ರೊಮ್ಯಾನ್ಸ್ ಶುರುವಾಯ್ತಾ? ನಿಮ್ಮ ಸಂಬಂಧದ ಈ 5 ಹಂತಗಳ ಬಗ್ಗೆ ತಿಳಿಯಿರಿ, ಈ ಹಂತ ತಲುಪಿದ್ರೆ ಪರ್ಫೆಕ್ಟ್ ಲವ್
ಮೊದಲ ಬಾರಿ ಒಬ್ಬರನ್ನೊಬ್ಬರು ನೋಡಿದಾಗ ಮನಸ್ಸಿನಲ್ಲಿ ಏನೋ ಒಂದು ಹೊಸ ಭಾವನೆ. ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತೆ. ಅವರ ಮೆಸೇಜ್‌ಗಾಗಿ ಕಾಯುವುದು, ಫೋನ್ ಬಂದರೆ ಖುಷಿಯಾಗುವುದು, ಗಂಟೆಗಟ್ಟಲೆ ಮಾತನಾಡಿದರೂ ಇನ್ನೂ ಮಾತನಾಡಬೇಕು ಎನ್ನಿಸುವುದು... ಹೀಗೆ ಪ್ರೀತಿ ಶುರುವಾದಾಗ ಎಲ್ಲವೂ ಸುಂದರ. ಆ ಸಮಯದಲ್ಲಿ ಬಹುತೇಕ ಜೋಡಿಗಳಿಗೆ 'ನಮ್ಮ ಸಂಬಂಧ ಹೀಗೆಯೇ ಜೀವನಪೂರ್ತಿ ಇರುತ್ತದೆ' ಎಂಬ ನಂಬಿಕೆ ಇರುತ್ತದೆ.
ಆದರೆ ಸಂಬಂಧಗಳು ಯಾವಾಗಲೂ ಒಂದೇ ರೀತಿಯಲ್ಲಿರುವುದಿಲ್ಲ. ಆರಂಭದ ಆಕರ್ಷಣೆ ನಿಧಾನವಾಗಿ ಕಡಿಮೆಯಾಗಬಹುದು, ಬದಲಾಗಬಹುದು. ಅದರ ಜಾಗದಲ್ಲಿ ಅರ್ಥ ಮಾಡಿಕೊಳ್ಳುವಿಕೆ, ಹೊಂದಾಣಿಕೆ, ಬದ್ಧತೆ ಮತ್ತು ಗಾಢವಾದ ಸ್ನೇಹ ಬೆಳೆಯುತ್ತಾ ಹೋಗುತ್ತದೆ.

ಮನೋವಿಜ್ಞಾನ ಮತ್ತು ಸಂಬಂಧಗಳ ಕುರಿತ ಅಧ್ಯಯನಗಳಲ್ಲಿ ಪ್ರೀತಿಯ ಸಂಬಂಧವನ್ನು ಹಲವು ಹಂತಗಳ ಮೂಲಕ ಸಾಗುವ ಪ್ರಕ್ರಿಯೆಯಾಗಿ ನೋಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಒಂದು ಸಂಬಂಧ ಆಕರ್ಷಣೆಯಿಂದ ಆರಂಭವಾಗಿ, ಬಾಂಧವ್ಯ, ಬದ್ಧತೆ ಮತ್ತು ಕೊನೆಗೆ ಗಾಢವಾದ ಸಹಭಾಗಿತ್ವದತ್ತ ಸಾಗಬಹುದು.
ಹಾಗಾದರೆ 5 Stages of Love ಯಾವುವು?
1. ಮೊದಲ ಹಂತ: ಆಹಾ, ಈ ರೊಮ್ಯಾನ್ಸ್ ಎಷ್ಟು ಸುಂದರ!
