Body Clock: ಅಲಾರಾಂ ಬಡಿದುಕೊಳ್ಳೋ ಒಂದು ನಿಮಿಷ ಮೊದಲೇ ಎಚ್ಚರವಾಗುತ್ತಾ? ಇದರ ಹಿಂದಿದೆ ದೇಹದ ಅಚ್ಚರಿಯ ರಹಸ್ಯ!

ಮಾನವ ದೇಹ ಮಾಡುವ ಕೆಲವು ವಿಚಿತ್ರವಾದ, ಅಚ್ಚರಿ ಮೂಡಿಸುವ ಕೆಲಸಗಳಲ್ಲಿ ಇದು ಕೂಡ ಒಂದು. ಬಹುತೇಕ ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವ ಪಡೆದಿರುತ್ತಾರೆ. ಬೆಳಗ್ಗೆ ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಬೇಕಿರುತ್ತದೆ. ಹಾಗಾಗಿ ಅಲಾರಾಂ ಅನ್ನು ಆರು ಗಂಟೆಗೆ ಸರಿಯಾಗಿ ಮೊಳಗುವಂತೆ ಸೆಟ್‌ ಮಾಡಿರ್ತೀರಿ. ಆದರೆ ಐದೂ ಐವತ್ತೊಂಬತ್ತಕ್ಕೇ ನಿಮಗೆ ತಾನಾಗಿಯೇ ಎಚ್ಚೃವಾಗುತ್ತದೆ. ಯಾವುದೇ ಸದ್ದು ಕೇಳಿರುವುದಿಲ್ಲ. ಅಲಾರಾಂನ ಕಂಪನವೂ ಆಗಿರುವುದಿಲ್ಲ.

ಅರೆನಿದ್ರೆಯಲ್ಲೇ ಕಣ್ಣು ತೆರೆದು ಗಡಿಯಾರದತ್ತ ನೋಡುತ್ತೀರಿ. ಆಶ್ಚರ್ಯವೆಂದರೆ, ನೀವು ಅಲಾರಾಂ ಹೊಂದಿಸಿದ ನಿಖರ ಸಮಯಕ್ಕೆ ಗಡಿಯಾರ ಬಂದು ನಿಲ್ಲುತ್ತದೆ. ರಾತ್ರಿಯಿಡೀ ನಿಮ್ಮ ದೇಹವೇ ಸಮಯವನ್ನು ಲೆಕ್ಕ ಹಾಕುತ್ತಿತ್ತೇನೋ ಎಂಬ ಭಾವನೆ ಮೂಡುತ್ತದೆ. ಇದು ಆರನೇ ಇಂದ್ರಿಯದ ಕೆಲಸದಂತೆ ಅನಿಸಬಹುದು. ಆದರೆ ಇದರ ಹಿಂದಿರುವ ಸಂಗತಿ ಇನ್ನೂ ಅಚ್ಚರಿಯದ್ದು. ನಿಮ್ಮ ದೇಹದೊಳಗೆ ಒಂದು ಜೈವಿಕ ಗಡಿಯಾರವಿದೆ. ಅದು ನಿಮ್ಮ ಹಾಸಿಗೆಯ ಪಕ್ಕದಲ್ಲಿರುವ ಗಡಿಯಾರಕ್ಕಿಂತಲೂ ಅಚ್ಚುಕಟ್ಟಾಗಿ ಕೆಲಸ ಮಾಡಬಲ್ಲದು!

Body Clock Why Do You Wake Up a Minute Before Your Alarm The Science Behind It

ಅಲಾರಾಂ ಮೊಳಗುವ ಮೊದಲೇ ನಮಗೆ ಎಚ್ಚರವಾಗುವುದು ಏಕೆ?

