ಪುರುಷರನ್ನು ಸುಪ್ತವಾಗಿ ಕಾಡುವ ಮೂತ್ರಕೋಶ ಕ್ಯಾನ್ಸರ್ ಅಪಾಯ!
ಸಾಮಾನ್ಯವಾಗಿ ಧೂಮಪಾನ ಸಂಬಂಧಿತ ಕಾಯಿಲೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ಚರ್ಚೆಗೆ ಒಳಗಾಗುತ್ತದೆ. ಆದರೆ, ಧೂಮಪಾನದ ಇನ್ನೊಂದು ಮಾರಣಾಂತಿಕ ಪರಿಣಾಮವೆಂದರೆ ಮೂತ್ರಕೋಶದ ಕ್ಯಾನ್ಸರ್. ಇದು ವಿಶೇಷವಾಗಿ ನಗರ ಪ್ರದೇಶದ ಪುರುಷ ಧೂಮಪಾನಿಗಳನ್ನು, ಅದರಲ್ಲೂ ಹೆಚ್ಚಿನ ಒತ್ತಡದ ಕಾರ್ಪೊರೇಟ್ ಉದ್ಯೋಗಿಗಳನ್ನು ಸದ್ದಿಲ್ಲದೆ ಬಾಧಿಸುತ್ತಿದೆ. ಆರಂಭಿಕ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ಮೂತ್ರದ ಸೋಂಕು ಎಂದು ತಪ್ಪಾಗಿ ಭಾವಿಸುವುದರಿಂದ, ಕ್ಯಾನ್ಸರ್ ತಡವಾಗಿ ಪತ್ತೆಯಾಗಿ, ಅದು ಮುಂದುವರಿದ ಹಂತವನ್ನು ತಲುಪಿದಾಗ ಚಿಕಿತ್ಸೆ ಕಷ್ಟವಾಗುತ್ತದೆ.
ಹೆಚ್ಚುತ್ತಿರುವ ಪ್ರಕರಣಗಳು
ಕಳೆದ ಕೆಲವು ದಶಕಗಳಲ್ಲಿ ಮೂತ್ರಕೋಶದ ಕ್ಯಾನ್ಸರ್ ಪ್ರಕರಣಗಳು ಜಾಗತಿಕವಾಗಿ ಸ್ಥಿರವಾಗಿ ಹೆಚ್ಚುತ್ತಿವೆ. 1990ರಲ್ಲಿ ಪ್ರತಿ 100,000 ಜನಸಂಖ್ಯೆಗೆ 20.9 ಇದ್ದ ಪ್ರಮಾಣವು 2019ಕ್ಕೆ 37.1ಕ್ಕೆ ಏರಿದೆ. 2040ರ ವೇಳೆಗೆ ಈ ಸಂಖ್ಯೆ 70%ಕ್ಕಿಂತ ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ, GLOBOCAN 2022ರ ದತ್ತಾಂಶದ ಪ್ರಕಾರ 22,548 ಮೂತ್ರಕೋಶದ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 12,353 ಸಾವು ವರದಿಯಾಗಿವೆ. ಜಾಗತಿಕವಾಗಿ, ಭಾರತವು ಈಗ ಏಳನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ಈ ಏರಿಕೆಗೆ ಮುಖ್ಯ ಕಾರಣವೆಂದರೆ ನಿಕೋಟಿನ್. ಭಾರತದಲ್ಲಿ ಮೂತ್ರಕೋಶದ ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು 77% ರಷ್ಟು ರೋಗಿಗಳಹ ತಂಬಾಕು ಸೇವನೆಯ ಇತಿಹಾಸವನ್ನು ಹೊಂದಿದ್ದಾರೆ. ಧೂಮಪಾನವು ಮೂತ್ರಕೋಶದ ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ಅಂಶವಾಗಿದೆ.

