Dress Sense: ಕಚೇರಿಗಳಲ್ಲಿ ನಿಮ್ಮ ಉಡುಪು ಹೇಗಿರಬೇಕು...?
ಈಗಿನ ಕಾಲದಲ್ಲಿ ಪುರುಷರಂತೆ ಮಹಿಳೆಯರು ಕೆಲಸಕ್ಕೆ ಹೋಗುತ್ತಾರೆ. ಶಿಕ್ಷಣ ಮುಗಿದ ಕೂಡಲೆ ಬಹುತೇಕರು ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ಶಿಕ್ಷಣ ಪಡೆಯುವಾಗ ಇರುವ ನಿಯಮಗಳಂತೆ ಕೆಲಸದಲ್ಲಿಯೂ ಕೆಲವು ನಿಯಮಗಳು ಇರುತ್ತವೆ. ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರಗಳನ್ನು ಧರಿಸುವ ಮೂಲಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಂತೆ ಕೆಲಸದಲ್ಲಿಯೂ ಕೆಲ ಡ್ರೆಸ್ ಕೋಡ್ ಇರುತ್ತವೆ.
ಆದರೆ ಇದನ್ನು ಕೆಲವು ಕಂಪನಿಗಳು ಅನುಸರಿಸುತ್ತವೆ. ಇನ್ನೂ ಕೆಲ ಕಂಪನಿಗಳು ಉಡುಪಿನ ವಿಚಾರ ಉದ್ಯೋಗಿಗಳ ಮೇಲೆಯೇ ಬಿಟ್ಟುಬಿಡುತ್ತವೆ. ಹಾಗಂತ ನಾವು ಶಿಕ್ಷಣ ಪಡೆಯುವಾಗ ಇರುವಂತಾಗಲಿ ಅಥವಾ ಪಾರ್ಟಿಗೆ ಹೋಗುವಾಗ ಧರಿಸುವ ಉಡುಪಾಗಲಿ ಅಥವಾ ಬೆಳಿಗಿನ ವಾಂಕಿಂಗ್ ಡ್ರೆಸ್ ಆಗಲಿ ಕಚೇರಿಗಳಿಗೆ ಹಾಕಿಕೊಂಡು ಹೋಗಲು ಆಗುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಸಭ್ಯತೆಯಿಂದ ವರ್ತಸುವಂತೆ ನಿಮ್ಮ ಉಡುಪಿನ ವಿಚಾರದಲ್ಲೂ ನೀವು ಜಾಗರೂಕರಾಗಿರಬೇಕು.

ನಿಮ್ಮ ಉಡುಪು ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುವಂತಿರಬೇಕು. ಇತರರು ನಿಮ್ಮೊಂದಿಗೆ ಬೆರೆಯಲು ಅಥವಾ ಮಾತನಾಡಲು ಮುಜುಗರಕ್ಕೊಳಗಾಗದಂತಿರಬೇಕು. ಹಾಗಂತ ಇದಕ್ಕೆ ಹೆಚ್ಚು ಹಣ ಖರ್ಚು ಮಾಡಿ ದುಬಾರಿ ಉಡುಪು ಧರಿಸಬೇಕೆಂದಿಲ್ಲ. ನೀವು ಹಾಕಿಕೊಳ್ಳು ಉಡುಪಿನಲ್ಲಿಯೇ ಆ ಸಭ್ಯತೆ ಇದ್ದರೆ ಸಾಕು. ಹಾಗಾದರೆ ಆಫೀಸ್‌ಗಳಲ್ಲಿ ನಿಮ್ಮ ಉಡುಪು ಹೇಗಿರಬೇಕು ಅನ್ನೋದನ್ನು ತಿಳಿಯೋಣ.
-ಆಫೀಸ್‌ಗಳಲ್ಲಿ ನಿಮ್ಮ ಡ್ರೆಸ್ ಸೆನ್ಸ್ ಹೇಗಿರಬೇಕು...?
