ನಾವೇಕೆ ಮಾನಸಿಕ ಆರೋಗ್ಯದತ್ತ ಒತ್ತು ನೀಡಬೇಕು? ಏನಾಗುತ್ತದೆ..?
ನಮ್ಮ ಇವತ್ತಿನ ಕೆಲಸ ಕಾರ್ಯಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಿವೆ. ಹೀಗಾಗಿ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಕೆಡುವಂತಹ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ನಾವು ಆರೋಗ್ಯ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದು ಎಂಬ ಭ್ರಮೆಯಲ್ಲಿದ್ದು, ಮಾನಸಿಕ ಆರೋಗ್ಯವನ್ನು ಮರೆಯುತ್ತಿದ್ದೇವೆ. ಹೀಗಾಗಿಯೇ ಹತ್ತಾರು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದೇವೆ.
ನಮ್ಮ ಆಹಾರ ಪದಾರ್ಥಗಳು ದೈಹಿಕ ಆರೋಗ್ಯವನ್ನು ಕೆಡಿಸಿದರೆ, ನಾವು ಮಾಡುವ ಕೆಲವೊಂದು ಕೆಲಸಗಳು, ಹಣ ಸಂಪಾದಿಸುವುದೇ ಗುರಿಯಾಗಿಸಿಕೊಂಡು ಅದರ ಬೆನ್ನು ಬಿದ್ದು ಇಲ್ಲಸಲ್ಲದ ಒತ್ತಡಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ಮಾನಸಿಕ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಎಲ್ಲೋ ಒಂದು ಕಡೆ ನಾವು ನಮಗೆ ಗೊತ್ತಿಲ್ಲದಂತೆ ದೈಹಿಕ ಮತ್ತು ಮಾನಸಿಕ ಎರಡು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ.

ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಸಾಕು ಎಂಬ ತೃಪ್ತಿಯಿಲ್ಲ. ನೆಮ್ಮದಿಯೂ ಬೇಕಾಗಿಲ್ಲ. ಏನಾದರೊಂದು ಮಾಡಬೇಕು. ಅದರಿಂದ ಒಂದಷ್ಟು ಹಣವನ್ನು ಸಂಪಾದಿಸಬೇಕು. ಎಲ್ಲರಂತೆ ನಾನು ಕೂಡ ಬಂಗಲೆ ಕಟ್ಟಿಸಬೇಕು, ಮನೆ ಮುಂದೆ ವಾಹಗಳನ್ನು ನಿಲ್ಲಿಸಬೇಕು, ನಾನು ಯಾರಿಗೂ ಕಡಿಮೆಯಾಗಿರಬಾರದು ಎಂಬ ತೋರಿಕೆಯ ಸಿರಿತನದ ಚಕ್ರವ್ಯೂಹದಲ್ಲಿ ಸಿಲುಕಿ ತಮಗೆ ಸಹಿಸಿಕೊಳ್ಳಲಾರದ ಭಾರಗಳನ್ನು ಬೆನ್ನಮೇಲೆ ಹೊತ್ತುಕೊಂಡು ಸಂಕಷ್ಟ ಪಡುತ್ತಿದ್ದೇವೆ.
ಮನೋಶಾಸ್ತ್ರಜ್ಞರು ಹೇಳುವ ಸಲಹೆಗಳೇನು?