ಮೂತ್ರಕೋಶದ ಮೇಲೆ ನಿಕೋಟಿನ್‌ನ ಪರಿಣಾಮ
ಧೂಮಪಾನದಿಂದ ಶ್ವಾಸಕೋಶದ ಕಾಯಿಲೆಗಳು ಉಂಟಾಗುತ್ತವೆ ಎಂಬುದು ಜನಸಾಮಾನ್ಯರಲ್ಲಿ ಪ್ರಚಲಿತವಾದ ತಿಳುವಳಿಕೆಯಾಗಿದೆ. ಆದರೆ ಮೂತ್ರಕೋಶವೂ ನಿಕೋಟಿನ್‌ನಿಂದ ತೀವ್ರವಾಗಿ ಹಾನಿಗೊಳಗಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ತಂಬಾಕಿನಿಂದ ಬರುವ ಕಾರ್ಸಿನೋಜೆನ್‌ಗಳು (ಕ್ಯಾನ್ಸರ್‌ಕಾರಕ ವಸ್ತುಗಳು) ಮೂತ್ರಪಿಂಡಗಳಿಂದ ಶೋಧಿಸಲ್ಪಟ್ಟು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತವೆ. ಅಲ್ಲಿ ಅವು ಕಾಲಾನಂತರದಲ್ಲಿ ಮೂತ್ರಕೋಶದ ಒಳಪದರವನ್ನು ನೇರವಾಗಿ ಹಾನಿಗೊಳಿಸುತ್ತವೆ. ನಿಕೋಟಿನ್‌ಗೆ ಯಾವುದೇ "ಸುರಕ್ಷಿತ ಪ್ರಮಾಣ" ಇಲ್ಲ. ಓರ್ವ ವ್ಯಕ್ತಿ ಎಷ್ಟು ಸಮಯದವರೆಗೆ ಮತ್ತು ಎಷ್ಟು ಪ್ರಮಾಣದಲ್ಲಿ ಧೂಮಪಾನ ಮಾಡುತ್ತಾನೆ ಎಂಬುದರ ಮೇಲೆ ಅಪಾಯ ಹೆಚ್ಚಾಗುತ್ತದೆ. ಧೂಮಪಾನಿಗಳಲ್ಲಿ ಧೂಮಪಾನ ಮಾಡದವರಿಗಿಂತ 3ರಿಂದ 7 ಪಟ್ಟು ಹೆಚ್ಚು ಮೂತ್ರಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕಾರ್ಪೊರೇಟ್ ಕ್ಷೇತ್ರದ ಪುರುಷ ಉದ್ಯೋಗಿಗಳೇ ಎಚ್ಚರ
ಭಾರತದಲ್ಲಿ ಪುರುಷರಿಗೆ ಮಹಿಳೆಯರಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಮೂತ್ರಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣಗಳು ತಂಬಾಕು ಸೇವನೆಯ ಹೆಚ್ಚಿನ ಪ್ರಮಾಣ ಮತ್ತು ಕೈಗಾರಿಕಾ ರಾಸಾಯನಿಕಗಳಿಗೆ (ವಿಶೇಷವಾಗಿ ಬಣ್ಣ, ರಬ್ಬರ್ ಮತ್ತು ಚರ್ಮದ ಕೈಗಾರಿಕೆಗಳಲ್ಲಿ) ಒಡ್ಡಿಕೊಳ್ಳುವುದು. ಒತ್ತಡ ಮತ್ತು ನಿಗದಿತ ಗಡುವು ಹೊಂದಿರುವ ಕಡಲಸ ನಿರ್ವಹಿಸುವ ಕಾರ್ಪೊರೇಟ್ ಕ್ಷೇತ್ರದ ಪುರುಷ ಉದ್ಯೋಗಿಗಳು ಧೂಮಪಾನವನ್ನು ಒತ್ತಡ ನಿಭಾಯಿಸುವ ಮಾರ್ಗವಾಗಿ ಬಳಸುತ್ತಾರೆ. ಜಡ ಜೀವನಶೈಲಿ, ಅನಿಯಮಿತ ವೈದ್ಯಕೀಯ ತಪಾಸಣೆಗಳು ಮತ್ತು ಮೂತ್ರದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರವೃತ್ತಿಯೂ ಸೇರಿ, ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ. ಅಲ್ಲದೇ, ಗಮನಕ್ಕೆ ಬಾರದಂತೆಯೇ ಆರೋಗ್ಯವು ಹಾನಿಯಾಗುತ್ತಿದೆ.
ಆರಂಭಿಕ ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ!
