ಲಘು ಹಾಸ್ಯ: ಕಾಗೆಗಳ ಟೀಮ್-ಸ್ಪಿರಿಟ್, ಗಾಯನ ಪ್ರಾಕ್ಟೀಸು

ಯೂನಿವರ್ಸಿಟಿ ವಿಯನ್ನಾದ ಸೈಂಟಿಸ್ಟ್ ಕ್ಲಾಡಿಯಾ ವಾಷರ್ ಮತ್ತು ಅವರ ಸಹೋದ್ಯೋಗಿಗಳು ಕಾಗೆಗಳ ಮೇಲೆ ತಮ್ಮ ಒಂದು ಸಂಶೋಧನೆಯೊಂದನ್ನು ನಡೆಸಿ, 'ಕಾಗೆಗಳಿಗೆ ಬಹಳ ಬುಧ್ಧಿ ಇದೆ. ಅವುಗಳೂ ಮನುಷ್ಯರ ಮೇಲೆ ತಮ್ಮದೇ ಒಂದು ರಿಸರ್ಸ್ ಮಾಡಿ, ಒಬ್ಬರೊಬ್ಬರ ಗಂಟಲನ್ನು ಚೆನ್ನಾಗಿ ಗುರ್ತುಹಿಡಿಯಬಲ್ಲವು ಮತ್ತು ಅವಕ್ಕೆ ಜಾಪಕ ಶಕ್ತಿಯೂ ಅಗಾಧವಾಗಿದೆ' ಎಂದು ಕಂಡುಹಿಡಿದಿದ್ದಾರೆ.

ಇದು ನನಗೆ ಹೊಸದೇನಲ್ಲ; ನನ್ನ ಅನುಭವದಿಂದಲೇ ನನಗೆ ಚೆನ್ನಾಗಿ ಪರಿಚಯವಾದ ವಿಷಯ.

ಬೇಸಿಗೆಯಲ್ಲಿ ಬೆಂದು ಹೋಗುವಾಗ ನನ್ನ ಹೆಂಡತಿ, ಅಯ್ಯೋ ಬಿಸಿಲು ಹಾಳಾಗಿ ಹೋಗ್ತಿದೆಯೆಲ್ಲಾ, ಸ್ವಲ್ಪ ಸಂಡಿಗೆ ಮಾಡ್ತೀನಿ ಅಂತ ಹೋಗಿದ್ದೇ ನನಗೆ ಶಾಪವಾಗಿ ವಕ್ಕರಿಸಿತು.

ಹೊರಗಡೆ ಒಣಗಲೀಂತ ಹಾಕಿದ ಸಂಡಿಗೆಗೆ ನಾನೇ ಕಾವಲುಗಾರ. ಒಂದೆರೆಡು ಕಾಗೆ ಹತ್ತಿರ ಬಂತು. ನಾನು 'ಹುಷ್, ಹುಷ್' ಅಂತ ಓಡಿಸಿದೆ. ಮತ್ತೆ ನನ್ನ ಹೆಂಡತಿ ಹತ್ತಿರ, 'ಮುಂಡೇವು... ಈ ಕಾಗೆಗಳ ಕಾಟ ಬಹಳ ಆಯ್ತು. ಕೋಲಿಟ್ಕೊಂಡು ಓಡಿಸ್ಬೇಕು. ಇಲ್ದಿದ್ರೆ ಎಲ್ಲಾ ಹಾಳು ಮಾಡುತ್ವೆ' ಎಂದು ಅವುಗಳನ್ನ ಅಟ್ಟಿಸಿಕೊಂಡು ಹೋದೆ.

ಅಯ್ಯೋ ಹೋಗ್ಲಿ ಬಿಡಿ.. ಅವುಗಳೇನು ಮಾಡುತ್ವೆ, ಪಾಪ! ಅಂದ್ಲು. ನಮ್ಮಿಬ್ಬರನ್ನೂ ಒಂದೆರೆಡು ಸಲ ನೋಡಿ ಏನೋ ಮಾತಾಡ್ಕೊಂಡು ಕಾಗೆಗಳು ಹಾರಿ ಹೋದ್ವು.

ಸಾಯಂಕಾಲ ನಾನು ನನ್ನ ಹೆಂಡತಿ ವಾಕಿಂಗ್ ಹೋಗುವಾಗ, ಕತ್ತಿನ ಹತ್ರ ಎನೋ ಬೆಚ್ಚಗಾದಂಗಾಯಿತು. 'ಏನ್ರಿ ಇದೂ! ಥೂ.. ಕಾಗೆ ಇಶ್ಶಿ ಮಾಡಿದೆ ನಿಮ್ಮ ಮೇಲೆ..... ಷರ್ಟಿನ ಕಾಲರ್‍ಗೂ ತಾಕಿದೆ' ಅಂದಳು ನನ್ನಾಕೆ.

ಅಲ್ಲೇ ಬಿದ್ದಿದ್ದ ಮರದ ಎಲೆ ತೊಗೊಂಡು ಕತ್ತೂ ಷರ್ಟು ಒರಸಿದಳು. ಮರದ ಮೇಲಿದ್ದೆರೆಡು ಕಾಗೆಗಳು ಗಹಗಹಸಿ ನಕ್ಕಂಗಾಯಿತು. ನನ್ನ ಹೊಸಾ ಬಿಳಿ ಶರ್ಟಿನ ಕಾಲರ್ ಮೇಲೆ ಕೂತಿದ್ದ ಕಾಗೆಗಳ ಸಿಗ್ನೇಚರ್ ಇಶ್ಶಿ ಹೋಗಲೇ ಇಲ್ಲ.

ಈ ಎಪಿಸೋಡ್ ಮರೆತು ಹೋಯಿತು. ಇದಾದ ಸ್ವಲ್ಪ ದಿನಕ್ಕೆ ರಾಮನವಮೀಲಿ ಮೈಸೂರಿನ ನಾಗರಾಜ್ ಮತ್ತು ಮಂಜುನಾಥರ ಪಿಟೀಲು ಕಛೇರಿಯಿತ್ತು. ಅಮೋಘವಾದ ಕಛೇರಿ. ನನಗೆ ಮೊದಲಿನಿಂದಲೂ ಸಂಗೀತವೆಂದರೆ ಪ್ರಾಣ; ಕಲಿಯೋದಕ್ಕೂ ಆಸೆ. ಮನೆಯ ಹತ್ತಿರವಿದ್ದ ಸಂಗೀತ ಕಲಿಸುವ ಸ್ಕೂಲ್‌ಗೆ ಸೇರ್ಕೊಂಡೆ

ಸಾ ಪಾ ಸ ಶುರುಮಾಡಿ, ಜಂಟಿ ವರಸೆಯಿಂದ ವರ್ಣಕ್ಕೆ ಬಂದೆ. ಮಲಹರಿಯಲ್ಲಿ 'ಲಂಬೋದರ ಲಕುಮಿಕರ' ಶುರು ಮಾಡಿದ್ರು. ಈ ಮದ್ಯೆ ನಮ್ಮ ಮೇಷ್ಟ್ರು ,ಪರವಾಗಿಲ್ಲ ನಿಮಗೆ ಸಂಗೀತದ ಗಂಧವಿದೆ, ಶ್ರದ್ಧೆಯಿಂದ ಕಲಿತರೆ ಸಂಗೀತ ಖಂಡಿತ ಬರುತ್ತೆ ಒಂದು ಒಳ್ಳೆ ವೈಯಲಿನ್ ತೊಗೊಳ್ಳಿ ಅಂತ ಹೇಳಿ ಅವರೇ ಅಂಗಡಿಗೆ ಬಂದು ಆರಿಸಿದರು.

ಮೂರು ಸಾವಿರ ಕೊಟ್ಟು ಮನೆಗೆ ಒಂದು ವೈಯಲಿನ್ ತಂದಿದ್ದಾಯಿತು. ಇನ್ನು ಮನೆಯಲ್ಲೇ ಪ್ರಾಕ್ಟಿಸ್ ಮಾಡಬಹುದು ಅಂತ ಅಂದ್ಕೊಂಡೆ.

ಮರು ದಿನ ನಾನು 'ಲಂಬೋದರ ' ಶುರುಮಾಡಿ, ' ಸರಿಮಾಗರಿ ಸರಿಗರಿಸ.'... ಅಂದು ನುಡಿಸುವಾಗ ಜೊತೆಗೆ , ಕಾ ಕಾ ಕಾ ಅಂತ ಹತ್ತು ಧ್ವನಿಗಳು ಸೇರ್ಕೊಂಡು. 'ಅಂಬಾಸುತ ಅಮರವಿನುತ' ಜೊತೆಗೆ ಕಿರ್ ಕಿರ್ ಕಿರ್ ಎಂದು ಅವುಗಳ ಕೋರಸ್.

ಅಷ್ಟು ಹೊತ್ತಿಗೆ ನಮ್ಮ ಓನರ್ ಮನೆಗೆ ಓಡ್ಬಂದ. ಅವನ್ಗೂ ನನಗೂ ಯಾವಾಗಲೂ ಅಷ್ಟಕ್ಕಷ್ಟೆ. ಕಾಗೆ ಬೆಳ್ಳಂಬೆಳಿಗ್ಗೆ ಒಟ್ಟಿಗೆ ಕೂಗಿದ್ರೆ ಅಪಶಕುನ. ನಿಮ್ಮ ವೈಯಲಿನ್ನಿಂದ ಅವುಗಳಿಗೆ ಬುಧ್ಧಿ ಭ್ರಮಣೆಯಾಗಿದೆ. ನೀವು ವೈಯಲಿನ್ ನಿಲ್ಸೋದು ಒಳ್ಳೇದು... ಇಲ್ದಿದ್ರೆ ಪೋಲೀಸ್ನವರ್‍ನ ಕರೀಬೇಕಾಗುತ್ತೆ, ಹಾಗೂ 'ಕ್ರೂಯಲ್ಟಿ ಟು ಅನಿಮಲ್ಸ್' ಸಂಸ್ಥೆ ಅವರಿಗೂ ಕಂಪ್ಲೇನ್ ಮಾಡ್ತೀನಿ ಎಂದು ಬೆದರಿಸ್ದ.