ನಮ್ಮ ಕೆಲಸಗಳು ಕೂಡ ಹಾಗೆಯೇ ಇದೆ. ಅವು ಸಂಬಳವನ್ನು ಎಷ್ಟು ಕೊಡುತ್ತವೆಯೋ ಹಾಗೆಯೇ ನಮ್ಮ ಕೌಶಲ, ಪ್ರತಿಭೆ, ಶ್ರಮ ಎಲ್ಲವನ್ನೂ ಅಲ್ಲಿಗೆ ಧಾರೆ ಎರೆಯಿಸಿಕೊಳ್ಳುತ್ತಿದೆ. ಹೀಗಾಗಿ ಸಂಸಾರ, ಸಂಬಂಧ ಎಲ್ಲವನ್ನು ಬದಿಗೊತ್ತಿ ಕೆಲಸಮಾಡಬೇಕಾಗಿದೆ. ಇದೊಂದು ರೀತಿಯಲ್ಲಿ ಪ್ರತಿಕ್ಷಣದ ಹೋರಾಟವಾಗಿ ಮಾರ್ಪಾಡುಗೊಳ್ಳುತ್ತಿದೆ. ಜತೆಗೆ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡು ಕಮಿಟ್ ಮೆಂಟ್ ಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಎಲ್ಲವನ್ನು ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮನೋಶಾಸ್ತ್ರಜ್ಞರು ಹೇಳುವಂತೆ ಒಬ್ಬ ಮನುಷ್ಯನಿಗೆ ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲವಂತೆ. ಮೆದುಳಿನಲ್ಲಿ ಶೇಖರಣೆಯಾಗುವ ಅಸಂಖ್ಯ ವಿಷಯಗಳನ್ನು ಮೆದುಳು ಹೊರ ಹಾಕಲು ಸದಾ ಯತ್ನಿಸುತ್ತದೆ. ಮರೆವು ಎನ್ನುವುದು ಒಂದು ರೀತಿಯ ಮೆದುಳಿನ ಡಿಫೆನ್ಸಿವ್ ಮೆಕಾನಿಸಮ್‌ನಂತೆ. ಇಲ್ಲಿ ಮರೆವು ಚಿಕ್ಕ ಚಿಕ್ಕ ವಿಷಯಗಳಿಗಾಗಿಯೇ ಆಗುತ್ತಿದ್ದರೂ ಅದು ತರುವ ಆವೇಶ, ಉದ್ರೇಕ, ಭಯ ನಮ್ಮ ಮೇಲೆ ಪರಿಣಾಮ ಬೀರುತ್ತದೆ.
ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಹೊಟ್ಟೆ ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನೂರೆಂಟು ವ್ಯವಹಾರಗಳಿಂದ ಯೋಚನೆಗಳೇ ಜಾಸ್ತಿಯಾಗಿ ನಿದ್ದೆ ಕಡಿಮೆಯಾಗುತ್ತದೆ. ಇದರಿಂದ ಕ್ರಿಯಾಶೀಲತೆ ಸತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಸುಸ್ತು ಕಾಡುತ್ತದೆ.
ಹಾಗಾದರೆ ಒತ್ತಡದ ಬದುಕಿನಲ್ಲಿ ನಾವು ಮಾಡಿಕೊಂಡಿರುವ ಯಡವಟ್ಟುಗಳಿಗೆ ಪರಿಹಾರ ಇಲ್ಲವೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ. ಇದಕ್ಕೆ ಒಂದಷ್ಟು ಸಲಹೆಗಳು ಇಲ್ಲದಿಲ್ಲ. ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿರುವುದರಿಂದ ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು.
ಹೇಳಿ ಹಗುರವಾಗುವ ಮುನ್ನ ಎಚ್ಚರವಿರಲಿ
ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ನಮ್ಮಲ್ಲೇ ಸಿಗುವ ಸಾಧ್ಯತೆಯಿರುತ್ತದೆ.
ಕೆಲವು ಸಮಸ್ಯೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಆದರೆ ಆಗಲೂ ಎಚ್ಚರವಾಗಿರಬೇಕು. ತೀರಾ ವೈಯಕ್ತಿಕ ವಿಚಾರವಾದರೆ ಕೇಳುವ ವ್ಯಕ್ತಿ ನಂಬಿಕಸ್ತನಾಗಿರಬೇಕು ಇಲ್ಲದೆ ಹೋದರೆ ಸಮಸ್ಯೆ ಹೇಳಿ ಮತ್ತಷ್ಟು ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶ ಸೃಷ್ಠಿಯಾಗಬಹುದು. ಚರ್ಚಿಸುವಾಗ, ಅಥವಾ ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಹೇಳಿ ಹಗುರವಾದರೂ ಅದು ಬೇರೆಯದ್ದೇ ಪರಿಣಾಮ ಬೀರಬಹುದು.












Click it and Unblock the Notifications