ನಮ್ಮ ಮೆದುಳಿನ ಆಳದಲ್ಲಿ ಅಕ್ಕಿಯ ಕಾಳಿನಷ್ಟು ಸಣ್ಣದಾದ ಜೀವಕೋಶಗಳ ಒಂದು ಗುಂಪಿದೆ. ಇದನ್ನು ಸುಪ್ರಾಕಿಯಾಸ್ಮ್ಯಾಟಿಕ್ ನ್ಯೂಕ್ಲಿಯಸ್ (Suprachiasmatic Nucleus- SCN) ಎಂದು ಕರೆಯುತ್ತಾರೆ. ಇದು ನಮ್ಮ ದೇಹದ ಮುಖ್ಯ ಜೈವಿಕ ಗಡಿಯಾರದಂತೆ ಕಾರ್ಯನಿರ್ವಹಿಸುತ್ತದೆ.

ಈ ಗಡಿಯಾರವು, ವಿಜ್ಞಾನಿಗಳು ಸಿರ್ಕಾಡಿಯನ್ ರಿದಮ್ (Circadian Rhythm) ಎಂದು ಕರೆಯುವ ದೇಹದ ಆಂತರಿಕ 24 ಗಂಟೆಗಳ ಚಕ್ರವನ್ನು ನಿಯಂತ್ರಿಸುತ್ತದೆ. ಯಾವಾಗ ನಿದ್ರೆ ಬರುತ್ತದೆ, ಯಾವಾಗ ಎಚ್ಚರವಾಗಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ಈ ಚಕ್ರ ಪ್ರಮುಖ ಪಾತ್ರ ವಹಿಸುತ್ತದೆ.

ನೀವು ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಒಂದೇ ಸಮಯಕ್ಕೆ ಎದ್ದೇಳುತ್ತಿದ್ದರೆ, ನಿಮ್ಮ ದೇಹ ಕ್ರಮೇಣ ಆ ವೇಳಾಪಟ್ಟಿಗೆ ಹೊಂದಿಕೊಳ್ಳುತ್ತದೆ. ಬೆಳಗ್ಗೆ ಸರಿಸುಮಾರು ಯಾವ ಸಮಯಕ್ಕೆ ಎಚ್ಚರವಾಗಬೇಕು ಎಂಬುದನ್ನು ನಿಮ್ಮ ದೇಹದ ಜೈವಿಕ ಗಡಿಯಾರ ಕಲಿತುಕೊಳ್ಳುತ್ತದೆ.

ಹೀಗಾಗಿ ಅಲಾರಾಂನ ಸದ್ದಿಗೆ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವ ಬದಲು, ನೀವು ಏಳಬೇಕಾದ ಸಮಯಕ್ಕೆ ಸ್ವಲ್ಪ ಮುಂಚೆಯೇ ದೇಹವು ಎಚ್ಚರಗೊಳ್ಳಲು ಸಿದ್ಧವಾಗತೊಡಗುತ್ತದೆ. ನಿದ್ರೆಯಿಂದ ನಿಧಾನವಾಗಿ ಎಚ್ಚರದ ಸ್ಥಿತಿಗೆ ಬರುವಂತೆ ದೇಹವನ್ನು ಸಿದ್ಧಪಡಿಸುತ್ತದೆ. ಇದರಿಂದ ಅಲಾರಾಂ ಮೊಳಗುವ ಹೊತ್ತಿಗೆ ನೀವು ಸಹಜವಾಗಿಯೇ ಎಚ್ಚರಗೊಳ್ಳಬಹುದು.

ದೇಹವೇ ಹಾರ್ಮೋನ್‌ಗಳ ಮೂಲಕ ನಮ್ಮನ್ನು ಎಬ್ಬಿಸುತ್ತದೆಯೇ?

ದೇಹದೊಳಗಿನ ಜೈವಿಕ ಗಡಿಯಾರವೂ ಅಲಾರಾಂನಂತೆ ಸದ್ದು ಮಾಡುವುದಿಲ್ಲ. ಅದು ಹಾರ್ಮೋನ್‌ಗಳ ಮೂಲಕ ದೇಹವನ್ನು ಎಚ್ಚರಗೊಳ್ಳಲು ಸಿದ್ಧಪಡಿಸುತ್ತದೆ.