ಹೆಮಟೂರಿಯಾ (ಮೂತ್ರದಲ್ಲಿ ರಕ್ತ) ಮೂತ್ರಕೋಶದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಇದು ಸ್ಪಷ್ಟವಾಗಿ ಕೆಂಪು ಅಥವಾ ಕಂದು ಬಣ್ಣದಲ್ಲಿ ಕಾಣಿಸಬಹುದು, ಅಥವಾ ಸಾಮಾನ್ಯ ಮೂತ್ರ ಪರೀಕ್ಷೆಯಲ್ಲಿ ಮಾತ್ರ ಪತ್ತೆಯಾಗಬಹುದು. ಇತರ ಆರಂಭಿಕ ರೋಗಲಕ್ಷಣಗಳು ಹೀಗಿವೆ:
⦁ ಪದೇ ಪದೇ ಮೂತ್ರ ವಿಸರ್ಜನೆ
⦁ ಮೂತ್ರ ವಿಸರ್ಜನೆ ಮಾಡುವಾಗ ಉರಿ ಅಥವಾ ನೋವು
⦁ ಮೂತ್ರಕೋಶ ಪೂರ್ಣವಾಗಿಲ್ಲದಿದ್ದರೂ ಸಹ ತೀವ್ರ ಮೂತ್ರ ವಿಸರ್ಜನೆಯ ಬಯಕೆ
⦁ ಕೆಳ ಹೊಟ್ಟೆ ಅಥವಾ ಬೆನ್ನಿನಲ್ಲಿ ನೋವು
ಈ ರೋಗಲಕ್ಷಣಗಳು ಮೂತ್ರದ ಸೋಂಕಿನಂತೆಯೇ ಇರಬಹುದು. ಅದಕ್ಕಾಗಿಯೇ ನಿರಂತರ ಅಥವಾ ವಿವರಿಸಲಾಗದ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.
ಯಾರಿಗೆ ಹೆಚ್ಚು ಅಪಾಯ?
55 ವರ್ಷಕ್ಕಿಂತ ಮೇಲ್ಪಟ್ಟ ಧೂಮಪಾನ ಮಾಡುವ ಪುರುಷರು ಈ ಕಾಯಿಲೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಈ ಕಾಯಿಲೆಯ ಹೆಚ್ಚಿನ ಅಪಾಯದಲ್ಲಿರುವ ಇತರ ಗುಂಪುಗಳು ಹೀಗಿವೆ:
⦁ ಔದ್ಯೋಗಿಕವಾಗಿ ಬಣ್ಣ, ರಬ್ಬರ್ ಮತ್ತು ಚರ್ಮದ ಕೈಗಾರಿಕೆಗಳಲ್ಲಿ ಬಳಸಲ್ಪಡುವ ರಾಸಾಯನಿಕಗಳಿಗೆ ಒಡ್ಡಿಕೊಂಡವರು
⦁ ದೀರ್ಘಕಾಲದ ಮೂತ್ರಕೋಶದ ಕಿರಿಕಿರಿಯನ್ನು ಹೊಂದಿರುವ ವ್ಯಕ್ತಿಗಳು
⦁ ಪೆಲ್ವಿಕ್ ವಿಕಿರಣ ಅಥವಾ ಕಿಮೋಥೆರಪಿಯ ಇತಿಹಾಸ ಹೊಂದಿರುವವರು
⦁ ಮೂತ್ರಕೋಶದ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವವರು
⦁ ಆರ್ಸೆನಿಕ್-ಕಲುಷಿತ ಕುಡಿಯುವ ನೀರಿಗೆ ಒಡ್ಡಿಕೊಂಡವರು

ಚಿಕಿತ್ಸೆ ಸಾಧ್ಯವೇ?
ಹೌದು, ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯವಿದೆ. ವಿಶೇಷವಾಗಿ ಇದನ್ನು ಬೇಗನೆ ಪತ್ತೆ ಹಚ್ಚಿದರೆ. ಮೂತ್ರಕೋಶದ ಮಾಂಸವನ್ನು ಒಳಗೊಂಡಿರದ ಕಡಿಮೆ ಆಕ್ರಮಣಕಾರಿ (non-muscle invasive) ಅಥವಾ ಆರಂಭಿಕ ಹಂತದ ಕ್ಯಾನ್ಸರ್‌ನ್ನು TURBT (Transurethral Resection of Bladder Tumor) ವಿಧಾನಗಳನ್ನು ಬಳಸಿ ನಂತರ ಕೀಮೋಥೆರಪಿ ಅಥವಾ ಬಿಸಿಜಿಯಂತಹ ಇಂಟ್ರಾವೆಸಿಕಲ್ ಥೆರಪಿಗಳ ಮೂಲಕ ಚಿಕಿತ್ಸೆ ನೀಡಬಹುದು. ಮುಂದುವರಿದ ಪ್ರಕರಣಗಳಲ್ಲಿ, ಇಮ್ಯುನೋಥೆರಪಿ, ಕೀಮೋಥೆರಪಿ, ವಿಕಿರಣ, ಅಥವಾ ಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಕೆಲವೊಮ್ಮೆ ಇವುಗಳನ್ನು ಸಂಯೋಜಿಸಿಯೂ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಆದರೂ, ಮೂತ್ರಕೋಶದ ಕ್ಯಾನ್ಸರ್ ಮರುಕಳಿಸುವ ಪ್ರವೃತ್ತಿಯನ್ನು ಹೊಂದಿದೆ. ಈ ಕಾರಣ, ಚಿಕಿತ್ಸೆಯ ನಂತರ ದೀರ್ಘಕಾಲೀನ ಕಣ್ಗಾವಲು ಮತ್ತು ಅನುಸರಣೆಯ ಅಗತ್ಯವಿರುತ್ತದೆ.
ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು?
⦁ ಧೂಮಪಾನವನ್ನು ತ್ಯಜಿಸಿ: ಇದು ಮೂತ್ರಕೋಶದ ಕ್ಯಾನ್ಸರ್‌ನ್ನು ತಡೆಗಟ್ಟುವಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
⦁ ಮೂತ್ರಕೋಶದಿಂದ ವಿಷವನ್ನು ಹೊರಹಾಕಲು ಆರ್ದ್ರತೆಯನ್ನು ಕಾಪಾಡಿಕೊಳ್ಳಿ (ಹೆಚ್ಚು ನೀರು ಕುಡಿಯಿರಿ).
⦁ ರಾಸಾಯನಿಕಗಳೊಂದಿಗೆ ಕೆಲಸ ಮಾಡುವಾಗ ರಕ್ಷಣೆಗೆ ಹೆಚ್ಚು ಒತ್ತು ನೀಡಿ. ಅಗತ್ಯ ಸಾಧನಗಳನ್ನು ಬಳಸಿ.
⦁ ಹಣ್ಣುಗಳು ಮತ್ತು ತರಕಾರಿಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
⦁ ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ವಿಶೇಷವಾಗಿ 50 ವರ್ಷಗಳ ನಂತರ ನಿಯಮಿತ ಆರೋಗ್ಯ ತಪಾಸಣೆಗಳನ್ನು ನಿಗದಿಪಡಿಸಿ.
ನೀವು ದೀರ್ಘಕಾಲದ ಧೂಮಪಾನಿಗಳಾಗಿದ್ದರೆ ಅಥವಾ ಹೆಚ್ಚು ಅಪಾಯಕಾರಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ರೋಗಲಕ್ಷಣಗಳು ಉಲ್ಬಣಗೊಳ್ಳುವವರೆಗೆ ಕಾಯಬೇಡಿ. ಮೂತ್ರ ವಿಸರ್ಜನೆಯ ತೊಂದರೆಯ ಮೊದಲ ಸೂಚನೆಯಲ್ಲಿ ವೈದ್ಯರನ್ನು ಭೇಟಿ ಮಾಡಿ. ಕೊನೆಯದಾಗಿ ಮೂತ್ರಕೋಶದ ಕ್ಯಾನ್ಸರ್ ಸ್ಪಷವಾದ ಲಕ್ಷಣಗಳೊಂದಿಗೆ ತನ್ನನ್ನು ತಾನು ಪ್ರಕಟಿಸುವುದಿಲ್ಲ. ಅದಕ್ಕಾಗಿಯೇ ಇದು ಅಪಾಯಕಾರಿ. ಮೂತ್ರಕೋಶವು ನಿಕೋಟಿನ್‌ನಿಂದ ನೇರವಾಗಿ ತೊಂದರೆಗೀಡಾಗುತ್ತದೆ. ಆದರೆ ಧೂಮಪಾನಿಗಳು ಸಾಮಾನ್ಯವಾಗಿ ಈ ಅಂಗದ ಬಗ್ಗೆ ಯೋಚಿಸುವುದಿಲ್ಲ. ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ನೀವು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಧೂಮಪಾನಿಗಳಾಗಿದ್ದರೆ ಅಥವಾ ಹೆಚ್ಚಿನ ಅಪಾಯಗಳಿಗೆ ಒಡ್ಡಿಕೊಂಡಿದ್ದರೆ, ನಿಮ್ಮ ದೇಹವು ಈಗಾಗಲೇ ಸೂಚನೆಗಳನ್ನು ರವಾನಿಸುತ್ತಿರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಮೂತ್ರಕೋಶದ ಕ್ಯಾನ್ಸರ್ ವಿಷಯದಲ್ಲಿ ಆರಂಭದಲ್ಲಿ ನೀಡುವ ಗಮನವು ನಿಮ್ಮ ಜೀವವನ್ನು ಉಳಿಸಬಹುದು.
(ಲೇಖಕರು: ಡಾ. ವಿಷ್ಣು ಪ್ರಸಾದ್, ಕನ್ಸಲ್ಟೆಂಟ್ - ಯೂರೋಲಾಜಿ, ಯುರೋ-ಒಂಕಾಲೊಜಿ, ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆ)
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications