Bonda soup recipe: ಈ ಚಳಿಗೆ ಬಿಸಿ ಬಿಸಿಯಾದ ಬೋಂಡಾ ಸೂಪ್ ಮಾಡುವುದು ಹೇಗೆ?
ಮಳೆ ಮತ್ತು ಚಳಿ ನಡುವೆ ಬಿಸಿ ಬಿಸಿಯಾದ ತಿಂಡಿ ಯಾರಿಗೆ ಬೇಕು ಅನ್ನಿಸಲ್ಲ ಹೇಳಿ. ಮನೆಯಲ್ಲಿ ಟೇಸ್ಟಿಯಾದ ಬೋಂಡಾ ಸೂಪ್ ಮಾಡಿಕೊಂಡರೆ ಈ ವಾತಾವರಣಕ್ಕೆ ಸಕತ್ ಆಗಿರುತ್ತದೆ. ಸಂಜೆಯ ವೇಳೆ ಬೋಂಡಾ ಸೂಪ್ ಒಳ್ಳೆ ಸ್ನ್ಯಾಕ್ಸ್ ಆಗಲಿದೆ. ಹಾಗಾದರೆ, ಸುಲಭವಾಗಿ ಮತ್ತು ರುಚಿಯಾದ ಈ ತಿಂಡಿ ಮಾಡೋದು ಹೇಗೆ ಎಂಬುದು ಇಲ್ಲಿ ನೋಡಿ.
ಬೋಂಡಾ ಸೂಪ್ ಉದ್ದಿನ ವಡೆಗಳನ್ನು ಗ್ರೇವಿಯೊಂದಿಗೆ ಬಡಿಸಲಾಗುತ್ತದೆ. ಉದ್ದಿನ ಬೋಂಡಾ ಅಥವಾ ಮೈಸೂರು ಬೋಂಡಾವನ್ನು ಉದ್ದಿನ ಬೇಳೆ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ತೆಂಗಿನಕಾಯಿ ಮತ್ತು ಉಪ್ಪನ್ನು ಬಳಸಿ ತಯಾರಿಸಲಾಗುತ್ತದೆ. ಹೆಸರು ಬೇಳೆ, ಸಾಸಿವೆ, ಜೀರಿಗೆ, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಅರಿಶಿನ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಬಳಸಿ ರುಚಿಯಾದ ಸೂಪ್ ತಯಾರಿಸಲಾಗುತ್ತದೆ.

ಬೋಂಡಾ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
1. ಒಂದು ಕಪ್ ಉದ್ದಿನ ಬೇಳೆ
2. ಸ್ವಲ್ಪ ಇಂಗು
3. ಸ್ವಲ್ಪ ಕತ್ತರಿಸಿದ ಕರಿಬೇವಿನ ಎಲೆಗಳು
4. ಸ್ವಲ್ಪ ಕತ್ತರಿಸಿದ ಕೊತ್ತಂಬರಿ
5. ಒಂದು ಟೀಸ್ಪೂನ್ ಕತ್ತರಿಸಿದ ಶುಂಠಿ
6. 2 ಸ್ಪೋನ್ ಕತ್ತರಿಸಿದ ಹಸಿ ತೆಂಗಿನಕಾಯಿ ಪೀಸ್
7. 1 ಹಸಿ ಮೆಣಸಿನಕಾಯಿ
8. ರುಚಿಗೆ ತಕ್ಕಂತೆ ಉಪ್ಪು
9. ಬೋಂಡಾ ಕರಿಯಲು ಎಣ್ಣೆ
ಸೂಪ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
1. 3/4 ಕಪ್ ಹೆಸರುಬೇಳೆ
2. 1 ಟೀಸ್ಪೂನ್ ಸಾಸಿವೆ
3. 1 ಟೀಸ್ಪೂನ್ ಜೀರಿಗೆ
4. ಒಗ್ಗರಣೆಗೆ ಕರಿಬೇವಿನ ಎಲೆಗಳು
5. 1 ಟೀಸ್ಪೂನ್ ಶುಂಠಿ
6. ಎರಡು ಹಸಿ ಮೆಣಸಿನಕಾಯಿಗಳು
7. ಅರಿಶಿನ ಪುಡಿ
8. ಇಂಗು
9. ಒಂದು ಟೊಮೆಟೊ
10. ಕೊತ್ತಂಬರಿ ಸೊಪ್ಪು
11. ಸ್ವಲ್ಪ ನಿಂಬೆ ರಸ
12. ಒಗ್ಗರಣೆ ಹಾಕಲು ಒಂದು ಚಮಚ ಎಣ್ಣೆ
13. ರುಚಿಗೆ ಉಪ್ಪು
ಬೋಂಡಾ ಸೂಪ್ ತಯಾರಿಸುವ ವಿಧಾನ
ಉದ್ದಿನಬೇಳೆಯನ್ನು ತೊಳೆದು 2-3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಉದ್ದಿನಬೇಳೆ ಹಿಟ್ಟನ್ನು ಪಾತ್ರೆಗೆ ಹಾಕಿಕೊಳ್ಳಿ. 2-3 ನಿಮಿಷಗಳ ಕಾಲ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ. ಮಿಶ್ರಣಕ್ಕೆ ಉಪ್ಪು ಮತ್ತು ಇಂಗು ಸೇರಿಸಿ. ಇದರ ಜೊತೆಗೆ ಸಣ್ಣದಾಗಿ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಶುಂಠಿ, ತೆಂಗಿನಕಾಯಿ ತುಂಡುಗಳು ಮತ್ತು ಕೊತ್ತಂಬರಿ ಸೊಪ್ಪುನ್ನು ಸಹ ಸೇರಿಸಿ ಕಲಸಿಕೊಳ್ಳಿ.

ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟನ್ನು ಉಂಡೆ ಕಟ್ಟಿ ಮಧ್ಯಮ ಉರಿಯಲ್ಲಿ ಬಿಸಿ ಎಣ್ಣೆಯಲ್ಲಿ ಬಿಡಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ ಹೊರತೆಗೆಯಿರಿ. ಬಳಿಕ ಸೂಪ್ ಮಾಡಲು ತಯಾರಾಗಿ. ಹೆಸರು ಬೇಳೆಯನ್ನು ತೊಳೆದು ಒಂದು ಚಿಟಿಕೆ ಅರಿಶಿನ, ಒಂದೆರಡು ಹನಿ ಎಣ್ಣೆ ಹಾಕಿ ಮೆತ್ತಗಾಗುವವರೆಗೂ ಬೇಯಿಸಿ. ಬೆಂದ ನಂತರ ಚೆನ್ನಾಗಿ ಮ್ಯಾಶ್ ಮಾಡಿ ಪಕ್ಕಕ್ಕೆ ಇಡಿ.
ಬಾಣಲೆಯಲ್ಲಿ ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿಕೊಳ್ಳಿ. ಹಸಿ ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಜೊತೆಗೆ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. ನಂತರ ಕತ್ತರಿಸಿದ ಟೊಮೆಟೊ ಸೇರಿಸಿ ಮತ್ತು ಟೊಮ್ಯಾಟೊ ಮೃದುವಾಗುವವರೆಗೆ ಫ್ರೈ ಮಾಡಿ.
ಈ ಒಗ್ಗರಣೆಗೆ ಬೇಯಿಸಿದ ಬೇಳೆ ಮತ್ತು ಅಗತ್ಯವಿರುವ ನೀರು, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಇದು ಕುದಿಯಲು ಆರಂಭಿಸಿದ ಮೇಲೆ ಸ್ಟವ್ ಆಫ್ ಮಾಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಹಾಕಿ. ಒಂದು ಬಟ್ಟಲಿನಲ್ಲಿ, ಬಿಸಿ ಬಿಸಿ ಸೂಪ್ ಹಾಕಿ ಅದರಲ್ಲಿ ಬೋಂಡಾಗಳನ್ನು ಹಾಕಿ ಬಡಿಸಿ.
(ಮಾಹಿತಿ: vegrecipesofkarnataka)












Click it and Unblock the Notifications