ನಿದ್ರೆಯ ಕೊನೆಯ ಕೆಲವು ಗಂಟೆಗಳಲ್ಲಿ ದೇಹದಲ್ಲಿ ಕಾರ್ಟಿಸೋಲ್ (Cortisol) ಎಂಬ ಹಾರ್ಮೋನ್‌ನ ಪ್ರಮಾಣ ಏರತೊಡಗುತ್ತದೆ. ಇದನ್ನು ಸಾಮಾನ್ಯವಾಗಿ ಒತ್ತಡದ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಆದರೆ ಬೆಳಗಿನ ಹೊತ್ತಿನಲ್ಲಿ ಇದು ಎಚ್ಚರಿಕೆ, ಚಟುವಟಿಕೆ ಮತ್ತು ದಿನದ ಕೆಲಸಗಳಿಗೆ ದೇಹವನ್ನು ಸಿದ್ಧಪಡಿಸುವಲ್ಲಿಯೂ ಪಾತ್ರ ವಹಿಸುತ್ತದೆ.

ಬೆಳಗ್ಗೆ ಎಚ್ಚರಗೊಳ್ಳುವ ಸಮಯದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗುವ ಈ ಪ್ರಕ್ರಿಯೆಗೆ ಕಾರ್ಟಿಸೋಲ್ ಅವೇಕನಿಂಗ್ ರೆಸ್ಪಾನ್ಸ್ (Cortisol Awakening Response) ಎಂಬ ಹೆಸರಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ದೇಹವು ನಿರೀಕ್ಷಿತ ಎಚ್ಚರದ ಸಮಯಕ್ಕೆ ಅನುಗುಣವಾಗಿ ಈ ಹಾರ್ಮೋನ್‌ನ ಏರಿಕೆಯನ್ನು ನಿಯಂತ್ರಿಸಬಲ್ಲದು.

ಈ ವಿಷಯಕ್ಕೆ ಸಂಬಂಧಿಸಿದ ಪ್ರಸಿದ್ಧ ಪ್ರಯೋಗವೊಂದರಲ್ಲಿ ಸಂಶೋಧಕರು ನಿದ್ರಿಸುತ್ತಿದ್ದವರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರು. ಒಂದು ಗುಂಪಿನವರಿಗೆ ಬೆಳಗ್ಗೆ 6 ಗಂಟೆಗೆ ಎಬ್ಬಿಸುವುದಾಗಿ ತಿಳಿಸಲಾಗಿತ್ತು. ಮತ್ತೊಂದು ಗುಂಪಿನವರಿಗೆ ತಮ್ಮಷ್ಟಕ್ಕೆ ತಾವು ಎಚ್ಚರಗೊಳ್ಳುವವರೆಗೆ ನಿದ್ರಿಸಲು ಅವಕಾಶ ನೀಡಲಾಗಿತ್ತು.

ಬೆಳಗ್ಗೆ ಬೇಗ ಎದ್ದೇಳಬೇಕೆಂದು ತಿಳಿದಿದ್ದ ಗುಂಪಿನವರಲ್ಲಿ, ನಿಗದಿತ ಸಮಯಕ್ಕಿಂತ ಒಂದು ಗಂಟೆಗೂ ಮುಂಚೆಯೇ ಕಾರ್ಟಿಸೋಲ್ ಪ್ರಮಾಣ ಏರತೊಡಗಿತ್ತು. ನಿದ್ರಿಸುತ್ತಿದ್ದ ಮೆದುಳೇ ತನ್ನದೇ ಆದ ಅಲಾರಾಂ ಹೊಂದಿಸಿಕೊಂಡಂತೆ ಇದು ಕಂಡುಬಂದಿತ್ತು. ಈ ಸಂಶೋಧನೆಯನ್ನು ಬಾರ್ನ್ ಮತ್ತು ಅವರ ಸಹೋದ್ಯೋಗಿಗಳು ನೇಚರ್ (Nature) ಪತ್ರಿಕೆಯಲ್ಲಿ ಪ್ರಕಟಿಸಿದ್ದರು.

ಅಂದರೆ, ನೀವು ಎಚ್ಚರಗೊಳ್ಳುವ ಮೊದಲೇ ನಿಮ್ಮ ದೇಹವು ಬೆಳಗ್ಗಿನ ದಿನಚರಿಗೆ ಸಿದ್ಧತೆ ಆರಂಭಿಸಬಹುದು.

ದೇಹದ ಪ್ರತಿಯೊಂದು ಜೀವಕೋಶದಲ್ಲೂ ಗಡಿಯಾರವಿದೆಯೇ?

ಈ ಸಂಗತಿ ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸಿದೆ. ನಮ್ಮ ಮೆದುಳಿನಲ್ಲಿರುವ ಮುಖ್ಯ ಜೈವಿಕ ಗಡಿಯಾರವೊಂದೇ ಸಮಯವನ್ನು ನಿಯಂತ್ರಿಸುವುದಿಲ್ಲ. ದೇಹದ ಬಹುತೇಕ ಪ್ರತಿಯೊಂದು ಅಂಗದಲ್ಲಿಯೂ ತನ್ನದೇ ಆದ ಕಾಲಚಕ್ರವನ್ನು ಅನುಸರಿಸುವ ವ್ಯವಸ್ಥೆಗಳಿವೆ.

ಯಕೃತ್ತು, ಸ್ನಾಯುಗಳು ಮತ್ತು ಚರ್ಮ ಸೇರಿದಂತೆ ದೇಹದ ಹಲವು ಅಂಗಾಂಶಗಳ ಜೀವಕೋಶಗಳಲ್ಲಿ ಗಡಿಯಾರ ಜೀನ್‌ಗಳು (Clock Genes) ಎಂದು ಕರೆಯಲಾಗುವ ಜೀನ್‌ಗಳು ಕಾರ್ಯನಿರ್ವಹಿಸುತ್ತವೆ. ಇವು ನಿರ್ದಿಷ್ಟ ಪ್ರೋಟೀನ್‌ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತಾ, ಸುಮಾರು 24 ಗಂಟೆಗಳ ಚಕ್ರದಲ್ಲಿ ಚಟುವಟಿಕೆ ತೋರಿಸುತ್ತವೆ.

ಮೆದುಳಿನ ಮುಖ್ಯ ಜೈವಿಕ ಗಡಿಯಾರವು ಸಂಗೀತ ಕಾರ್ಯಕ್ರಮದ ನಿರ್ವಾಹಕನಂತೆ ಕೆಲಸ ಮಾಡುತ್ತದೆ. ದೇಹದ ವಿವಿಧ ಭಾಗಗಳಲ್ಲಿರುವ ಈ ಸಣ್ಣ ಗಡಿಯಾರಗಳು ಒಂದಕ್ಕೊಂದು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆ ಅದು ಸಹಾಯ ಮಾಡುತ್ತದೆ. ಹೀಗಾಗಿಯೇ ಬೆಳಗ್ಗೆ ಎಚ್ಚರಗೊಳ್ಳುವ ಅನುಭವ ಕೇವಲ ಮೆದುಳಿಗೆ ಸೀಮಿತವಾಗಿಲ್ಲ. ದೇಹದ ಅನೇಕ ಜೈವಿಕ ಪ್ರಕ್ರಿಯೆಗಳೂ ಹಗಲು-ರಾತ್ರಿಯ ಚಕ್ರಕ್ಕೆ ಹೊಂದಿಕೊಂಡಿರುತ್ತವೆ.