* ಮುಖ್ಯವಾಗಿ ಕಚೇರಿಗಳಲ್ಲಿ ಮಹಿಳೆಯರು ಖುರ್ತಾ, ಚೂಡಿ, ಫಾರ್ಮಲ್ಸ್‌ಗಳನ್ನು ಹಾಕಬಹುದು. ಇದು ತುಂಬಾ ಸಭ್ಯವಾಗಿ ಕಾಣಿಸುತ್ತದೆ.
* ಇನ್ನೂ ಪುರುಷರು ಫಾರ್ಮಲ್ಸ್ ಧರಿಸುವುದು ಕಚೇರಿಯಲ್ಲಿ ಒಪ್ಪುವಂತಹ ಏಕೈಕ ಉಡುಪಾಗಿದೆ. ಅಥವಾ ಜೀನ್ಸ್ ಮತ್ತು ಶರ್ಟ್ ಕೂಡ ಧರಿಸಬಹುದು.
* ಇದಲ್ಲದೇ ಕೆಲ ವಿಶೇಷ ದಿನಗಳಲ್ಲಿ ಮಹಿಳೆಯರಾದರೆ ಸೀರೆ, ಪುರುಷರಾದರೆ ಪಂಚೆಯನ್ನು ಧರಿಸುವುದು ತುಂಬಾ ಚೆನ್ನಾಗಿ ಒಪ್ಪುತ್ತದೆ.
* ನೀವಾಕಿಕೊಳ್ಳುವ ಬಟ್ಟೆಯನ್ನು ನಿತ್ಯ ಇಸ್ತ್ರಿ ಮಾಡಿಯೇ ಹಾಕಿಕೊಳ್ಳಿ. ಇದು ನಿಮ್ಮ ಉಡುಪಿನ ಅಂದವನ್ನು ಹೆಚ್ಚಿಸುತ್ತದೆ.

-ಆಫೀಸ್‌ಗಳಲ್ಲಿ ಯಾವ ಉಡುಪು ಧರಿಸಬಾರದು?
*ಸಾಮಾನ್ಯವಾಗಿ ಉದ್ಯೋಗ ಸ್ಥಳದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತುಂಬಾ ಆಧುನಿಕ ಶೈಲಿಯ ಉಡುಪನ್ನು ಧರಿಸುವವರು ತುಂಬಾ ಸರಳವಾಗಿ ಉಡುಪುಗಳನ್ನು ಧರಿಸುವವರು ಕಾಣಸಿಗುತ್ತಾರೆ. ಆದರೆ ಎಲ್ಲರೂ ಅವರವರ ಮನಸ್ಸಿಗೆ ಬಂದಂತೆ ಉಡುಪು ಧರಿಸಲು ಸಾಧ್ಯವಾಗುವುದಿಲ್ಲ. ಅದು ನೋಡುಗರಿಗೆ ಉತ್ತಮವಾಗಿಯೂ ಕಾಣಿಸುವುದಿಲ್ಲ. ಕೆಲ ಕಂಪನಿಗಳಲ್ಲಿ ಇಂತಹ ಸಡಿಲತೆ ಇರುತ್ತದೆ. ಅಂತ ಸ್ಥಳದಲ್ಲಿ ನೀವು ನಿಮಗೆ ಬೇಕಾದಂತೆ ಉಡುಪು ಧರಿಸುವುದಕ್ಕಿಂತ ನಿಮ್ಮೊಂದಿಗಿನ ಸಹೋದ್ಯೋಗಿಗಳಿಗೆ ಮುಜುಗರ ಹುಟ್ಟಿಸುವಂತಹ ಉಡುಪನ್ನು ಕಡೆಗಣಿಸುವುದು ಉತ್ತಮ.
