲವು ನಿಮಿಷ ಧ್ಯಾನ ಅಥವಾ ಉಸಿರಾಟದ ಅಭ್ಯಾಸ ಮಾಡಿ. ಇದು ಮನಸ್ಸನ್ನು ಶಾಂತವಾಗಿರಿಸಲು ಮತ್ತು ಗಮನ ಕೇಂದ್ರೀಕರಿಸಲು ನೆರವಾಗಬಹುದು.
4. ಅಭ್ಯಾಸಗಳನ್ನು ನಿಮ್ಮ ವ್ಯಕ್ತಿತ್ವದ ಭಾಗವಾಗಿಸಿ: 'ಆಟಂ ಹ್ಯಾಬಿಟ್ಸ್' ಪುಸ್ತಕದ ಲೇಖಕ ಜೇಮ್ಸ್ ಕ್ಲಿಯರ್ ಹೇಳುವಂತೆ, ಕೇವಲ ಗುರಿ ಸಾಧಿಸುವುದರ ಮೇಲೆ ಗಮನ ಹರಿಸುವ ಬದಲು, ನಾವು ಯಾವ ರೀತಿಯ ವ್ಯಕ್ತಿಯಾಗಲು ಬಯಸುತ್ತೇವೆ ಎಂಬುದಕ್ಕೆ ತಕ್ಕ ಅಭ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಆರೋಗ್ಯವಂತ ವ್ಯಕ್ತಿಯಾಗಲು ಬಯಸಿದರೆ ಪ್ರತಿದಿನ ನಡೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಓದುವ ವ್ಯಕ್ತಿಯಾಗಲು ಬಯಸಿದರೆ ದಿನಕ್ಕೆ ಕೆಲವು ಪುಟ ಓದಿ.
5. ನಿಮ್ಮನ್ನು ನೀವೇ ಟೀಕಿಸಿಕೊಳ್ಳಬೇಡಿ: ಪ್ರತಿದಿನವೂ ಎಲ್ಲ ಕೆಲಸಗಳು ಯೋಜನೆಯಂತೆ ನಡೆಯುವುದಿಲ್ಲ. ಕೆಲವು ದಿನಗಳಲ್ಲಿ ಕೆಲಸ ಅಪೂರ್ಣವಾಗಬಹುದು, ಗುರಿ ತಲುಪಲು ಸಾಧ್ಯವಾಗದಿರಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮನ್ನು ನೀವೇ ದೂಷಿಸಿಕೊಳ್ಳುವ ಬದಲು, ಮತ್ತೆ ಪ್ರಯತ್ನಿಸಲು ಅವಕಾಶ ನೀಡಿ.
ಎಲ್ಲವನ್ನೂ ಸಾಧಿಸುವುದಕ್ಕಿಂತ ಮುಖ್ಯವಾದುದು ನೆಮ್ಮದಿ
ನಮ್ಮ ಬದುಕಿನಲ್ಲಿ ಎಲ್ಲವೂ ಮುಖ್ಯವಾಗಿರಲು ಸಾಧ್ಯವಿಲ್ಲ. ಕೆಲವು ಕೆಲಸಗಳು ಅತ್ಯಗತ್ಯವಾಗಿರುತ್ತವೆ. ಕೆಲವು ಕೆಲಸಗಳು ತಡಮಾಡಿ ಮಾಡಬಹುದು. ಇನ್ನು ಕೆಲವು ಕೆಲಸಗಳನ್ನು ಸಂಪೂರ್ಣವಾಗಿ ಕೈಬಿಡಬಹುದು. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದೇ ಮಾನಸಿಕ ನೆಮ್ಮದಿಯ ಮೊದಲ ಹೆಜ್ಜೆ.
ನೆನಪಿಡಿ, ಖಾಲಿಯಾದ ಪಾತ್ರೆಯಿಂದ ಬೇರೆಯವರಿಗೆ ನೀರು ತುಂಬಲು ಸಾಧ್ಯವಿಲ್ಲ. ಅದೇ ರೀತಿ, ನಿಮ್ಮ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡದೆ ಇತರರಿಗಾಗಿ ನಿರಂತರವಾಗಿ ದುಡಿಯಲು ಸಾಧ್ಯವಿಲ್ಲ. ಎಲ್ಲವನ್ನೂ ಮಾಡುವುದೇ ಯಶಸ್ಸಲ್ಲ. ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಸಮಯ ಮತ್ತು ಶಕ್ತಿ ನೀಡುತ್ತಾ ಸಂತೋಷದಿಂದ ಬದುಕುವುದೇ ನಿಜವಾದ ಯಶಸ್ಸು.


Click it and Unblock the Notifications