ಇದು ಪ್ರೀತಿಯ ಅತ್ಯಂತ ರೋಮಾಂಚಕಾರಿ ಹಂತ. ಹೊಸ ವ್ಯಕ್ತಿಯೊಬ್ಬ/ಳು ಜೀವನಕ್ಕೆ ಬಂದಾಗ ಅವರ ಮಾತು, ನಗು, ನಡವಳಿಕೆ, ಸ್ಟೈಲ್-ಎಲ್ಲವೂ ವಿಶೇಷವಾಗಿ ಕಾಣಬಹುದು. ಅವರಿಂದ ಬರುವ ಒಂದು ಮೆಸೇಜ್ ಕೂಡ ದಿನವನ್ನೇ ಬದಲಿಸಿಬಿಡಬಹುದು. ಈ ಹಂತವನ್ನು ಸಾಮಾನ್ಯವಾಗಿ ಆಕರ್ಷಣೆ ಅಥವಾ ಹನಿಮೂನ್ ಹಂತ ಎಂದು ಕರೆಯಲಾಗುತ್ತದೆ. ದೈಹಿಕ ಆಕರ್ಷಣೆ (Physical Attraction), ಹೊಸತನ ಮತ್ತು ಪ್ರೀತಿಯ ಉತ್ಸಾಹ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಸಮಯದಲ್ಲಿ ದೇಹ ಮತ್ತು ಮೆದುಳಿನಲ್ಲಿನ ಕೆಲವು ಹಾರ್ಮೋನುಗಳು ಹಾಗೂ ರಾಸಾಯನಿಕ ಬದಲಾವಣೆಗಳು ಉತ್ಸಾಹ, ಖುಷಿ ಮತ್ತು ಆಕರ್ಷಣೆಯ ಭಾವನೆಗಳನ್ನು ಹೆಚ್ಚಿಸಬಹುದು. ಹೀಗಾಗಿ, ಸಂಗಾತಿಯಲ್ಲಿರುವ ಒಳ್ಳೆಯ ಗುಣಗಳೇ ಕಣ್ಣಿಗೆ ಹೆಚ್ಚು ಬೀಳುತ್ತವೆ. ಅವರ ಸಣ್ಣ ತಪ್ಪುಗಳನ್ನೂ "ಅಯ್ಯೋ, ಎಷ್ಟು ಕ್ಯೂಟ್!" ಎಂದುಕೊಳ್ಳುವ ಸಾಧ್ಯತೆ ಇರುತ್ತದೆ!
ಆದರೆ ಇದೇ ಹಂತದಲ್ಲಿ ಸಂಗಾತಿಯ ವ್ಯಕ್ತಿತ್ವ, ನಡವಳಿಕೆ ಮತ್ತು ಮೌಲ್ಯಗಳನ್ನು ಗಮನಿಸುವುದೂ ಮುಖ್ಯ. ಮುಂದೆ ಸಮಸ್ಯೆಯಾಗಬಹುದಾದ ಕೆಲವು ನಡವಳಿಕೆಗಳು ಆರಂಭದಲ್ಲೇ ಗೋಚರಿಸಿದರೆ ಅವುಗಳನ್ನು ನಿರ್ಲಕ್ಷಿಸಬಾರದು.
2. ಎರಡನೇ ಹಂತ: ಒಟ್ಟಿಗೆ ಬದುಕುವ ಚಿಂತನೆ
ಆರಂಭದ ಆಕರ್ಷಣೆ ಸ್ವಲ್ಪ ಗಟ್ಟಿಯಾದ ನಂತರ ಸಂಬಂಧ ಮತ್ತೊಂದು ಹಂತಕ್ಕೆ ಹೋಗುತ್ತದೆ. ಈಗ ಕೇವಲ "ನೀನು ತುಂಬಾ ಚೆನ್ನಾಗಿದ್ದೀಯ" ಎನ್ನುವುದಕ್ಕಿಂತ, "ನಾವು ಇಬ್ಬರೂ ಒಟ್ಟಿಗೆ ಹೇಗೆ ಬದುಕಬಹುದು?" ಎಂಬ ಪ್ರಶ್ನೆ ಮುಖ್ಯವಾಗುತ್ತದೆ.
ಸಂಗಾತಿಯ ನಿಜವಾದ ವ್ಯಕ್ತಿತ್ವ ನಿಧಾನವಾಗಿ ಪರಿಚಯವಾಗುತ್ತದೆ. ಅವರ ಅಭ್ಯಾಸಗಳು, ಕೋಪ, ಇಷ್ಟ-ಅನಿಷ್ಟಗಳು, ಕುಟುಂಬದ ಹಿನ್ನೆಲೆ, ಜೀವನದ ಗುರಿಗಳು ಎಲ್ಲವೂ ತಿಳಿಯಲು ಆರಂಭವಾಗುತ್ತದೆ. ಇಲ್ಲೇ ಮೊದಲ ಸಣ್ಣ ಘರ್ಷಣೆಗಳೂ ಶುರುವಾಗಬಹುದು.
ಉದಾಹರಣೆಗೆ, ಒಬ್ಬರಿಗೆ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಇನ್ನೊಬ್ಬರಿಗೆ ಬಟ್ಟೆಗಳನ್ನು ಕುರ್ಚಿಯ ಮೇಲೆ ಹಾಕಿದರೂ ಪರವಾಗಿಲ್ಲ! ಇಂತಹ ಸಣ್ಣ ವಿಷಯಗಳೇ ಕೆಲವೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಬಹುದು. ಈ ಹಂತದಲ್ಲಿ ಮದುವೆ, ಮಕ್ಕಳು, ವೃತ್ತಿ, ಹಣಕಾಸು, ಕುಟುಂಬ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತುಕತೆ ಶುರುವಾಗಬಹುದು. ಅಂದರೆ, "ನನಗೆ ನೀನು ಇಷ್ಟ" ಎನ್ನುವುದರಿಂದ "ನಿನ್ನ ಜೊತೆ ಜೀವನ ಕಟ್ಟಿಕೊಳ್ಳಬಹುದೇ?" ಎನ್ನುವ ಹಂತಕ್ಕೆ ಸಂಬಂಧ ಬರುತ್ತದೆ.
3. ಮೂರನೇ ಹಂತ: ಪ್ರೀತಿಯ ಪರೀಕ್ಷೆ
ಇದು ಸಂಬಂಧದ ಪ್ರಮುಖ ತಿರುವು. ಆರಂಭದ ದಿನಗಳಲ್ಲಿದ್ದ ಉತ್ಸಾಹ ನಿಧಾನವಾಗಿ ಕಡಿಮೆಯಾಗಬಹುದು. ಪ್ರತಿದಿನ ಗಂಟೆಗಟ್ಟಲೆ ಮಾತನಾಡಬೇಕೆನ್ನಿಸುವುದು ಕಡಿಮೆಯಾಗಬಹುದು. ಸಂಗಾತಿಯ ಕೆಲವು ಅಭ್ಯಾಸಗಳು ಕಿರಿಕಿರಿ ಉಂಟುಮಾಡಬಹುದು.
ಇಲ್ಲಿ ಕೆಲವರಿಗೆ ನನ್ನ ಪ್ರೀತಿ ಕಡಿಮೆಯಾಗುತ್ತಿದೆಯಾ ಎಂಬ ಒಂದು ಅನುಮಾನವೂ ಬರಬಹುದು. ಆರಂಭದ ವ್ಯಾಮೋಹ ಕಡಿಮೆಯಾದರೆ ಪ್ರೀತಿ ಮುಗಿಯುತ್ತಿದೆ ಎಂದರ್ಥವಲ್ಲ. ಬದಲಾಗಿ, ಸಂಬಂಧ ಮತ್ತಷ್ಟು ವಾಸ್ತವಿಕ ಹಂತಕ್ಕೆ ಪ್ರವೇಶಿಸುತ್ತಿದೆ ಎಂದರ್ಥ.
ಈ ಹಂತದಲ್ಲಿ ದಂಪತಿ ತಮ್ಮ ಸಂಬಂಧದಿಂದ ನಿಜವಾಗಿ ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮುಂದಿನ ಜೀವನದ ಬಗ್ಗೆ ಇಬ್ಬರ ಅಭಿಪ್ರಾಯ ಒಂದೇನಾ? ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುತ್ತಾರೆ? ಪರಸ್ಪರರ ಪರ್ಸನಲ್ ಸಂಗತಿಗಳಿಗೆ ಗೌರವವಿದೆಯಾ? ಇಂತಹ ಪ್ರಶ್ನೆಗಳು ಮುಖ್ಯವಾಗುತ್ತವೆ. ಅನುಮಾನಗಳು ಅಥವಾ ಸಮಸ್ಯೆಗಳು ಎದುರಾದರೆ ಅವುಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದಕ್ಕಿಂತ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವುದು ಉತ್ತಮ. ಸಂಬಂಧ ಉಳಿಯುವುದಕ್ಕೆ ಪ್ರೀತಿ ಎಷ್ಟು ಮುಖ್ಯವೋ, ಸಂವಹನವೂ ಅಷ್ಟೇ ಮುಖ್ಯ.
4. ನಾಲ್ಕನೇ ಹಂತ: ಪ್ರೀತಿಯನ್ನು ಉಳಿಸಿಕೊಳ್ಳುವ ಕಲೆ
ಈ ಹಂತಕ್ಕೆ ಬಂದಾಗ ಸಂಬಂಧದಲ್ಲಿ ಒಂದು ರೀತಿಯ ಸ್ಥಿರತೆ ಕಾಣಿಸಿಕೊಳ್ಳುತ್ತದೆ. ಇಬ್ಬರೂ ಪರಸ್ಪರರ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಸಂಗಾತಿಯ ಸಣ್ಣಪುಟ್ಟ ಅಭ್ಯಾಸಗಳು ಈಗ ಹೊಸದಾಗಿ ಕಾಣಿಸುವುದಿಲ್ಲ. ಬದಲಿಗೆ, ಅವರ ಜೊತೆಗಿನ ಜೀವನವೇ ಸಹಜವಾಗಿಬಿಟ್ಟಿರುತ್ತದೆ. ಈ ಹಂತದಲ್ಲಿ ಮದುವೆ, ಮಕ್ಕಳು, ಒಟ್ಟಿಗೆ ವಾಸಿಸುವುದು ಅಥವಾ ಭವಿಷ್ಯದ ದೊಡ್ಡ ಯೋಜನೆಗಳು ಜೀವನದ ಭಾಗವಾಗಿರಬಹುದು.
ಆದರೆ ಇಲ್ಲಿ ಒಂದು ಸಣ್ಣ ಅಪಾಯವೂ ಇದೆ. ಸಂಬಂಧ ಆರಾಮದಾಯಕವಾಗಿದೆ ಎಂದು ಅದನ್ನು ನಿರ್ಲಕ್ಷಿಸಬಾರದು. ಆರಂಭದಲ್ಲಿ ಇದ್ದ ಕಾಳಜಿ, ಮಾತುಕತೆ, ಒಟ್ಟಿಗೆ ಸಮಯ ಕಳೆಯುವುದು ಮತ್ತು ಪರಸ್ಪರ ಮೆಚ್ಚುಗೆ ಇವುಗಳನ್ನು ಮುಂದುವರಿಸಬೇಕು. ಒಬ್ಬರನ್ನೊಬ್ಬರು ಬದಲಾಯಿಸಲು ಪ್ರಯತ್ನಿಸುವುದಕ್ಕಿಂತ, ಇಬ್ಬರೂ ತಮ್ಮದೇ ಆದ ವ್ಯಕ್ತಿತ್ವವನ್ನು ಉಳಿಸಿಕೊಂಡು ಪರಸ್ಪರ ಬೆಂಬಲಿಸುವುದು ಆರೋಗ್ಯಕರ ಸಂಬಂಧಕ್ಕೆ ಸಹಾಯ ಮಾಡುತ್ತದೆ. ಪ್ರೀತಿಯ ಬೆಂಕಿ ಆರಂಭದಲ್ಲಿ ಸ್ವತಃ ಹೊತ್ತಿಕೊಳ್ಳಬಹುದು. ಆದರೆ ಅದು ವರ್ಷಗಳ ಕಾಲ ಉರಿಯಬೇಕಾದರೆ ಇಬ್ಬರೂ ಸೇರಿ ಅದನ್ನು ಪೋಷಿಸಬೇಕು.