*ವಿಶೇಷ ದಿನಗಳನ್ನು ಹೊರತು ಪಡಿಸಿ ಉದ್ಯೋಗ ಸ್ಥಳದಲ್ಲಿ ಸಭ್ಯವಾದ ಉಡುಪನ್ನು ಧರಿಸುವುದನ್ನು ಅನುಕರಿಸುವುದು ಒಳ್ಳೆಯದು. ಉದಾಹಾರಣೆ- ತುಂಬಾ ಚಿಕ್ಕದಾದ ಸ್ಕರ್ಟ್ ಧರಿಸುವುದು, ಮೈ ಕಾಣುವಂತಹ ಉಡುಪುಗಳನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ. ಹಬ್ಬಗಳಲ್ಲಿ ಧರಿಸುವ ಹೊಳೆಯುವ ಬಟ್ಟೆಗಳು ಕಚೇರಿಗಳಲ್ಲಿ ಸೂಕ್ತವಾಗಿರುವುದಿಲ್ಲ.

*ತೀರ ಸರಳವಾದ ಅಥವಾ ಪಾರ್ಟಿ ಉಡುಪನ್ನು ಧರಿಸುವುದು ಕಚೇರಿಗಳಲ್ಲಿ ನೋಡಲು ಉತ್ತಮವೆನಿಸುವುದಿಲ್ಲ. ಸಭ್ಯವಾಗಿ ಉಡುಪು ಧರಿಸುವುದು ಉದ್ಯೋಗ ಸ್ಥಳದಲ್ಲಿ ನಿಮ್ಮೊಂದಿಗೆ ಎಲ್ಲಾ ರೀತಿಯ ಜನರು ಬೆರೆಯಲು ಸಹಾಯ ಮಾಡುತ್ತದೆ.
*ಇನ್ನೂ ಪುರುಷರಾದರೆ ಉದ್ಯೋಗ ಸ್ಥಳದಲ್ಲಿ ಟ್ರ್ಯಾಕ್ ಪ್ಯಾಂಟ್, ಮಳೆಗಾದಲ್ಲಿ ಧರಿಸುವ ಉಡುಪು ಅಥವಾ ಫ್ಯಾನ್ಸಿ ಡ್ರೆಸ್‌ಗಳನ್ನು ಆಫೀಸ್‌ಗೆ ಹಾಕಿಕೊಂಡು ಹೋಗುವುದನ್ನು ತಪ್ಪಿಸಬೇಕು. ಜೊತೆಗೆ ಉಡುಪಿನ ಬಣ್ಣವೂ ತುಂಬಾ ತಿಳಿಯಾಗಿ ಎದ್ದು ಕಾಣುವಂತೆ ಇರಬಾರದು.
* ಪದೇ ಪದೇ ಒಂದೇ ರೀತಿಯ ಉಡುಪನ್ನು ಧರಿಸಬೇಡಿ. ನೀವಾಕುವ ಉಡುಪು ಒಂದು ವಾರದ ಬಳಿಕವಾದರೂ ಮತ್ತೆ ಹಾಕುವಂತಿದ್ದರೆ ಒಳ್ಳೆಯದು. ಎರಡು ದಿನಕ್ಕೊಮ್ಮೆ ಒಂದೇ ರೀತಿಯ ಉಡುಪು ಧರಿಸಬೇಡಿ.
ಹೀಗೆ ನೀವು ನಿಮ್ಮ ಸ್ಥಳದಲ್ಲಿ ಉಡುಪಿನ ಬಗ್ಗೆ ಕಾಳಜಿ ವಹಿಸಬೇಕು. ಇದು ನಿಮ್ಮ ಮೇಲಿನ ಗೌರವವನ್ನೂ ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಬೆರೆಯಲು, ಸ್ವತಂತ್ರ್ಯವಾಗಿ ಮಾತನಾಡಲು ಅನುಕೂಲಕರವಾಗಿರುತ್ತದೆ.












Click it and Unblock the Notifications