ನನ್ನ ಹೆಂಡ್ತೀ ಇದಕ್ಕೆ ಮೊದಲೇ ಎರಡು ಕಿವೀಗು ವಾಲೇತರಹ ಹತ್ತಿ ತುರುಕ್ಕೊಂಡಿದ್ದಳು. ನಾನು ವೈಯಲಿನ್ನ ಮೂಲೇಗೆಸ್ದು ಹೊರಗ್ಬಂದ್ರೆ ಕಾಗೆಗಳೆಲ್ಲಾ ಹೈಫೈಸ್ ಮಾಡೋಹಾಗೆ ಸೆಲಿಬ್ರೇಷನ್ ಮಾಡ್ತಿದ್ವು.

ಆವತ್ತು ರಾತ್ರಿಯೆಲ್ಲಾ ನಿದ್ದೆಯಿಲ್ಲ. ಬರೀಕೆಟ್ಟ ಕನಸುಗಳೇ..... ನಾನು ಚೌಡಯ್ಯ ಹಾಲ್ ನಲ್ಲಿ ವೈಯಲಿನ್ ಪರಫಾರ್ಮನ್ಸ್ ಕೊಡ್ತಾಇದ್ರೆ, ಆಡಿಯನ್ಸ್ ನಲ್ಲಿದ್ದ ಎಲ್ಲಾ - ಕಾಗೆಗಳು - ಕಾ ಕಾ ಕಾ ಅಂತ ಕೂಗೋ ಹಾಗೆ. ಬೆಚ್ಚಿಬಿದ್ದು ಎದ್ದೆ.

ಮುಂದೇನು ಮುಂದೇನು ಅಂತ ಯಡ್ಯೂರಪ್ಪನವರ ಹಾಗೆ ಯೋಚಿಸ್ದೆ ಆವತ್ತೇ ಡಿಸಿಷನ್ ತೊಗೊಂಡೆ.

ಇದಾದ ವಾರಕ್ಕೆ, ನಾನೇ ನನ್ನ ಹೆಂಡತಿಗೆ, 'ಈರುಳ್ಳಿ ಸಂಡಿಗೆ ಮಾಡು ಚೆನ್ನಾಗಿರುತ್ತೆ' ಅಂದೆ. ಅವಳಿಗಾಶ್ಚರ್ಯ. ಈರುಳ್ಳಿ ಅಂದ್ರೆ ಮೂಗು ತಿರುಗುಸ್ಕೊಳ್ಳೋವ್ನು ಏನಾಯ್ತಿವಿನಿಗೆ' ಅಂತ.

ಆವತ್ತು ನಾನೆ ಸ್ವತH ಸಂಡಿಗೆಯನ್ನು ಟರೇಸ್ ನಲ್ಲಿ ಒಣಗ್ಹಾಕಿ, ಕಾಗೆಗಳು ಬಂದಾಗ ಅವುಗಳಿಗೆ ಸುಲಿಭವಾಗಿ ಸಿಗುವ ಹಾಗೆ ಇನ್ನೊಂದು ತಟ್ಟೆಯಲ್ಲೂ ಹಾಕಿಟ್ಟೆ. ಅವುಗಳು ಸಂತೋಷವಾಗಿ ತಿಂದು ಕುಣಿದು ಅಲ್ಲಲ್ಲೇ ಇಶ್ಶಿ ಮಾಡಿ ಹಾರಾಡಿ ಹೋದವು.

ಆ ಸಂಜೆ ವಾಕಿಂಗ್ ಹೋದಾಗ ಕಾಗೆಗಳು ನಮ್ಮನ್ನ ಎಸ್ಕಾರ್ಟ್ ಮಾಡಿದ್ವು. ನನ್ನ ಷರ್ಟಗೇನೂ ಆಪತ್ತು ಬರಲಿಲ್ಲ. ಈಗ ಸುಖ ಶಾಂತಿ ನೆಮ್ಮದಿ ಹರೀತಾ ಇದೆ ನಮ್ಮನೇಲಿ. ಈಗ ನನಗೂ ಕಾಗೆ ಗಳ ಭಾಷೆ ಸ್ವಲ್ಪ ಸ್ವಲ್ಪ ಬರುತ್ತೆ.

ಮೊನ್ನೆ ಚಂದನ್ ಕುಮಾರ್ ಅವರ ಕೊಳಲು ಕಛೇರಿಗೆ ಹೋಗಿದ್ದೆ. ಈಗ ನನಗೆ ಕೊಳಲೂದಬೇಕಂತ ಆಸೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+