5. ಐದನೇ ಹಂತ: ಪ್ರೀತಿಗಿಂತಲೂ ಗಾಢ ಒಡನಾಟ
ಇಲ್ಲಿಗೆ ಬಂದಿದ್ದೀರಾ? ಹಾಗಿದ್ದರೆ ಸಂಬಂಧದ ಅತ್ಯಂತ ಸುಂದರ ಹಂತಗಳಲ್ಲಿ ಒಂದನ್ನು ತಲುಪಿದ್ದೀರಿ. ಇದು ಕೇವಲ ರೊಮ್ಯಾನ್ಸ್‌ನ ಹಂತವಲ್ಲ. ಇಲ್ಲಿ ಸಂಗಾತಿ ನಿಮ್ಮ ಜೀವನದ ಗೆಳೆಯ, ನಂಬಿಕೆಯ ವ್ಯಕ್ತಿ ಮತ್ತು ಟೀಮ್‌ಮೇಟ್ ಆಗಿರುತ್ತಾರೆ. ಇಬ್ಬರ ನಡುವೆ ಪರಸ್ಪರ ಗೌರವ, ನಂಬಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆ ಗಟ್ಟಿಯಾಗಿರುತ್ತದೆ.
ಜೀವನದಲ್ಲಿ ಸಮಸ್ಯೆಗಳು ಬರಬಹುದು. ಹಣಕಾಸಿನ ಒತ್ತಡ (Financial Pressure), ಕುಟುಂಬದ ಜವಾಬ್ದಾರಿಗಳು (Family Responsibilities), ಮಕ್ಕಳ ವಿಚಾರ (Child Care), ವೃತ್ತಿ ಅಥವಾ ಆರೋಗ್ಯದಂತಹ ಹಲವು ಸವಾಲುಗಳು ಎದುರಾಗಬಹುದು. ಆದರೆ ಸಮಸ್ಯೆ ಬಂದಾಗ "ನೀನು-ನಾನು" ಎಂದು ಬೇರ್ಪಡುವ ಬದಲು "ನಾವಿಬ್ಬರೂ ಸೇರಿ ಇದನ್ನು ಹೇಗೆ ಎದುರಿಸೋಣ?" ಎನ್ನುವ ಮನೋಭಾವ ಮೂಡುತ್ತದೆ.
ಇಲ್ಲಿ ಸಂಬಂಧದಲ್ಲಿ ಕೊಡು-ಕೊಳ್ಳುವಿಕೆ ಬಹಳ ಮುಖ್ಯ. ಕೆಲವೊಮ್ಮೆ ಒಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕು. ಮತ್ತೊಂದು ಸಂದರ್ಭದಲ್ಲಿ ಮತ್ತೊಬ್ಬರು ಹಿಂದೆ ಸರಿಯಬೇಕಾಗಬಹುದು. ಅದಕ್ಕಿಂತ ಮುಖ್ಯವಾಗಿ, ಮಾತುಕತೆ, ಗೌರವ ಮತ್ತು ಪ್ರಾಮಾಣಿಕತೆ ಮುಂದುವರಿಯಬೇಕು. ಆರಂಭದ ನಾಲ್ಕು ಹಂತಗಳಲ್ಲಿ ಹಾಕಿದ ಶ್ರಮ ಇಲ್ಲಿ ಫಲ ಕೊಡಲು ಶುರುವಾಗುತ್ತದೆ. ಸಂಗಾತಿ ಕೇವಲ ಪ್ರೇಮಿಯಾಗಿರದೆ, ಜೀವನಪೂರ್ತಿ ಜೊತೆಯಾಗಿ ನಡೆಯುವ ಉತ್ತಮ ಸ್ನೇಹಿತನಾಗುತ್ತಾರೆ.


Click it and Unblock the Notifications