ಆದರೆ ಅಲಾರಾಂ ಮೊಳಗುವ ಮೊದಲೇ ಎಚ್ಚರಗೊಳ್ಳುವ ಪ್ರಕ್ರಿಯೆಯಲ್ಲಿ ಈ ಜೈವಿಕ ಗಡಿಯಾರದ ಪಾತ್ರ ಎಷ್ಟು? ಬೆಳಗಿನ ಹೊತ್ತಿನಲ್ಲಿ ಸಹಜವಾಗಿಯೇ ಏರುವ ಕಾರ್ಟಿಸೋಲ್ ಪ್ರಮಾಣದ ಪಾತ್ರ ಎಷ್ಟು? ಈ ಎರಡರ ನಡುವಿನ ನಿಖರ ಸಂಬಂಧವನ್ನು ವಿಜ್ಞಾನಿಗಳು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ವೆಲಾಸ್ಕ್ವೆಜ್ ಸ್ಯಾಂಚೆಜ್ ಮತ್ತು ಡಾಲಿ ಅವರ ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಯು ಬ್ರೇನ್ ಅಂಡ್ ನ್ಯೂರೋಸೈನ್ಸ್ ಅಡ್ವಾನ್ಸಸ್ (Brain and Neuroscience Advances) ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆದರೆ ಒಂದು ಸಂಗತಿಯಂತೂ ಸ್ಪಷ್ಟವಾಗಿದೆ: ನಮ್ಮ ದೇಹವು ಸಮಯಕ್ಕೆ ಹೊಂದಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.

ಮುಖ್ಯವಾದ ದಿನದ ಹಿಂದಿನ ರಾತ್ರಿ ಬೇಗ ಎಚ್ಚರವಾಗುವುದು ಏಕೆ?

ಮರುದಿನ ವಿಮಾನ ಪ್ರಯಾಣವಿರಲಿ, ಪರೀಕ್ಷೆಯಿರಲಿ ಅಥವಾ ಬೆಳಗಿನ ರೈಲು ಹಿಡಿಯಬೇಕಿರಲಿ, ಇಂತಹ ಸಂದರ್ಭಗಳಲ್ಲಿ ಅಲಾರಾಂ ಮೊಳಗುವ ಮೊದಲೇ ಎಚ್ಚರವಾಗುವ ಅನುಭವ ಹೆಚ್ಚಾಗಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣ, ಮುಖ್ಯವಾದ ಅಥವಾ ಒತ್ತಡ ಉಂಟುಮಾಡುವ ದಿನದ ಬಗ್ಗೆ ನಮ್ಮಲ್ಲಿರುವ ನಿರೀಕ್ಷೆ ಮತ್ತು ಆತಂಕವಾಗಿರಬಹುದು.

ಮುಂದಿನ ದಿನದ ಬಗ್ಗೆ ಹೆಚ್ಚು ಯೋಚಿಸುವುದು ದೇಹದ ಒತ್ತಡದ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು. ಇದರಿಂದ ನಿದ್ರೆ (sleep) ಹಗುರವಾಗಬಹುದು ಮತ್ತು ಎಚ್ಚರಗೊಳ್ಳುವ ಸಾಧ್ಯತೆ ಹೆಚ್ಚಾಗಬಹುದು. ಕೆಲವು ಸಂದರ್ಭಗಳಲ್ಲಿ ಕಾರ್ಟಿಸೋಲ್‌ನ ಏರಿಕೆಯೂ ಇದರಲ್ಲಿ ಪಾತ್ರ ವಹಿಸಬಹುದು.

ಹೀಗಾಗಿಯೇ ಮುಖ್ಯವಾದ ಕೆಲಸವಿರುವ ದಿನದಂದು ಮುಂಜಾನೆ ನಾಲ್ಕು ಗಂಟೆಗೇ ಕಣ್ಣು ತೆರೆದುಕೊಳ್ಳಬಹುದು. ಅಲಾರಾಂ ಇನ್ನೂ ಮೊಳಗಿರುವುದಿಲ್ಲ. ಆದರೆ ಯಾವುದನ್ನೂ ತಪ್ಪಿಸಿಕೊಳ್ಳಬಾರದು ಎಂಬ ಎಚ್ಚರಿಕೆಯಲ್ಲಿರುವ ದೇಹ, ನಿದ್ರೆಯಿಂದ ಬೇಗ ಹೊರಬರಬಹುದು.

ಆದರೆ ಪ್ರತಿಯೊಬ್ಬರಲ್ಲೂ ಇದೇ ರೀತಿ ಆಗುತ್ತದೆ ಎಂದಲ್ಲ. ಆತಂಕ, ನಿದ್ರೆಯ ಗುಣಮಟ್ಟ, ಮಲಗುವ ಸಮಯ ಮತ್ತು ವೈಯಕ್ತಿಕ ಜೈವಿಕ ಲಯಗಳ ಆಧಾರದಲ್ಲಿ ಈ ಅನುಭವ ಬದಲಾಗಬಹುದು.

ನಿಮ್ಮ Body Clock ಅನ್ನು ಗೌರವಿಸಿ!

ಮುಂದಿನ ಬಾರಿ ಅಲಾರಾಂ ಮೊಳಗುವ ಒಂದು ನಿಮಿಷ ಮೊದಲೇ ನಿಮಗೆ ಎಚ್ಚರವಾದರೆ, ಆ ಕ್ಷಣವನ್ನು ಗಮನಿಸಿ. ನಿಮ್ಮ ದೇಹದೊಳಗೆ ನಡೆಯುತ್ತಿರುವ ಜೈವಿಕ ಪ್ರಕ್ರಿಯೆಗಳು ಎಷ್ಟು ಸೂಕ್ಷ್ಮವಾಗಿವೆ ಎಂಬುದನ್ನು ನೆನಪಿಸಿಕೊಳ್ಳಿ.

ನೀವು ಯಾವತ್ತೂ ಸಮಯ ಹೊಂದಿಸದ, ಕಣ್ಣಿಗೆ ಕಾಣದ ಒಂದು ಗಡಿಯಾರ ನಿಮ್ಮ ಅರಿವಿಗೆ ಬಾರದಂತೆ ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿರುತ್ತದೆ. ಅದು ನಿದ್ರೆ, ಹಾರ್ಮೋನ್‌ಗಳು ಮತ್ತು ದೇಹದ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ನೆರವಾಗುತ್ತದೆ.

ಆದರೆ ಪ್ರತಿದಿನ ಅಲಾರಾಂಗಿಂತ ಮುಂಚೆಯೇ ಎಚ್ಚರವಾಗುವುದು ನಿಮ್ಮ ದೇಹದ ಗಡಿಯಾರ ಯಾವಾಗಲೂ ನಿಖರವಾಗಿದೆ ಎಂಬುದಕ್ಕೆ ಪುರಾವೆಯಲ್ಲ. ಹಾಗೆಯೇ, ನಿದ್ರೆ ಸಾಲದಿದ್ದರೂ ದೇಹವೇ ಎಬ್ಬಿಸುತ್ತದೆ ಎಂದು ಭಾವಿಸಿ ನಿದ್ರೆಯ ಅವಧಿಯನ್ನು ಕಡಿಮೆ ಮಾಡಬಾರದು.

ದೇಹದ ಜೈವಿಕ ಗಡಿಯಾರಕ್ಕೆ ನೆರವಾಗಲು ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗಿ, ಎದ್ದೇಳಿ. ಸಾಕಷ್ಟು ನಿದ್ರೆ ಪಡೆಯಿರಿ. ಏಕೆಂದರೆ ನಮ್ಮ ದೇಹವು ಸಮಯವನ್ನು ಅರಿಯುವ ಸಾಮರ್ಥ್ಯ ಹೊಂದಿದ್ದರೂ, ಆರೋಗ್ಯಕರ (health) ನಿದ್ರೆಗೆ ಪರ್ಯಾಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+